ದೈವ ನಿಂದಕರ ವಿರುದ್ಧ ಕಾನೂನು ಹೋರಾಟ: ಯುವ ತುಳುನಾಡು

Update: 2021-01-11 08:42 GMT

ಮಂಗಳೂರು, ಜ.11: ತುಳುನಾಡಿನ ದೈವಾರಾಧನೆಗಳು ತಮ್ಮದೇ ಆದ ಭವ್ಯ ಸಂಸ್ಕೃತಿ, ಆಚರಣೆಯನ್ನು ಹೊಂದಿದೆ. ಈ ಆಚರಣೆಯ ಮೂಲಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಿಂದನೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಯುವ ತುಳುನಾಡು ಕುಡ್ಲ ಸಂಘಟನೆ ಎಚ್ಚರಿಕೆ ನೀಡಿದೆ.

ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ರೋಶನ್ ರೆನಾಲ್ಡ್ ತುಳುನಾಡು ವ್ಯ ಸಂಸ್ಕೃತಿ, ಪರಂಪರೆಯ ಊರು. ದೈವರಾಧನೆ ಇಲ್ಲಿಯ ವಿಶಿಷ್ಟತೆಯಾಗಿದ್ದು ಕೆಲವರು ನಂಬಿಕೆಗೆ ಘಾಸಿ ಉಂಟು ಮಾಡುವ ರೀತಿಯಲ್ಲಿ ವಿಡಿಯೋವನ್ನು ಎಡಿಟ್ ಮಾಡಿ ಇನ್‌ಸ್ಟಾಗ್ರಾಂ, ಯೂಟ್ಯೂಬ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿರುವುದನ್ನು ವಿರೋಧಿಸುವುದಾಗಿ ಹೇಳಿದರು.

ಈ ಬಗ್ಗೆ ಈಗಾಗಲೇ ಅನೇಕ ಹಿರಿಯರು, ದೈವ ಭಕ್ತರು ಆಕ್ಷೇಪ ಎತ್ತಿದ್ದಾರೆ. ಈ ಹಿನ್ನಲೆಯಲ್ಲಿ ದೈವ ಸಾನಿಧ್ಯದಲ್ಲಿ ಫೋಟೋ, ವಿಡಿಯೋಗ್ರಫಿ ಮಾಡುವುದನ್ನು ಮತ್ತು ಮೊಬೈಲ್ ಚಿತ್ರೀಕರಣ ಸಂಪೂರ್ಣವಾಗಿ ನಿಯಂತ್ರಿಸಬೇಕಾಗಿದೆ. ಈ ಕುರಿತು ಯುವ ತುಳುನಾಡು ಸಂಘ ಕಾರ್ಯಪ್ರವೃತ್ತವಾಗಿದ್ದು, ದೇವಸ್ಥಾನ-ದೈವಸ್ಥಾನಗಳ ಆಡಳಿತ ಮಂಡಳಿಯನ್ನು ಭೇಟಿ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆಯೂ ದೊರೆಯುತ್ತಿದ್ದು, ಹೆಚ್ಚಿನ ದೈವಸ್ಥಾನಗಳಲ್ಲಿ ಫೋಟೋಗೆ ಅವಕಾಶ ನೀಡುತ್ತಿಲ್ಲ ಎಂದರು.

ದೈವರಾಧನೆ, ತುಳುನಾಡಿನ ವೈಶಿಷ್ಟ್ಯತೆಯ ಫೋಟೋ ಅಸಂಬದ್ಧವಾಗಿ ಎಡಿಟ್ ಮಾಡುವವರ ವಿರುದ್ಧ ಕಾನೂನು ಸಮರ ಮುಂದುವರಿಯಲಿದೆ. ಲೈಕ್, ಕಮೆಂಟ್, ಶೇರ್, ಸಬ್‌ಸ್ಕ್ರೈಬ್ ಮಾಡಿ ಮೂಲ ನಂಬಿಕೆಗೆ ಧಕ್ಕೆ ತರಬೇಡಿ. ಈ ಹಿಂದೆ ಮೂಲ ಸ್ವರೂಪ ತಿರುಚಿದ 72 ಮಂದಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಅವರನ್ನು ಮುಚ್ಚಳಿಕೆ ಬರೆದು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಇದು ಪುನರಾರ್ವನೆಯಾಗದಿರಲಿ, ಒಂದು ವೇಳೆ ನಮ್ಮ ಆಗ್ರಹವನ್ನು ನಿರ್ಲಕ್ಷಿಸಿ ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟರೆ ಕಾನೂನು ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾದೀತು. ಯುವ ತುಳುನಾಡು ಕುಡ್ಲ ಸಂಘಟನೆ ತುಳು ಲಿಪಿ ಕಲಿಯಲು ತರಬೇತಿ ನೀಡುತ್ತಿದೆ. ದೈವಸ್ಥಾನ-ದೇವಸ್ಥಾನಗಳ ನಾಮಲಕವನ್ನು ತುಳುವಿನಲ್ಲೇ ಹಾಕಲು ಜಾಗೃತಿ ಮೂಡಿಸಲಾಗುತ್ತಿದೆ. ಗಣ್ಯರ ಕಚೇರಿಯಲ್ಲೂ ಅವರ ಹೆಸರನ್ನು ತುಳು ಲಿಪಿಯಲ್ಲೇ ಹಾಕಲು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಯುವ ತುಳುನಾಡು ಕುಡ್ಲದ ಗೌರವಾಧ್ಯಕ್ಷ ಯಾದವ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರಿತೇಶ್ ಡಿಸೋಜ, ಪ್ರಧಾನ ಸಂಚಾಲಕ ಸನತ್, ಕೋಶಾಧಿಕಾರಿ ರಕ್ಷಣ್ ಪೂಜಾರಿ, ಜತೆ ಕಾರ್ಯದರ್ಶಿ ರಮೇಶ್ ಕುಲಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News