ಗುರುಪುರ ಗುಡ್ಡೆ ಕುಸಿತ ಘಟನೆ : ಜಿಲ್ಲಾಡಳಿತಕ್ಕೆ ಮರು ಮನವಿ, ಪ್ರತಿಭಟನೆ ಎಚ್ಚರಿಕೆ

Update: 2021-01-11 11:06 GMT

ಮಂಗಳೂರು, ಜ.11: ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಗ್ರಾಮದ ಸರ್ವೆ ನಂಬ್ರ 133ರಲ್ಲಿ 7 ತಿಂಗಳ ಹಿಂದೆ ಸಂಭವಿ ಸಿದ ಭೂಕುಸಿತದಿಂದಾಗಿ ಮನೆಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಗೆ ತಲುಪಿದ 130 ಕುಟುಂಬಸ್ಥರಿಗೆ ಶೀಘ್ರ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ ಮತ್ತು ಗುರುಪುರ ಗ್ರಾಪಂ ನೂತನ ಸದಸ್ಯ ಜಿಎಂ ಉದಯ ಭಟ್ ನೇತೃತ್ವದ ನಿಯೋಗವು ಸೋಮವಾರ ಗುರುಪುರ ಕೈಕಂಬದ ನಾಡ ಕಚೇರಿಯಲ್ಲಿ ಉಪತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತು.

ಈ ಹಿಂದೆ ನೀಡಲಾದ ಮನವಿಗೆ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ತಜ್ಞರ ತಂಡದಿಂದ ಮಠದಗುಡ್ಡೆ ಸೈಟ್ ಪರಿಸರದ ಮಣ್ಣು ಪರೀಕ್ಷೆ ನಡೆಸಿ ನೈಜ ವರದಿ ಪಡೆದು ಅಲ್ಲಿ ವಾಸಕ್ಕೆ ಯೋಗ್ಯವಿರುವ ಮನೆಗಳನ್ನು ಗುರುತಿಸಿ, ಉಳಿದ ಅಪಾಯದಲ್ಲಿರುವ ಅಥವಾ ಭೂಕುಸಿತಕ್ಕೆ ಒಳಗಾಗಬಹುದಾದ ಪ್ರದೇಶದ ಮನೆಗಳ ನಿವಾಸಿಗರಿಗೆ ಶೀಘ್ರ ಪುನರ್ವಸತಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಾಪಂ ಸದಸ್ಯ ಸಚಿನ್ ಅಡಪ ಆಗ್ರಹಿಸಿದರು.

ಎರಡನೇ ಬಾರಿ ಸಲ್ಲಿಸಲಾದ ಈ ಮನವಿಗೆ ಜನವರಿಯೊಳಗೆ ಸ್ಪಂದಿಸದಿದ್ದರೆ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಸಂತ್ರಸ್ತ ಕುಟುಂಬಗಳ ಸದಸ್ಯರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ನಿಯೋಗ ಎಚ್ಚರಿಕೆ ನೀಡಿದೆ.

ಮುಗಿಯದ ಸಂತ್ರಸ್ತರ ಗೋಳು !

2020ರ ಜುಲೈಯಲ್ಲಿ ಸಂಭವಿಸಿದ ಭೂಕುಸಿತದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಸರಕಾರ ಈವರೆಗೆ ತಲಾ 10,000 ರೂ. ಪರಿಹಾರ ನೀಡಿದೆ. ಗುಡ್ಡದ ಸುಮಾರು 71 ಮನೆಯವರು ಬೇರೆಡೆಗೆ ಸ್ಥಳಾಂತರಗೊಂಡು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಎರಡು ತಿಂಗಳ ಹಿಂದೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೆಟಿ ನೀಡಿ ‘ಸಂತ್ರಸ್ತರಿಗೆ ಗಂಜಿಮಠ ಗ್ರಾಪಂ ವ್ಯಾಪ್ತಿಯ ಸರಕಾರಿ ಜಾಗದಲ್ಲಿ ನಿವೇಶನ ಗುರುತಿಸಿದ್ದೇವೆ. ಶೀಘ್ರ ಮನೆ ನಿರ್ಮಿಸಿ ಕೊಡಲಾಗುವುದು. ಬಾಡಿಗೆ ಮನೆಯಲ್ಲಿರುವವರಿಗೆ ಆಯಾ ತಿಂಗಳಲ್ಲಿ ತಿಂಗಳ ಬಾಡಿಗೆ ಬರಲಿದೆ’ ಎಂದು ಭರವಸೆ ನೀಡಿದ್ದರು. ಆದರೆ ತಹಶೀಲ್ದಾರರ ಉದಾಸೀನತೆಯಿಂದ ಇದುವರೆಗೆ ಡಿಸಿ ಆದೇಶ ಪಾಲನೆಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಗುಡ್ಡ ಕುಸಿತದಿಂದ ಮನೆ ಹಾಗೂ ರಿಕ್ಷಾ ಕಳೆದುಕೊಂಡಿರುವ ಮುಹಮ್ಮದ್ ಯಾನೆ ಮಾಮು ಮಾಧ್ಯಮದೊಂದಿಗೆ ಮಾತನಾಡಿ ‘ನಾನೀಗ ಗುರುಪುರದಲ್ಲಿ 4,500 ರೂ. ಬಾಡಿಗೆ ಮನೆಯಲ್ಲಿದ್ದೇನೆ. ಬಾಡಿಗೆ ಹೊರತಾಗಿ ತಿಂಗಳಿಗೆ 1,800 ರೂ. ವಿದ್ಯುತ್ ಬಿಲ್ ಬರುತ್ತಿದೆ. ಬಾಡಿಗೆ ಹಾಗೂ ನಿವೇಶನಕ್ಕಾಗಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕಳೆದ ಏಳು ತಿಂಗಳಿಂದ ಗುರುಪುರದಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. 10,000 ರೂ. ಪರಿಹಾರ ಧನದ ಹೊರತು ಈವರೆಗೆ ಚಿಕ್ಕಾಸು ಸಿಕ್ಕಿಲ್ಲ. ನಾನಿರುವ ಬಾಡಿಗೆ ಮನೆಗೆ ತಿಂಗಳಿಗೆ 7,000 ರೂ. ಮತ್ತು 1,000 ರೂ. ವಿದ್ಯುತ್ ಬಿಲ್ ನೀಡುತ್ತಿದ್ದೇನೆ. ಕೆಲಸವಿಲ್ಲದ ಕಾರಣ ಬದುಕು ಸಾಗಿಸುವುದು ಕಷ್ಟವಾಗಿದೆ’ ಎಂದು ಕೈಕಂಬದ ಮರ್ಕಸ್ ಗುಡ್ಡೆಯಲ್ಲಿ ಬಾಡಿಗೆ ಮನೆಯಲ್ಲಿರುವ ಇಸ್ಮಾಯಿಲ್ ಗುರುಪುರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News