ಮಂಗಳೂರಲ್ಲಿ ಮತ್ತೆ 7 ಕಾಗೆಗಳ ಕಳೇಬರ ಪತ್ತೆ: ಹಕ್ಕಿಜ್ವರದ ಭೀತಿ

Update: 2021-01-11 15:01 GMT

ಮಂಗಳೂರು, ಜ.11: ಇಲ್ಲಿನ ಮಂಜನಾಡಿಯಲ್ಲಿ ಐದು ಕಾಗೆಗಳು ಸತ್ತು ಹಕ್ಕಿಜ್ವರದ ಆತಂಕ ಎದ್ದು ಬಳಿಕ ನೆಗೆಟಿವ್ ವರದಿ ಬಂದ ಬೆನ್ನಲ್ಲೇ ನಗರದ ಹೊರವಲಯದಲ್ಲಿ ಏಳು ಕಾಗೆಗಳ ಕಳೇಬರ ಪತ್ತೆಯಾದ ಬಗ್ಗೆ ಸೋಮವಾರ ವರದಿಯಾಗಿದೆ.

ಪಚ್ಚನಾಡಿಯಲ್ಲಿ ಮೂರು, ಶಕ್ತಿನಗರದಲ್ಲಿ ಎರಡು, ಕುಪ್ಪೆಪದವಿನಲ್ಲೂ ಎರಡು ಕಾಗೆಗಳು ಸತ್ತು ಬಿದ್ದಿರುವುದು ಕಂಡುಬಂದಿದೆ.

ಪಚ್ಚನಾಡಿ ಡಂಪಿಂಗ್ ಯಾರ್ಡ್ ಬಳಿ ಹಾಗೂ ಶಕ್ತಿನಗರದ ಹೌಸಿಂಗ್ ಕಾಲನಿ ಬಳಿ, ಗುರುಪುರ ಸಮೀಪದ ಕುಪ್ಪೆಪದವು ಶಾಲೆ ಬಳಿ ರಸ್ತೆ ಬದಿಯಲ್ಲಿ ಈ ಕಾಗೆಗಳು ಸತ್ತು ಬಿದ್ದಿರುವುದು ಸೋಮವಾರ ಕಂಡುಬಂದಿತ್ತು. ತಕ್ಷಣ ಪಶು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಕಾಗೆಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷಾ ವರದಿಯಲ್ಲಿ ಹಕ್ಕಿಜ್ವರದ ಲಕ್ಷಣವಾದ ಆಂತರಿಕ ರಕ್ತಸ್ರಾವ ಇರುವುದು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

ಶಕ್ತಿನಗರದ ಹೌಸಿಂಗ್ ಕಾಲನಿಯಲ್ಲಿ ಎರಡು ಕಾಗೆಗಳು ಮೃತಪಟ್ಟಿವೆ. ಕಾಗೆಗಳ ಮಾದರಿಯಲ್ಲಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬರಲು ಮೂರ್ನಾಲ್ಕು ದಿನಗಳು ಬೇಕಾಗಬಹುದು. 3ರಿಂದ 5 ದಿನದೊಳಗೆ ವರದಿ ಬರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News