ಬಾರಕೂರು: ಕೃಷಿ ಸಂಸ್ಕೃತಿಗೆ ಹೊಸ ಪರಿಕಲ್ಪನೆ ನೀಡಿದ ಮದುವೆ ದಿಬ್ಬಣ

Update: 2021-01-14 12:16 GMT

ಉಡುಪಿ, ಜ11: ವಿವಾದಾತ್ಮಕ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ರಾಷ್ಟ್ರದ ರಾಜಧಾನಿಯಲ್ಲಿ ನಡೆಸುತ್ತಿರುವ ಶಾಂತಿಯುತ ಧರಣಿ ಕೃಷಿ, ಕೃಷಿಕ ಹಾಗೂ ಕೃಷಿಕನ ಬದುಕನ್ನು ಮತ್ತೆ ದೇಶದ ಜನರ ಮನದಂಗಳಕ್ಕೆ ತಂದು ನಿಲ್ಲಿಸಿವೆ.

ಕೃಷಿ ಇಂದು ಮತ್ತೆ ಚರ್ಚೆಯ ವಿಷಯವಾಗಿದೆ. ಕೃಷಿ ಬದುಕಿನ ಸಂಕಷ್ಟಗಳು, ಕೃಷಿ ಸಂಸ್ಕೃತಿ ಕುರಿತಂತೆ ಹೊಸ ಹೊಸ ಚಿಂತನೆಗಳು ದೇಶಾದ್ಯಂತ ನಡೆಯಲು ಈ ಚಳುವಳಿ ಪ್ರೇರೇಪಣೆ ನೀಡಿದೆ. ಇದರ ಹಿನ್ನೆಲೆಯಲ್ಲಿ ಬಾರಕೂರಿನ ಕೃಷಿಕ ಕುಟುಂಬವೊಂದು ಮದುವೆಯಲ್ಲೂ ಕೃಷಿ ಸಂಸ್ಕೃತಿಯ ಪರಿಕಲ್ಪನೆಯನ್ನು ಹೊಸ ರೀತಿಯಲ್ಲಿ ಜಾರಿಗೊಳಿಸಿ ಎಲ್ಲರ ಗಮನ ಸೆಳೆದಿದೆ.

ಕಳೆದ ಶುಕ್ರವಾರ ಬಾರಕೂರಿನ ಶಿವಗಿರಿ ಕ್ಷೇತ್ರದ ಗುರುದೇವ ಭವನದಲ್ಲಿ ನಡೆದ ಎರಡು ಜೋಡಿಯ ಮದುವೆ ಇಂಥ ಒಂದು ಪರಿಕಲ್ಪನೆಗೆ ಸಾಕ್ಷಿ ಯಾಯಿತು. ಬಾರಕೂರಿನ ಕಾಳಿಕಾಂಬಾ ದೇವಸ್ಥಾನ ಸಮೀಪದ ಕೃಷಿಕ ಕುಟುಂಬದ ಇಬ್ಬರು ಯುವಕರ ಮದುವೆ ದಿಬ್ಬಣಕ್ಕೆ ಕೃಷಿಗೆ ಬಳಸುವ ಹಚ್ಚ ಹೊಸ ಟ್ರಾಕ್ಟರ್ ಬಳಸಿದ್ದು, ಮದುಮಕ್ಕಳ ಟ್ರಾಕ್ಟರ್ ಮೆರವಣಿಗೆಯನ್ನು ಅಚ್ಚರಿಯಿಂದ ವೀಕ್ಷಿಸಿದ ಊರಿನ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಬಾರಕೂರಿನ ದಿ.ಜಾರು ಪೂಜಾರಿ ಅವರು ದೊಡ್ಡ ಕೃಷಿಕರು. ಈ ಮನೆಯಲ್ಲಿ ಭತ್ತದ ತಿರಿ ಮಾಡುವ ಹಳೆ ಪದ್ಧತಿ, ಪರಂಪರೆ ಈಗಲೂ ಜೀವಂತವಿದೆ. ಇಂಥ ಕುಟುಂಬದ ಮದುವೆ ದಿಬ್ಬಣದ ಮೆರವಣಿಗೆ ಕೃಷಿ ಪದ್ಧತಿಯ ಹೊಸ ಪರಿಕಲ್ಪನೆಯೊಂದಿಗೆ ನಡೆಯಿತು.

 ಎರಡೂ ಜೋಡಿ ಮದುಮಕ್ಕಳನ್ನು ಹೊಸದಾಗಿ ಖರೀದಿಸಿದ ಟ್ರಾಕ್ಟರ್ನಲ್ಲಿ ಕೂರಿಸಿ ಕಲ್ಯಾಣ ಮಂಟಪಕ್ಕೆ ಕರೆ ತರಲಾಯಿತು. ಐಷಾರಾಮಿ ವಾಹನಗಳಲ್ಲಿ, ಕುದುರೆ ಸಾರೋಟುಗಳಲ್ಲಿ ಮದುಮಕ್ಕಳು ಹೋಗುವುದನ್ನು ನೋಡಿದ್ದ, ಕೇಳಿದ್ದ ಬಾರಕೂರಿನ ಜನತೆ ಐತಿಹಾಸಿಕ ಕಲ್ಲುಚಪ್ಪರದ ಎದುರಿನಿಂದ ಟ್ರಾಕ್ಟರ್‌ನಲ್ಲಿ ತೆರಳುವುದನ್ನು ಅಚ್ಚರಿಯ ಕಣ್ಣುಗಳಿಂದ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಮೂಲಕ ಕೃಷಿ ಸಂಸ್ಕೃತಿ ಹೊಸ ಪರಿಕಲ್ಪನೆ ಮೂಲಕ ಬಾರಕೂರಿನಲ್ಲಿ ಸಾಕಾರಗೊಂಡಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News