​ಕೊರೋನ ಲಸಿಕೆ ಅಪಪ್ರಚಾರದ ಹಿಂದೆ ಷಡ್ಯಂತ್ರ: ಸಿ.ಟಿ.ರವಿ

Update: 2021-01-12 14:02 GMT

ಉಡುಪಿ, ಜ.12: ಕೊರೋನ ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿರು ವುದು ದುರ್ದೈವ. ನಮ್ಮ ದೇಶದಲ್ಲಿ ತಯಾರಾದ ಔಷಧಿಯ ಬಗ್ಗೆ ಅಪಪ್ರಚಾರ ಮಾಡುವುದರ ಹಿಂದೆ ಷಡ್ಯಂತ್ರ ಅಡಗಿದೆ. ಅಪಪ್ರಚಾರದಲ್ಲಿ ಕೆಲ ಪಕ್ಷಗಳು ತೊಡಗಿಸಿಕೊಂಡಿವೆ. ಇವರು ತಾವು ಮಾಡೋದಿಲ್ಲ ಮಾಡುವವರಿಗೆ ಬಿಡುವು ದಿಲ್ಲ. ಹೀಗೆ ಮಾಡುವ ಪಕ್ಷವನ್ನು ಜನ ದೇಶದ ರಾಜಕಾರಣದಿಂದ ಅಳಿಸಿ ಹಾಕಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಲಸಿಕೆ ಇಟಲಿ ಅಥವಾ ಚೀನಾದಿಂದ ಬಂದರೆ ಮಾತ್ರ ಒಳ್ಳೆದು ಎಂದು ಹೇಳುತ್ತಾರೆ. ವಿರೋಧಿಗಳಿಗೆ ನಮ್ಮ ದೇಶದಲ್ಲಿ ತಯಾರಾದ ಲಸಿಕೆಯ ಬಗ್ಗೆ ನಂಬಿಕೆ ಇಲ್ಲ. ಆದರೆ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಈ ದೇಶದ ಜನರ ಓಟು ಬೇಕು. ದೇಶದಲ್ಲಿ ತಯಾರಾದ ಔಷಧಿ ಬಗ್ಗೆ ನಂಬಿಕೆ ಇಲ್ಲ. ಇವರಿಗೆ ನಮ್ಮ ದೇಶದ ವಿಜ್ಞಾನಿಗಳ ಬಗ್ಗೆಯೂ ಗೌರವ ಇದ್ದಂತಿಲ್ಲ ಎಂದರು.

ನಾಳೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಅಧಿಕೃತವಾಗಿ ಮುಖ್ಯಮಂತ್ರಿ ಗಳು ಇನ್ನಷ್ಟೇ ಹೇಳಬೇಕು. ಯೋಗ್ಯತೆ ಇರುವವರು ನಮ್ಮ ಪಕ್ಷದಲ್ಲಿ ಬಹಳ ಜನ ಇದ್ದಾರೆ. ಆದರೆ ಮಂತ್ರಿಯಾಗುವ ಯೋಗ ಯಾರಿಗಿದೆ ಎಂಬುದು ನಾಳೆ ನೋಡೋಣ ಎಂದು ಅವರು ಹೇಳಿದರು.

ಸಮರ್ಪಕ ಸಚಿವ ಸಂಪುಟ ಅಸ್ಥಿತ್ವಕ್ಕೆ

ಸಚಿವ ಸಂಪುಟ ವಿಸ್ತರಣೆಯು ಮುಖ್ಯಮಂತ್ರಿಗಳ ಪರಮಾಧಿಕಾರ ಆಗಿದೆ. ಮುಖ್ಯಮಂತ್ರಿಗಳು ಪರಮಾಧಿಕಾರ ಚಲಾಯಿಸಿ, ಅತ್ಯಂತ ಸಮರ್ಪಕವಾದ ಸಚಿವ ಸಂಪುಟ ಅಸ್ಥಿತ್ವಕ್ಕೆ ತರುತ್ತಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ. ಕೇಂದ್ರ ನಾಯಕರ ಜೊತೆ ಮಾತನಾಡಿ ಸಚಿವ ಸಂಪುಟಕ್ಕೆ ಅಂತಿಮ ರೂಪ ನೀಡಲಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News