ಹೊಟೇಲ್ ಉದ್ಯಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಆರ್.ನಾರಾಯಣ ರಾವ್ ನಿಧನ
ಕುಂದಾಪುರ, ಜ.12: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಕರ್ನಾಟಕ ಹೊಟೇಲ್ ಮತ್ತು ಉಪಾ ಹಾರ ಮಂದಿರಗಳ ಸಂಘದ ಮಾಜಿ ಅಧ್ಯಕ್ಷರಾದ ಖ್ಯಾತ ಹೊಟೇಲೋದ್ಯಮಿ ಕೋಟೇಶ್ವರ ಸಮೀಪದ ನೇರಂಬಳ್ಳಿಯ ಎನ್.ಆರ್. ನಾರಾಯಣ ಸ್ವಾಮಿ (94) ಮಂಗಳವಾರ ತಮ್ಮ ಬೆಂಗಳೂರು ನಿವಾಸದಲ್ಲಿ ನಿಧನರಾದರು.
ಕುಂದಾಪುರ ತಾಲೂಕಿನ ನೇರಂಬಳ್ಳಿ ಗ್ರಾಮದಲ್ಲಿ ಹುಟ್ಟಿ, ಕೋಟೇಶ್ವರದಲ್ಲಿ ವಿದ್ಯಾಭ್ಯಾಸ ಪಡೆದು ಬೆಂಗಳೂರಿನಲ್ಲಿ ಹೊಟೇಲ್ ಗಳನ್ನು ನಡೆಸಿ ಯಶಸ್ವಿ ಉದ್ಯಮಿ ಎನಿಸಿಕೊಂಡವರು. ಹೊಟೇಲ್ ದ್ವಾರಕಾ ಸಹಿತ ಪ್ರಸಿದ್ಧ ಹೊಟೇಲ್‌ಗಳನ್ನು ಸ್ಥಾಪಿಸಿ, ಕೋಟೇಶ್ವರ ಮಾಗಣೆಯವರೂ ಉದ್ಯಮದಲ್ಲಿ ಮುನ್ನೆಯಲು ಮಾರ್ಗದರ್ಶನ ಮಾಡಿದ್ದರು.
ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಾರಾಯಣ ರಾವ್, ದಾನಿಗಳಾಗಿಯೂ ಊರಿನ ಅಭಿವೃದ್ಧಿಗೆ ನೆರವು ನೀಡುತಿದ್ದರು. ಕುಂದಾಪುರ ಎನ್.ಆರ್.ನಂದಿನಿ ಹೊಟೇಲ್‌ನ ಮಾಲಕ ಎನ್.ರಾಘವೇಂದ್ರ ರಾವ್ ಹಾಗೂ ಬೆಂಗಳೂರಿನ ಹೊಟೇಲ್ ಉದ್ಯಮಿ ಎನ್.ಶ್ರೀನಿವಾಸ ರಾವ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅವರು ಅಗಲಿದ್ದಾರೆ.