ರಕ್ತದ ಕೊರತೆ ನೀಗಿಸಲು ಸಹಕಾರ ಅಗತ್ಯ: ಡಾ. ಕೆ.ವಿ. ರಾಜೇಂದ್ರ

Update: 2021-01-13 15:58 GMT

ಮಂಗಳೂರು, ಜ.13: ದ.ಕ. ಜಿಲ್ಲೆಯಲ್ಲಿ ಕೋವಿಡ್ ಬಳಿಕ ರಕ್ತ ಸಂಗ್ರಹದಲ್ಲಿ ಕೊಂಚ ಇಳಿಮುಖವಾಗಿದ್ದು, ಆ ಕೊರತೆಯನ್ನು ನೀಗಿಸುವಲ್ಲಿ ಸಾರ್ವಜನಿಕರ ಸಹಕಾರ ಮೂಲಕ ರೆಡ್‌ಕ್ರಾಸ್ ಕಾರ್ಯಪ್ರವೃತ್ತವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಹೇಳಿದರು.

ಭಾರತೀಯ ರೆಡ್‌ಕ್ರಾಸ್‌ನ ದ.ಕ. ಜಿಲ್ಲಾ ಘಟಕ ಮತ್ತು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಕ್ತ ಸಂಗ್ರಹ ಅಭಿಯಾನಕ್ಕೆ ಅವರು ಇಂದು ನಗರದ ಪ್ರೆಸ್‌ಕ್ಲಬ್ ಬಳಿ ರೆಡ್‌ಕ್ರಾಸ್‌ನ ಮೊಬೈಲ್ ವಾಹನದ ಎದುರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ರೆಡ್‌ಕ್ರಾಸ್ ಕೋವಿಡ್‌ನ ಮೊದಲು, ಕೋವಿಡ್ ಲಾಕ್‌ಡೌನ್ ಹಾಗೂ ಬಳಿಕವೂ ಸಮಾಜಮುಖಿಯಾದ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ರೆಡ್‌ಕ್ರಾಸ್‌ನಿಂದ ರಕ್ತ ಸಂಗ್ರಹದ ಪ್ರಮುಖ ಜವಾಬ್ಧಾರಿಯನ್ನು ನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ರೋಗಿಗಳಿಗೆ ರಕ್ತದ ಕೊರತೆ ಆಗದಂತೆ ಗಮನ ಹರಿಸಿದೆ ಎಂದರು.

ಮಧ್ಯಾಹ್ನದವರೆಗೆ 17 ಯುನಿಟ್ ಬ್ಲಡ್ ಸಂಗ್ರಹವನ್ನು ಮಾಡಲಾಯಿತು. ಏಕಕಾಲದಲ್ಲಿ ರೆಡ್‌ಕ್ರಾಸ್‌ನ ಮೊಬೈಲ್ ವಾಹನದಲ್ಲಿ 4 ಮಂದಿಯಿಂದ ರಕ್ತ ಸಂಗ್ರಹ ಮಾಡಬಹುದಾಗಿದೆ.

ಈ ಸಂದರ್ಭ ರೆಡ್‌ಕ್ರಾಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ, ಡಾ. ಜೆ.ಎನ್. ಭಟ್, ರೆಡ್‌ಕ್ರಾಸ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ. ರವೀಂದ್ರನಾಥ್, ರವೀಂದ್ರ ಶೆಟ್ಟಿ, ಯತೀಶ್ ಬೈಕಂಪಾಡಿ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕಾರ್ಯಕಾರಿ ಸಮಿತಿ ಸದಸ್ಯರಾದ ಪುಷ್ಪರಾಜ್ ಬಿ.ಎನ್., ಭಾಸ್ಕರ ರೈ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News