ಗುಜ್ಜಾಡಿ: ರಸ್ತೆ ಅಪಘಾತಕ್ಕೆ ಪತ್ರಿಕಾ ವಿತರಕ ಬಲಿ
ಗಂಗೊಳ್ಳಿ, ಜ.14: ಗಂಗೊಳ್ಳಿ ಸಮೀಪದ ಗುಜ್ಜಾಡಿಯಲ್ಲಿ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಪತ್ರಿಕಾ ವಿತರಕರೊಬ್ಬರು ಮೃತಪಟ್ಟ ಘಟನೆ ಘಟನೆ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಗುಜ್ಜಾಡಿ ಬಸ್ ನಿಲ್ದಾಣ ಸಮೀಪ ನಡೆದಿದೆ.
ಗುಜ್ಜಾಡಿಯ ನಿವಾಸಿ ಅಶೋಕ್ ಕೊಡಂಚ(75) ಮೃತಪಟ್ಟವರು. ಇವರು ಸುಮಾರು 10 ವರ್ಷಗಳಿಗೂ ಹೆಚ್ಚು ಕಾಲದಿಂದ ಪತ್ರಿಕಾ ವಿತರಕರಾಗಿದ್ದು ಜತೆಗೆ, ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ಬಳಿ ಸಣ್ಣ ಉದ್ಯಮ ನಡೆಸುತ್ತಿದ್ದರು. ಬುಧವಾರ ರಾತ್ರಿ ಅಂಗಡಿ ಮುಚ್ಚಿ ಗುಜ್ಜಾಡಿಯಲ್ಲಿರುವ ಬಸ್ ನಿಲ್ದಾಣ ಬಳಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆ ಕಡೆಯ ರಸ್ತೆಗೆ ತಿರುಗುತ್ತಿದ್ದ ವೇಳೆ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಅಶೋಕ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದರೆನ್ನಲಾಗಿದೆ.
ಪತ್ರಿಕೆ ವಿತರಕರಾಗಿದ್ದಲ್ಲದೆ, ಗುಜ್ಜಾಡಿಯ ಕಲ್ಪತರು ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸುಮಾರು 25 ವರ್ಷಗಳಿಗೂ ಹೆಚ್ಚು ಕಾಲದಿಂದ ನಿರ್ದೇಶಕರಾಗಿದ್ದ ಅಶೋಕ್ ಕೊಡಂಚ ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಅಪಘಾತಕ್ಕೀಡಾದ ಬೈಕ್ ಸವಾರ ಸಾಹಿಲ್ ಎಂಬವರೂ ಗಾಯಗೊಂಡಿದ್ದಾರೆ.