ಮಂಗಳೂರು ವಿವಿ: ಚುರುಕುಗೊಳ್ಳದ ಬ್ಯಾರಿ ಅಧ್ಯಯನ ಪೀಠ
ಮಂಗಳೂರು: ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾನಿಲ ಯದಲ್ಲಿ ‘ಬ್ಯಾರಿ ಅಧ್ಯಯನ ಪೀಠ’ ಸ್ಥಾಪಿಸಲ್ಪಟ್ಟು ಫೆ.28ಕ್ಕೆ ಎರಡು ವರ್ಷ ಪೂರ್ತಿಯಾಗಿದೆ. ಆದರೆ ಅಧ್ಯಯನ ಪೀಠವು ಇನ್ನೂ ತನ್ನ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಿಲ್ಲ ಎಂಬ ಮಾತು ಬ್ಯಾರಿ ವಲಯದಲ್ಲಿ ಕೇಳಿ ಬರುತ್ತಿದೆ.
2019ರ ಫೆ.28ರಂದು ಅಂದಿನ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠವನ್ನು ಉದ್ಘಾಟಿಸಿ, ವಿವಿಯ ಅಧೀನದಲ್ಲಿರುವ ಎಲ್ಲಾ ಪೀಠಗಳನ್ನೂ ಒಂದೇ ಸೂರಿನಡಿಗೆ ತರುವ ಉದ್ದೇಶವಿದೆ ಎಂದಿದ್ದರು. ಆದರೆ ಬ್ಯಾರಿ ಅಧ್ಯಯನ ಪೀಠ ಉದ್ಘಾಟನೆಗೊಂಡು ಎರಡು ವರ್ಷವಾದರೂ ಕೂಡ ಪೀಠಕ್ಕೆ ಮೂಲಭೂತ ಸೌಕರ್ಯವನ್ನೇ ಕಲ್ಪಿಸಿಲ್ಲ. ಅಂದರೆ ಪೀಠಕ್ಕೆ ಪ್ರತ್ಯೇಕ ಕೊಠಡಿ ಇಲ್ಲ. ಇಬ್ಬರು ಸಂಶೋಧನಾ ಸಹಾಯಕರು, ಒಬ್ಬ ಕಚೇರಿ ಸಹಾಯಕ, ಒಬ್ಬ ಜವಾನನ ನೇಮಕಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದರೂ ಸಿಬ್ಬಂದಿಯ ನೇಮಕ ಆಗಿಲ್ಲ. ಯಾಕೆಂದರೆ ಇನ್ನೂ ಸರಕಾರದಿಂದ ಅನುಮೋದನೆ ಸಿಕ್ಕಿಲ್ಲ. ಈ ಮಧ್ಯೆ ಪೀಠಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಾದ ಮೇಜು, ಕುರ್ಚಿಯೂ ಇಲ್ಲ. ಕಂಪ್ಯೂಟರ್ ಇಲ್ಲ. ದಾಖಲೆಗಳನ್ನು ಜೋಡಿಸಿಡಲು ಕಪಾಟು ಇಲ್ಲ. ಅಷ್ಟೇ ಯಾಕೆ, ‘ಬ್ಯಾರಿ ಅಧ್ಯಯನ ಪೀಠ’ ಎಂಬ ನಾಮಫಲಕ ಕೂಡ ಹಾಕಿಲ್ಲ. ಹೀಗೆ ಇಲ್ಲದರ ಮಧ್ಯೆಯೇ ‘ಬ್ಯಾರಿ ಅಧ್ಯಯನ ಪೀಠ’ ತನ್ನ ಅಸ್ತಿತ್ವ ತೋರಿಸಲು ಹೆಣಗಾಡುತ್ತಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪಿಸುವುದಾಗಿ ಘೋಷಿಸಿದ್ದರು. ಅಲ್ಲದೆ 2017ರ ಮಾರ್ಚ್ 15ರಂದು ಮಂಡಿಸಿದ್ದ ಬಜೆಟ್‌ನಲ್ಲಿ ‘ಬ್ಯಾರಿ ಅಧ್ಯಯನ ಪೀಠ’ಕ್ಕೆ 2 ಕೋ.ರೂ. ಕಾಯ್ದಿರಿಸಿದ್ದರು. ಆ ಪೈಕಿ 1 ಕೋ.ರೂ. ಮಂಜೂರು ಕೂಡ ಆಗಿತ್ತು. ಆದರೆ ಬಿಡುಗಡೆಗೊಂಡದ್ದು ಕೇವಲ 41.12 ಲಕ್ಷ ರೂ. ಮಾತ್ರ. ಈ ಹಣವನ್ನು ಬ್ಯಾಂಕ್‌ನಲ್ಲಿ ಜಮೆ ಮಾಡಲಾಗಿದ್ದು, ಅದರ ಬಡ್ಡಿ ಹಣದಲ್ಲಿ ಸಿಬ್ಬಂದಿ ವೇತನ ಮತ್ತು ಕಾರ್ಯಕ್ರಮ ಆಯೋಜಿಸಬೇಕಾಗುತ್ತದೆ. ಆದರೆ ಪೀಠಕ್ಕೆ ಸಿಬ್ಬಂದಿಯೂ ಇಲ್ಲ, ಪೀಠದಿಂದ ಕಾರ್ಯಕ್ರಮ-ಯೋಜನೆಯೂ ಇಲ್ಲ.
ಅಧ್ಯಯನ ಪೀಠಕ್ಕೆ ಮಂಗಳೂರು ವಿವಿಯ ಕುಲಪತಿಯ ಅಧ್ಯಕ್ಷತೆಯಲ್ಲಿ ಕುಲಸಚಿವರ ಸಹಿತ ಎಂ.ಅಹ್ಮದ್ ಬಾವ ಪಡೀಲ್, ಮುಹಮ್ಮದ್ ಕುಳಾಯಿ, ಅಬ್ದುರ್ರಹ್ಮಾನ್ ಕುತ್ತೆತ್ತೂರು, ಬಿ.ಎ.ಸಂಶುದ್ದೀನ್ ಮಡಿಕೇರಿ, ಹಾಜಿ ಇಬ್ರಾಹೀಂ ಕೋಡಿಜಾಲ್ ಹಾಗೂ ಸಿಂಡಿಕೇಟ್ ಸದಸ್ಯರನ್ನು ಒಳಗೊಂಡಂತೆ ಸಲಹಾ ಸಮಿತಿಯನ್ನು 2018ರ ಆಗಸ್ಟ್ 7ರಂದು ರಚಿಸಲಾಗಿದೆ. ಮಂಗಳೂರು ವಿವಿಯ ಹಣಕಾಸು ಅಧಿಕಾರಿಯನ್ನು ಆಹ್ವಾನಿತರನ್ನಾಗಿ ಮತ್ತು ಪ್ರೊ.ಅರಬಿ ಯು. ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿತ್ತು.
ಈ ಸಮಿತಿಯು ಕಳೆದ ಎರಡು ವರ್ಷದಲ್ಲಿ ಕೇವಲ ಎರಡು ಸಭೆ ನಡೆಸಿದೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಅಂದರೆ 2021ರ ಫೆ.21ರಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಸಹಕಾರದಲ್ಲಿ ಮಂಗಳೂರಿನಲ್ಲಿ ವಿಶ್ವ ಸ್ಥಳೀಯ ಭಾಷಾ ದಿನಾಚರಣೆ ಎಂಬ ಒಂದು ಕಾರ್ಯಕ್ರಮ ನಡೆಸಿರುವುದನ್ನು ಬಿಟ್ಟರೆ ಉಳಿದಂತೆ ಬೇರೆ ಯಾವ ಕಾರ್ಯಕ್ರಮವೂ ನಡೆಸಿಲ್ಲ.
ಅಧ್ಯಯನ ಪೀಠ ಆರಂಭಗೊಂಡ ಎರಡು ವರ್ಷದೊಳಗೆ ಮೂವರು ಸಂಯೋಜಕರನ್ನು ಪೀಠ ಕಂಡಿವೆ. ಅಂದರೆ ಪ್ರೊ. ಅರಬಿ ಯು. ಅವರ ಬಳಿಕ ಪ್ರೊ.ಇಸ್ಮಾಯೀಲ್ ಬಿ. ಅವರನ್ನು ನೇಮಿಸ ಲಾಗಿತ್ತು. ಅವರ ನಿವೃತ್ತಿಯ ಬಳಿಕ ಇದೀಗ ನೂತನ ಸಂಯೋಜಕರಾಗಿ ಡಾ.ಅಬೂಬಕರ್ ಸಿದ್ದೀಕ್ ಅಧಿಕಾರ ಸ್ವೀಕರಿಸಿದ್ದು, ಅವರು ಹೊಸ ಹೊಸ ಯೋಜನೆಗೆ ಚಾಲನೆ ನೀಡಲು ಸಿದ್ಧತೆ ನಡೆಸತೊಡಗಿದ್ದಾರೆ. ಇತ್ತೀಚೆಗೆ ಬ್ಯಾರಿ ಅಕಾಡಮಿಯ ಸಹಕಾರದಲ್ಲಿ ವಿಶಿಷ್ಟ ಕಾರ್ಯಕ್ರಮದ ಮೂಲಕ ನಾಂದಿ ಹಾಡಿದ್ದಾರೆ.
ಮಂಗಳೂರು ವಿವಿಯಲ್ಲಿ 29 ಅಧ್ಯಯನ ಪೀಠಗಳಿವೆ. ರಾಜ್ಯದ ಯಾವ ವಿವಿಯಲ್ಲೂ ಇಷ್ಟೊಂದು ಸಂಖ್ಯೆಯ ಅಧ್ಯಯನ ಪೀಠಗಳಿಲ್ಲ. 2017ರಲ್ಲಿ ಅಂದಿನ ರಾಜ್ಯ ಸರಕಾರ ಯಾವ ಉದ್ದೇಶಕ್ಕಾಗಿ ಅಧ್ಯಯನ ಪೀಠ ಸ್ಥಾಪಿಸಿತ್ತೋ ಅದಿನ್ನೂ ಈಡೇರಿದಂತಿಲ್ಲ. ಕನಿಷ್ಟ ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಇದೆ ಎಂಬುದಕ್ಕೆ ಒಂದೇ ಒಂದು ಕುರುಹು ಕೂಡ ಇಲ್ಲ. ಅಧ್ಯಯನ ಪೀಠ ಸ್ಥಾಪನೆಗೆ ಹಲವರು ಶಕ್ತಿಮೀರಿ ಶ್ರಮಿಸಿದ್ದು, ಇದೀಗ ಪೀಠದ ನಿಷ್ಕ್ರಿಯತೆಯು ಪ್ರಮುಖ ಆಂದೋಲನಕಾರರಿಗೆ ಅವಮಾನ ಮಾಡಿದಂತಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠವು ಎರಡು ವರ್ಷಗಳ ಹಿಂದೆ ಆರಂಭಗೊಂಡರೂ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗಿಲ್ಲ. ನಾನು ಇತ್ತೀಚೆಗಷ್ಟೇ ಅಧ್ಯಯನ ಪೀಠದ ಸಂಯೋಜಕನಾಗಿ ಅಧಿಕಾರ ವಹಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅಧ್ಯಯನ ಪೀಠದ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವೆ. ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅಪಾರ ಜ್ಞಾನವುಳ್ಳ ಸಲಹಾ ಸಮಿತಿಯು ಕುಲಪತಿಯ ಅಧ್ಯಕ್ಷತೆಯಲ್ಲಿ ಈಗಾಗಲೇ ರಚನೆಯಾಗಿದೆ. ಅಧ್ಯಯನ ಪೀಠದ ಎಲ್ಲಾ ಕಾರ್ಯಕ್ರಮಗಳನ್ನೂ ಸಲಹಾ ಸಮಿತಿಯು ಸಭೆ ಸೇರಿ ನಿರ್ಧರಿಸುತ್ತದೆ. ಈ ಅಧ್ಯಯನ ಪೀಠದ ವತಿಯಿಂದ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರಗಳು, ನಂಬಿಕೆಗಳು, ವಿಧಿ-ವಿಧಾನಗಳು, ಆಚರಣೆಗಳ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ವಿವಿಧ ಕಾಲೇಜುಗಳಲ್ಲಿ ಪ್ರಚಾರೋಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪೀಠದ ಉದ್ದೇಶಗಳಿಗೆ ಅನುಗುಣವಾಗಿ ವಿವಿಧ ಸ್ಪರ್ಧೆಗಳು, ಕಮ್ಮಟಗಳು, ವಿಚಾರಗೋಷ್ಠಿಗಳು ಮುಖ್ಯವಾಗಿ ಬ್ಯಾರಿ ಜನಾಂಗ ಹಾಗೂ ಭಾಷೆಯ ಬಗ್ಗೆ ಸಂಶೋಧನೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪೀಠವನ್ನು ಸದಾ ಕ್ರಿಯಾಶೀಲವಾಗಿಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ.
ಡಾ.ಅಬೂಬಕರ್ ಸಿದ್ದೀಕ್,
ಸಂಯೋಜಕ ಬ್ಯಾರಿ ಅಧ್ಯಯನ ಪೀಠ,
ಮಂಗಳೂರು ವಿವಿ
ಅಧ್ಯಯನ ಪೀಠ ಅಸ್ತಿತ್ವಕ್ಕೆ ಬಂದು ಎರಡು ವರ್ಷವಾದರೂ ಕೂಡ ವಿಶೇಷವಾಗಿ ಯಾವುದೇ ಕಾರ್ಯಕ್ರಮ ನಡೆದಿಲ್ಲ. ಅಧ್ಯಯನ ಪೀಠವು ಸದಾ ಕ್ರಿಯಾಶೀಲವಾಗಿರಬೇಕು. ಅದಕ್ಕೆ ಚುರುಕು ಮುಟ್ಟಿಸುವ ಕೆಲಸವೂ ಆಗಬೇಕಿದೆ. ಈ ನಿಟ್ಟಿನಲ್ಲಿ ವಿವಿಯ ಕುಲಪತಿ ಹಾಗೂ ಪೀಠದ ಸಂಯೋಜಕರ ಬಳಿ ಚರ್ಚೆ ನಡೆಸುವೆ.
ಇಬ್ರಾಹೀಂ ಕೋಡಿಜಾಲ್,
ಸದಸ್ಯ ಬ್ಯಾರಿ ಅಧ್ಯಯನ ಪೀಠ,
ಮಂಗಳೂರು ವಿವಿ
ಬ್ಯಾರಿ ಅಧ್ಯಯನ ಪೀಠ ತನ್ನ ಕಾರ್ಯ ಯೋಜನೆಯ ಅನುಷ್ಠಾನಕ್ಕಾಗಿ ಇತರ ಬ್ಯಾರಿ ಸಂಘಟನೆಗಳ ಸಹಭಾಗಿತ್ವ ಪಡೆಯುವ ಅಗತ್ಯವಿದೆ. ಬ್ಯಾರಿ ಆಂದೋಲನದಲ್ಲಿ ಅನೇಕ ಸಂಘಟನೆಗಳು ತೊಡಗಿಸಿಕೊಂಡಿದ್ದು, ಆ ಸಂಘಟನೆಗಳ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಮಾತ್ರ ಪೀಠದ ಸ್ಥಾಪನೆಯ ಉದ್ದೇಶ ಈಡೇರಬಹುದು.
ಮನ್ಸೂರ್ ಅಹ್ಮದ್ ಸಾಮಣಿಗೆ,
ಅಧ್ಯಕ್ಷರು, ಮೇಲ್ತೆನೆ, ದೇರಳಕಟ್ಟೆ