ಸಾಹಿತಿ, ಬರಹಗಾರ ಕೆ.ಟಿ ಗಟ್ಟಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ
ಉಡುಪಿ, ಮಾ.3: ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿ.ಮುಳಿಯ ತಿಮ್ಮಪ್ಪಯ್ಯರ ನೆನಪಿನಲ್ಲಿ ನೀಡಲಾಗುವ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ’ಗೆ ಪ್ರಸಿದ್ಧ ಲೇಖಕ, ಕಾದಂಬರಿಕಾರ ಕೆ.ಟಿ ಗಟ್ಟಿ ಆಯ್ಕೆಯಾಗಿದ್ದಾರೆ.
ಖ್ಯಾತ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಅಧ್ಯಕ್ಷರಾಗಿರುವ ಆಯ್ಕೆ ಸಮಿತಿಯು ಪ್ರತಿಷ್ಠಿತ ಪ್ರಶಸ್ತಿಗೆ ಈ ಆಯ್ಕೆಯನ್ನು ನಡೆಸಿದೆ. ಉಡುಪಿಯ ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡದ ಖ್ಯಾತನಾಮ ಕಾದಂಬರಿಕಾರರಲ್ಲಿ ಒಬ್ಬರಾಗಿರುವ ಕೆ. ಟಿ. ಗಟ್ಟಿ ಅವರು ಕೇರಳ ವಿವಿಯಿಂದ ಇಂಗ್ಲಿಷ್ ಎಂ.ಎ ಪದವಿ ಪಡೆದು ಸ್ವದೇಶದಲ್ಲಿ 18 ವರ್ಷ ಹಾಗೂ ವಿದೇಶದಲ್ಲಿ 8 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಲಂಡನ್‌ನ ಟ್ರಿನಿಟಿ ಕಾಲೇಜಿನಿಂದ ಇಂಗ್ಲಿಷ್ ಕಲಿಕೆಯ ಡಿಪ್ಲೊಮಾ ಮತ್ತು ಆಕ್ಸ್‌ಫರ್ಡ್‌ನ ಕಾಲೇಜ್ ಆಫ್ ಪ್ರಿಸೆಪ್ಟರ್ಸ್‌ನಿಂದ ಶಿಕ್ಷಣ ಡಿಪ್ಲೊಮಾ ಪಡೆದವರಾಗಿದ್ದಾರೆ. ಅಧ್ಯಾಪನದ ಜೊತೆ ಜೊತೆಗೆ ಸಾಹಿತ್ಯ, ಬರವಣಿಗೆ ಪ್ರಾರಂಭಿಸಿದ ಗಟ್ಟಿ ಅವರು ಪ್ರಬಂಧಕಾರರಾಗಿ, ರಂಗತಜ್ಞರಾಗಿ, ಕಾದಂಬರಿಕಾರರಾಗಿ, ನಾಟಕಕಾರರಾಗಿ, ಅನುವಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಭಾಷಾಧ್ಯಯನದ ಇಂಗ್ಲಿಷ್ ಪುಸ್ತಕಗಳು, ಇಂಗ್ಲಿಷ್ ಕನ್ನಡ ಕಲಿಕೆಯ ಪುಸ್ತಕಗಳು ಭಾಷಾ ಶಿಕ್ಷಣಕ್ಕೆ ಅವರ ಕೊಡುಗೆಗಳಾಗಿವೆ. ಕನ್ನಡನಾಡಿನ ಎಲ್ಲ ಬಗೆಯ ನಿಯತಕಾಲಿಕೆಗಳು ಗಟ್ಟಿ ಅವರ ಸಾಹಿತ್ಯಗಳನ್ನು ಪ್ರಕಟಿಸಿವೆ. ಅಲ್ಲದೇ ಇಂಗ್ಲಿಷ್ ಕವನಗಳನ್ನು ಅವರು ತುಳುವಿಗೆ ಅನುವಾದಿಸಿ ದ್ದಾರೆ. ಸೃಜನಶೀಲತೆ ಮತ್ತು ವೈಚಾರಿಕತೆ- ಇವು ಕೆ.ಟಿ ಗಟ್ಟಿ ಅವರ ಬದುಕು ಮತ್ತು ಬರಹದ ಅನನ್ಯ ಶಕ್ತಿಗಳು.
ಕೆ.ಟಿ.ಗಟ್ಟಿ ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಚದುರಂಗ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಉಡುಪಿ ರಥಬೀದಿ ಗೆಳೆಯರು ಬಳಗದ ಸವ್ಯಸಾಚಿ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.