ದ.ಕ.: ಗಣಿ-ಭೂ ವಿಜ್ಞಾನ ಇಲಾಖೆಯ ಅರ್ಧಕ್ಕರ್ಧ ಹುದ್ದೆ ಖಾಲಿ

Update: 2021-04-19 08:02 GMT

ಇಲಾಖೆಯಲ್ಲಿ ಮಂಜೂರಾದ 43 ಹುದ್ದೆಗಳ ಪೈಕಿ 15 ಮಾತ್ರ ಭರ್ತಿಯಾಗಿವೆ. ಉಳಿದ 28 ಹುದ್ದೆಗಳ ಭರ್ತಿ ಮಾಡಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇನ್ನು 5 ಹುದ್ದೆಗಳನ್ನು ನಿಯೋಜನೆ ಮೇಲೆ ಸೇರಿಸಿಕೊಳ್ಳಲಾಗಿದೆ. ಆದಾಗ್ಯೂ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ‘ಡಿ’ ಗುಂಪಿನ ಮಂಜೂರಾದ 12 ಹುದ್ದೆಗಳ ಪೈಕಿ ಒಂದು ಕೂಡ ಭರ್ತಿಯಾಗಿಲ್ಲ. ಮೊನ್ನೆ ಸಚಿವರು ಮಂಗಳೂರಿಗೆ ಬಂದಾಗ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹುದ್ದೆಗಳು ಖಾಲಿ ಇರುವ ಬಗ್ಗೆ ಮಾಹಿತಿ ನೀಡಿದ್ದೇವೆ. ಹುದ್ದೆ ಭರ್ತಿ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

 ನಿರಂಜನ್

ಉಪನಿರ್ದೇಶಕರು (ಪ್ರಭಾರ)ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ದ.ಕ.ಜಿಲ್ಲೆ

ಮಂಗಳೂರು: ಅಕ್ರಮ ಗಣಿಗಾರಿಕೆಯ ಮೂಲಕ ಆಗಾಗ ಸುದ್ದಿಯಾಗುತ್ತಿರುವ ದ.ಕ. ಜಿಲ್ಲೆಯಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅರ್ಧಕ್ಕರ್ಧ ಹುದ್ದೆಗಳು ಖಾಲಿ ಇವೆ. ಅದರಲ್ಲೂ ಜಿಲ್ಲೆಯ ಮಟ್ಟಿಗೆ ಪ್ರಮುಖ ಹುದ್ದೆಯಾದ ಉಪ ನಿರ್ದೇಶಕ ಹುದ್ದೆಯು ಕೆಲವು ತಿಂಗಳಿನಿಂದ ಖಾಲಿ ಇದೆ. ಈ ಬಗ್ಗೆ ಇತ್ತೀಚೆಗಷ್ಟೇ ಮಂಗಳೂರಿಗೆ ಭೇಟಿ ನೀಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಮುರುಗೇಶ್ ನಿರಾಣಿಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೆ ಇನ್ನೂ ಕೂಡ ಯಾವುದೇ ಹುದ್ದೆಯನ್ನು ತುಂಬುವ ಪ್ರಯತ್ನ ಸಾಗಿಲ್ಲ.

ಜನಪ್ರತಿನಿಧಿಗಳ, ಮರಳು ದಂಧೆಕೋರರ ಒತ್ತಡದಿಂದ ಕೆಲಸ ಮಾಡಲು ಸಾಧ್ಯವಿಲ್ಲದ ಕಾರಣ ಇಲಾಖೆಯ ಪ್ರಮುಖ ಹುದ್ದೆಗಳಲ್ಲಿ ಒಂದಾದ ‘ಉಪನಿರ್ದೇಶಕ’ ಹುದ್ದೆಯು ಖಾಲಿಯಾಗಿರುತ್ತಲೇ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಯಾರೇ ಈ ಹುದ್ದೆಗೆ ಬಂದರೂ ಕೂಡ ಕೆಲವೇ ತಿಂಗಳಲ್ಲಿ ವರ್ಗಾವಣೆ ಮಾಡಿಕೊಂಡು ಬೇರೆ ಕಡೆ ಹೋಗುವುದು ಮಾಮೂಲಿಯಾಗಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 2019-20ರಲ್ಲಿ 3,400 ಲ.ರೂ. ರಾಜಧನ ಸಂಗ್ರಹದ ಗುರಿ ಹೊಂದಿತ್ತು. ಆ ಪೈಕಿ 2,651.73 ಲ.ರೂ.ನೊಂದಿಗೆ ಶೇ.77.99 ಸಾಧನೆಗೈದಿದೆ. 2020-21ರಲ್ಲಿ 3500 ಲ.ರೂ. ರಾಜಧನ ಸಂಗ್ರಹದ ಗುರಿಯ ಪೈಕಿ 3,083.89 ಲ.ರೂ. ನೊಂದಿಗೆ ಶೇ.98.89 ಸಾಧನೆಗೈದಿದೆ. ಆದಾಗ್ಯೂ ಮರಳುಗಾರಿಕೆ, ಕಪ್ಪು ಕಲ್ಲು, ಕೆಂಪು ಕಲ್ಲುಗಳ ಗಣಿಗಾರಿಕೆಯಲ್ಲಿ ಎಗ್ಗಿಲ್ಲದೆ ದಂಧೆ ನಡೆಯುತ್ತಿದೆ ಎಂಬ ಆರೋಪವೂ ಇದೆ. ಈ ದಂಧೆಯನ್ನು ತಡೆಯಲು ಮತ್ತು ಗುರಿ ಸಾಧನೆ ಹೆಚ್ಚಿಸಲು ಉಪನಿರ್ದೇಶಕರ ಜವಾಬ್ದಾರಿ ಪ್ರಮುಖವಾಗಿದೆ. ಆದರೆ ಆ ಹುದ್ದೆಯೇ ಖಾಲಿಯಿದ್ದು, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಇಲಾಖೆ ವಿಫಲವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ದ.ಕ.ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಎ,ಬಿ,ಸಿ,ಡಿ ಹೀಗೆ ನಾಲ್ಕು ಶ್ರೇಣಿಯ 43 ಹುದ್ದೆಗಳು ಮಂಜೂರಾಗಿತ್ತು. ಆದರೆ ಇದೀಗ ಭರ್ತಿಯಾಗಿರುವುದು ಕೇವಲ 15 ಹುದ್ದೆಗಳು ಮಾತ್ರ. ಅಂದರೆ 28 ಹುದ್ದೆಗಳು ಖಾಲಿ ಇವೆ. ಇನ್ನು 5 ಮಂದಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಖಾಲಿಯಾಗಿರುವ ಹುದ್ದೆಗಳನ್ನು ತುಂಬಲು ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗುತ್ತಲೇ ಇದ್ದರೂ ಈವರೆಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದೆ.

‘ಎ’ ಶ್ರೇಣಿಯ ಉಪನಿರ್ದೇಶಕ 1 ಹುದ್ದೆ ಖಾಲಿ ಇದೆ. ಹಾಗಾಗಿ ‘ಎ’ ಶ್ರೇಣಿಯ ಹಿರಿಯ ಭೂವಿಜ್ಞಾನಿಯೇ ಸದ್ಯ ಉಪನಿರ್ದೇಶಕ ಹುದ್ದೆಯ ಪ್ರಭಾರ ವಹಿಸಿದ್ದಾರೆ. ‘ಎ’ ಶ್ರೇಣಿಯ ‘ಕೊರೆಯುವ ಅಭಿಯಂತರ’ರು 1 ಹುದ್ದೆ ಭರ್ತಿ ಇದೆ. ‘ಬಿ’ ಶ್ರೇಣಿಯ 7 ಭೂ ವಿಜ್ಞಾನಿ ಹುದ್ದೆಯ ಪೈಕಿ 5 ಭರ್ತಿ ಯಾಗಿದ್ದರೆ, 2 ಹುದ್ದೆಗಳು ಖಾಲಿ ಇವೆ. ‘ಬಿ’ ಶ್ರೇಣಿಯ ‘ಗಣಿ ಅಭಿಯಂತರ’ರು 1 ಹುದ್ದೆ ಮಾತ್ರ ಮಂಜೂರಾಗಿದ್ದು, ಅದು ಕೂಡ ಖಾಲಿ ಇವೆ.

‘ಸಿ’ ಶ್ರೇಣಿಯ 1 ಅಧೀಕ್ಷಕ ಹುದ್ದೆ ಮಾತ್ರ ಮಂಜೂರಾಗಿದ್ದು, ಅದು ಭರ್ತಿಯಾಗಿವೆ. ‘ಸಿ’ ಶ್ರೇಣಿಯ 1 ಕಿರಿಯ ಅಭಿಯಂತರರು ಹುದ್ದೆ ಮಾತ್ರ ಮಂಜೂರಾಗಿದ್ದು, ಅದು ಖಾಲಿಯಾಗಿವೆ. ‘ಸಿ’ ಶ್ರೇಣಿಯ ಭೈರಿಗೆದಾರರು 1 ಹುದ್ದೆ ಮಾತ್ರ ಮಂಜೂರಾಗಿದ್ದು, ಅದೇ ಖಾಲಿಯಾಗಿವೆ. ‘ಸಿ’ ಶ್ರೇಣಿಯ ಪ್ರಥಮ ದರ್ಜೆಯ 3 ಸಹಾಯಕ ಹುದ್ದೆ ಮಂಜೂರಾಗಿದ್ದು, ಅದರಲ್ಲಿ 1 ಭರ್ತಿಯಾಗಿವೆ. 2 ಖಾಲಿ ಇವೆ. ‘ಸಿ’ ಶ್ರೇಣಿಯ ಸಹಾಯಕ ಭೈರಿಗೆದಾರರು 1 ಹುದ್ದೆ ಮಾತ್ರ ಮಂಜೂರಾಗಿದ್ದು, ಅದೂ ಖಾಲಿ ಬಿದ್ದಿವೆ. ‘ಸಿ’ ಶ್ರೇಣಿಯ ದ್ವಿತೀಯ ದರ್ಜೆ ಸಹಾಯಕ 4 ಹುದ್ದೆ ಮಂಜೂರಾಗಿದ್ದು, 3 ಹುದ್ದೆ ಭರ್ತಿಯಾಗಿವೆ. 1 ಖಾಲಿ ಇವೆ. ‘ಸಿ’ ಶ್ರೇಣಿಯ ಮಂಜೂರಾದ 2 ಬೆರಳಚ್ಚುಗಾರರು ಹುದ್ದೆಯೂ ಖಾಲಿ ಇವೆ. ‘ಸಿ’ ಶ್ರೇಣಿಯ 5 ವಾಹನ ಚಾಲಕ ಹುದ್ದೆಯ ಪೈಕಿ 2 ಭರ್ತಿಯಾಗಿವೆ. ಮೂರು ಖಾಲಿ ಇವೆ. ‘ಡಿ’ ಶ್ರೇಣಿಯ ಅಟೆಂಡರ್ 1 ಹುದ್ದೆ ಮಂಜೂರಾಗಿದ್ದು, 1 ಹುದ್ದೆ ಭರ್ತಿಯಾಗಿದ್ದರೆ ಇನ್ನೊಂದು ಹುದ್ದೆಯನ್ನು ನಿಯೋಜನೆಯ ಮೇಲೆ ಭರ್ತಿ ಮಾಡಲಾಗಿದೆ. ‘ಡಿ’ ಗುಂಪಿನ 12 ಹುದ್ದೆ ಮಂಜೂರಾಗಿದ್ದು, ಎಲ್ಲವೂ ಖಾಲಿ ಇವೆ. ‘ಡಿ’ ಶ್ರೇಣಿಯ ಲಾರಿ ಕ್ಲೀನರ್ 1 ಹುದ್ದೆಯೂ ಖಾಲಿಯಾಗಿವೆ.

ಒಟ್ಟಿನಲ್ಲಿ ಜಿಲ್ಲೆಯ ನೇತ್ರಾವತಿ, ಫಲ್ಗುಣಿ, ಶಾಂಭವಿ ನದಿ ತೀರಗಳಲ್ಲದೆ ಸಮುದ್ರ ತೀರದಿಂದಲೂ ಅಕ್ರಮವಾಗಿ ಎಗ್ಗಿಲ್ಲದೆ ನಡೆಯುವ ಮರಳುಗಾರಿಕೆ ಸಹಿತ ಎಲ್ಲಾ ಸ್ತರದ ಗಣಿಗಾರಿಕೆಗೆ ಕಡಿವಾಣ ಹಾಕಲು ಇಲಾಖೆಗೆ ನುರಿತ ಅಧಿಕಾರಿ-ಸಿಬ್ಬಂದಿ ವರ್ಗದ ಕೊರತೆ ಎದ್ದು ಕಾಣುತ್ತಿದ್ದು, ಸರಕಾರದ ನೀರಸ ಸ್ಪಂದನೆ ಪರಿಸರ ಪ್ರೇಮಿಗಳಲ್ಲೂ ಆಶ್ಚರ್ಯ ಮೂಡಿಸಿದೆ.

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News