ಖಾಸಗಿ ಸಂಸ್ಥೆ ಮಡಿಲಿಗೆ ಪಾದೂರು ಭೂಗರ್ಭ ತೈಲ ಸಂಗ್ರಹಾಗಾರ?
ಉಡುಪಿ, ಮೇ 16: ದೇಶದ ರಕ್ಷಣೆ ಹಾಗೂ ದೇಶಪ್ರೇಮದ ಹೆಸರಿನಲ್ಲಿ ಕಾಪು ತಾಲೂಕು ಮಜೂರು ಗ್ರಾಪಂ ವ್ಯಾಪ್ತಿಯ ಪಾದೂರು ಮತ್ತು ಹೇರೂರು ಗ್ರಾಮಗಳಲ್ಲಿ ಕಾರ್ಯಾರಂಭ ಮಾಡಿರುವ ಕೇಂದ್ರ ಸರಕಾರದ ತೈಲೋತ್ಪನ್ನ ಸಚಿವಾಲಯದ (ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್) ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ಐಎಸ್‌ಪಿಆರ್‌ಎಲ್)ಗೆ ಸೇರಿದ ಭೂಗರ್ಭ ಕಚ್ಛಾ ತೈಲ ಸಂಗ್ರಹಣಾ ಘಟಕಕ್ಕೆ ಎದುರಾಗಿದ್ದ ಸ್ಥಳೀಯರ ಎಲ್ಲಾ ಪ್ರತಿರೋಧ, ಪ್ರತಿಭಟನೆಯನ್ನು ನಾಚೂಕಾಗಿ ಬಗೆಹರಿಸಿಕೊಂಡಿದ್ದ ಸರಕಾರವೀಗ, ಅದನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ ಎಂದು ‘ದಿ ಹಿಂದು ಬ್ಯುಸಿನೆಸ್‌ಲೈನ್’ ಪತ್ರಿಕೆ ಮುಂಬೈಯಿಂದ ವರದಿ ಮಾಡಿದೆ.
ಒರಿಸ್ಸಾದ ಚಾಂಡಿಕೋಲ್ ಹಾಗೂ ಕರ್ನಾಟಕದ ಪಾದೂರುಗಳಲ್ಲಿ ನಿರ್ಮಿಸಲಾಗುವ ಎರಡು ಹೊಸ ಭೂಗರ್ಭ ಕಚ್ಛಾತೈಲ ಸಂಗ್ರಹಣಾ ಘಟಕವನ್ನು ಖಾಸಗಿಯವರಿಗೆ ಒಪ್ಪಿಸಲು ನಿರ್ಧರಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಮೊದಲು ಸರಕಾರ ಸಾರ್ವಜನಿಕ ರಂಗದ ಐಎಸ್‌ಪಿಆರ್‌ಎಲ್ ಮೂಲಕ ಇವುಗಳನ್ನು ನಿರ್ಮಿಸಿ, ನಿರ್ವಹಿಸುವ ಯೋಜನೆ ಇತ್ತು.
2018ರ ಜೂನ್ ತಿಂಗಳಲ್ಲಿ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಒರಿಸ್ಸಾ ಮತ್ತು ಕರ್ನಾಟಕದ ಪಾದೂರು ತೈಲ ಸಂಗ್ರಹಾಗಾರದ ಎರಡನೇ ಹಂತದ ವಿಸ್ತರಣೆಗಾಗಿ ಇಪಿಸಿ (ಇಂಜಿನಿಯರಿಂಗ್, ಸಂಗ್ರಹಣೆ, ನಿರ್ಮಾಣ) ಮಾದರಿಗೆ ತನ್ನ ತಾತ್ವಿಕ ಒಪ್ಪಿಗೆ ಯನ್ನು ನೀಡಿತ್ತು. ಆದರೆ ದೇಶದ ವಿವಿಧ ಮೂಲಭೂತ ಸೌಕರ್ಯದ ಯೋಜನೆಗಳಲ್ಲಿ ಖಾಸಗಿ ರಂಗದ ಪಾತ್ರವನ್ನು ಹೆಚ್ಚಿಸುವ ಪ್ರಸಕ್ತ ಸರಕಾರದ ನಿಲುವಿನಂತೆ ಕಚ್ಛಾ ತೈಲ ಸಂಗ್ರಹಣಾಗಾರವನ್ನೂ ಖಾಸಗಿಯವರಿಗೆ ತೆರೆದಿಡಲು ನಿರ್ಧರಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಪಾದೂರು ಭೂಗರ್ಭ ಕಚ್ಛಾ ತೈಲ ಸಂಗ್ರಹಣಾಗಾರದ ನಿರ್ಮಾಣ 2010ರ ಮೇಯಲ್ಲಿ ಪ್ರಾರಂಭಗೊಂಡಿದ್ದು, 2018ರ ಡಿಸೆಂಬರ್‌ನಿಂದ ಕಾರ್ಯಾರಂಭ ಮಾಡಿತ್ತು. ಡಿ.15ರಂದು ಮಂಗಳೂರು ಪೆರ್ಮುದೆಯ ತೈಲ ಸಂಗ್ರಹಾಗಾರದಿಂದ 0.625 ಎಂಎಂಟಿ ಕಚ್ಛಾ ತೈಲವನ್ನು ಪಾದೂರಿನ ತಲಾ 0.625 ಎಂಎಂಟಿ ಸಾಮರ್ಥ್ಯದ ನಾಲ್ಕು ಘಟಕಗಳಲ್ಲಿ ಒಂದಕ್ಕೆ ಕಳುಹಿಸುವ ಮೂಲಕ ಅದು ತನ್ನ ಕಾರ್ಯವನ್ನು ಪ್ರಾರಂಭಿಸಿತ್ತು. ಪಾದೂರಿನ ಮೊದಲ ಹಂತದ ಒಟ್ಟು ಸಾಮರ್ಥ್ಯ 2.5 ಎಂಟಿ (18.37ಮಿಲಿಯನ್ ಬ್ಯಾರೆಲ್) ಆಗಿದೆ.
ಪಾದೂರು ಘಟಕವನ್ನು 180 ಎಕರೆ ಪ್ರದೇಶ (40ಎಕರೆ ಸರಕಾರಿ, 120 ಎಕರೆ ಖಾಸಗಿ ಹಾಗೂ 20ಎಕರೆ ಪರಿವರ್ತಿತ ಭೂಮಿ)ದಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿ ಒಟ್ಟು 1693 ಕೋಟಿ ರೂ.ಗಳನ್ನು ವೆಚ್ಚಮಾಡಲಾಗಿದೆ. ಐಎಸ್‌ಪಿಆರ್‌ಎಲ್ ಪಾದೂರು (2.5ಎಂಎಂಟಿ) ಅಲ್ಲದೇ ಮಂಗಳೂರು (1.5ಎಂಟಿ) ಹಾಗೂ ವಿಶಾಖಪಟ್ಟಣಂ(1.33ಎಂಟಿ)ನಲ್ಲೂ ಭೂಗರ್ಭ ತೈಲ ಸಂಗ್ರಹಣಾ ಘಟಕಗಳನ್ನು ಸ್ಥಾಪಿಸಿದ್ದು, ಇವುಗಳ ಒಟ್ಟು ಸಾಮರ್ಥ್ಯ 5.33ಎಂಟಿ. ಇದು ಒಟ್ಟು 39ಮಿಲಿಯ ಕಚ್ಛಾ ಬ್ಯಾರಲ್ ತೈಲವಾಗುತ್ತದೆ.
ವಿದೇಶ ಕಂಪೆನಿಗೆ ಅವಕಾಶ
ಈ ನಡುವೆ ಕೇಂದ್ರ ಸರಕಾರ ಯುಎಇಯ ಅಬುಧಾಬಿ ನೇಷನಲ್ ಆಯಿಲ್ ಕಂಪೆನಿ (ಎಡಿಎನ್‌ಓಸಿ)ಗೆ ತನ್ನ ಕಚ್ಛಾ ತೈಲವನ್ನು ಪಾದೂರಿನ ಎರಡು ಘಟಕಗಳಲ್ಲಿ (ತಲಾ 0.625ಎಂಟಿ) ಸಂಗ್ರಹಿಸಲು ಐಎಸ್‌ಪಿಆರ್‌ಎಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 2019ರ ಮಧ್ಯಭಾಗದಿಂದ ಪಾದೂರಿನಲ್ಲಿ ತನ್ನ ಕಚ್ಛಾತೈಲವನ್ನು ಸಂಗ್ರಹಿಸುತ್ತಿದೆ. ಈ ತೈಲವನ್ನು ಮಂಗಳೂರು ಬಂದರು ಮೂಲಕ ಪಾದೂರಿಗೆ ದೊಡ್ಡ ಪೈಪ್‌ಲೈನ್ ಮೂಲಕ ಪಾದೂರಿಗೆ ತರಲಾಗುತ್ತಿದೆ. ಅಲ್ಲದೇ ಕಂಪೆನಿ ಮಂಗಳೂರಿನ ಪೆರ್ಮುದೆ ಘಟಕದಲ್ಲೂ 1.5 ಎಂಟಿ ತೈಲವನ್ನು ಸಂಗ್ರಹಿಸಿಟ್ಟು ಕೊಂಡಿದೆ.
ಈ ನಡುವೆ ಪಾದೂರು ಘಟಕದ ಎರಡನೇ ಹಂತದ ವಿಸ್ತರಣೆಗೆ ಸರಕಾರ ಮುಂದಾಗಿದ್ದು, ಇದಕ್ಕಾಗಿ 210 ಎಕರೆ ಭೂಪ್ರದೇಶದ ಸ್ವಾಧೀನ ಕಾರ್ಯ ನಡೆಯುತ್ತಿದೆ. ಇವುಗಳಲ್ಲಿ 175 ಎಕರೆ ಪ್ರದೇಶ ಫಲವತ್ತಾದ ಕೃಷಿ ಭೂಮಿ ಹಾಗೂ 10 ಎಕರೆ ಸರಕಾರಿ ಭೂಮಿಯಾಗಿದೆ. ಈಗಾಗಲೇ ಶೇ.50ರಷ್ಟು ಭೂಸ್ವಾಧೀನ ಆಗಿರುವ ಮಾಹಿತಿ ಇದ್ದು, ಸಾಕಷ್ಟು ಪ್ರತಿಭಟನೆಯ ನಂತರ ಶಿರ್ವ, ಪಾದೂರು, ಕಳತ್ತೂರು ಗ್ರಾಮಗಳ ಸ್ಥಳೀಯರು ಇದೀಗ ಸರಕಾರ ನೀಡಿದ ಒಳ್ಳೆಯ ಪರಿಹಾರ ಮೊತ್ತವನ್ನು ಪಡೆದು ಭೂಮಿಯ ಹಕ್ಕನ್ನು ಬಿಟ್ಟುಕೊಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ನಿರ್ಧಾರ
ಕೇಂದ್ರ ಸರಕಾರ ದೇಶದಲ್ಲಿ ತನ್ನ ಕಚ್ಛಾ ತೈಲ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ. ಈಗ ಮೂರು ಘಟಕಗಳಿಂದ 5.33ಎಂಟಿ(ಮಿಲಿಯ ಟನ್) ಸಂಗ್ರಹವಿದ್ದು, ಅದನ್ನು 11.83 ಎಂಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒರಿಸ್ಸಾದಲ್ಲಿ 4ಎಂಟಿ ಹಾಗೂ ಪಾದೂರಿನಲ್ಲಿ 2.5ಎಂಟಿ ಸಾಮರ್ಥ್ಯದ ವಿಸ್ತರಣೆ ಮೂಲಕ ಹೆಚ್ಚುವರಿ ಯಾಗಿ 47.8ಮಿಲಿಯನ್ ಬ್ಯಾರಲ್‌ನಷ್ಟು ಹೆಚ್ಚುವರಿ ತೈಲ ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಬ್ಯುಸಿನೆಸ್‌ಲೈನ್ ವರದಿಯಲ್ಲಿ ತಿಳಿಸಲಾಗಿದೆ.
ಈ ಯೋಜನೆಯಲ್ಲಿ ಒರಿಸ್ಸಾದ ಚಾಂಡಿಖೋಲ್ ಭೂಗರ್ಭ ಸಂಗ್ರಹಾಗಾರ ದಲ್ಲಿ 9,952 ಕೋಟಿ ರೂ.ವೆಚ್ಚದಲ್ಲಿ 4ಎಂಟಿ ಹಾಗೂ ಪಾದೂರಿನಲ್ಲಿ 6,986 ಕೋಟಿ ರೂ.ವೆಚ್ಚದಲ್ಲಿ 2.5ಎಂಟಿ ಸಾಮರ್ಥ್ಯದ ಘಟಕಗಳನ್ನು ಹಡಗಿನಲ್ಲಿ ಬರುವ ಕಚ್ಛಾ ತೈಲವನ್ನು ಬಂದರಿನಿಂದ ನೇರವಾಗಿ ಘಟಕಕ್ಕೆ ತರುವ ಪೈಪ್‌ಲೈನ್ ನೊಂದಿಗೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಸರಕಾರ ಇದೀಗ ಎರಡೂ ಯೋಜನೆಗಳನ್ನು ಖಾಸಗಿಯವರಿಗೆ ನೀಡುವ ಚಿಂತನೆ ನಡೆಸಿರುವುದರಿಂದ ಪ್ರಸ್ತಾಪವನ್ನು ಸಿಸಿಇಎ ಎದುರು ಇಟ್ಟು ಅನುಮೋದನೆ ಪಡೆಯಬೇಕಾಗಿದೆ. ಇದಾದ ಬಳಿಕ ಟೆಂಡರ್ ಕರೆಯಲಾಗುತ್ತದೆ ಎಂದು ವರದಿ ವಿವರಿಸಿದೆ.
ಎರಡೂ ಘಟಕಗಳ ಎರಡನೇ ಹಂತದ ಯೋಜನೆ ಕಾರ್ಯಗತಗೊಂಡಾಗ, ದೇಶದ ತೈಲ ಸಂಗ್ರಹ ಸಾಮರ್ಥ್ಯ 74 ದಿನಗಳಿಂದ 86 ದಿನಗಳಿಗೆ ಏರಿಕೆಯಾಗಲಿದೆ. ಅಲ್ಲದೇ ಎರಡು ಭೂಗರ್ಭ ಗುಹೆಗಳಲ್ಲಿ ತಲಾ ಎಂಟು ಘಟಕಗಳು (ಕಂಪಾರ್ಟ್‌ಮೆಂಟ್) ಇರುತ್ತದೆ. ಇದರಿಂದ ಖಾಸಗಿ ಹೂಡಿಕೆದಾರರಿಗೆ ಗ್ರೇಡ್ ಗನುಗುಣವಾಗಿ ಕಚ್ಛಾತೈಲಗಳನ್ನು ಸಂಗ್ರಹಿಸಿಟ್ಟು ಕೊಂಡು ಮಾರುಕಟ್ಟೆಯ ಬೇಡಿಕೆಗನುಗುಣವಾಗಿ ಅವುಗಳನ್ನು ಮಾರಾಟ ಮಾಡಲು ಅವಕಾಶವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮೊದಲ ಹಂತದಲ್ಲಿ ಜನರ ಪ್ರತಿರೋಧ ಹೆಚ್ಚಾದಾಗ ದೇಶ ರಕ್ಷಣೆ ಹಾಗೂ ದೇಶಪ್ರೇಮದ ಭಾವನಾತ್ಮಕತೆಯನ್ನು ಮುಂದೆ ಮಾಡಿ ಜನರನ್ನು ಒಲಿಸಿಕೊಂಡ ಸರಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇದೀಗ ಖಾಸಗಿಯವರಿಗೆ ಇಡೀ ಘಟಕವನ್ನು ಹರಿವಾಣದಲ್ಲಿಟ್ಟು ಒಪ್ಪಿಸಲು ಮುಂದಾಗಿರುವ ಕೇಂದ್ರದ ಕ್ರಮಕ್ಕೆ ಯಾವ ರೀತಿ ಪ್ರತಿಕ್ರಿಯಿಸುವರು ಎಂಬುದಕ್ಕೆ ಇನ್ನೂ ಯಾವುದೇ ಸೂಚನೆ ಸಿಕ್ಕಿಲ್ಲ.
ವಿಸ್ತರಣೆಗಾಗಿ ಪಾದೂರು ಸಂತ್ರಸ್ತರಿಗೆ ಪರಿಹಾರ
ಐಎಸ್‌ಪಿಆರ್‌ಎಲ್ ಸಾರ್ವಜನಿಕ ರಂಗದ ಸಂಸ್ಥೆಯಾಗಿದ್ದರೂ ಪಾದೂರು ಯೋಜನೆಯ ಸಂತ್ರಸ್ಥರಿಗೆ ವಿವಿಧ ಪರಿಹಾರ ನೀಡಲು ಸಾಕಷ್ಟು ಸತಾಯಿಸಿತ್ತು. ಇದಕ್ಕಾಗಿ ಕಳತ್ತೂರು ಜನಜಾಗೃತಿ ಸಮಿತಿ ಹಾಗೂ ಇತರ ಸಂಘಟನೆಗಳು ಪ್ರತಿಭಟನೆ, ಹೋರಾಟ ನಡೆಸಿದ್ದಲ್ಲದೇ ಕೊನೆಗೆ ಲೋಕಾಯುಕ್ತಕ್ಕೂ ದೂರು ನೀಡಲಾಗಿತ್ತು.
ಆದರೆ ಎರಡನೇ ಹಂತದ ವಿಸ್ತರಣೆ ಖಚಿತವಾಗುತಿದ್ದಂತೆಯೇ ಸ್ವಾಧೀನ ಪಡಿಸಿಕೊಳ್ಳುವ 210 ಎಕರೆ ಜಾಗಕ್ಕೆ ಒಳ್ಳೆಯ ಪರಿಹಾರ ಮೊತ್ತ ನೀಡಿದ್ದಲ್ಲದೇ, ಪಾದೂರು ಗ್ರಾಮದಲ್ಲಿ ಒಂದನೆ ಹಂತದ ಪಾದೂರು ಕಚ್ಛಾತೈಲ ಸಂಗ್ರಹಣಾ ಘಟಕದ ಪೈಪ್‌ಲೈನ್ ಕಾಮಗಾರಿಯ ವೇಳೆ ಬಂಡೆ ಸ್ಪೋಟದಿಂದ ಪಾದೂರು ಮತ್ತು ಕಳತ್ತೂರು ಪರಿಸರದ ಸುತ್ತಮುತ್ತಲಿನ ಸುಮಾರು 120 ಮನೆಗಳಿಗೆ ಹಾನಿಗೆ ತರಾತುರಿಯಿಂದ ಪರಿಹಾರ ವನ್ನು ನೀಡಿತ್ತು. ಸ್ಪೋಟಗಳಿಂದ ತಮ್ಮ ಮನೆಗಳಿಗಾದ ಹಾನಿಗಾಗಿ ಸಂತ್ರಸ್ಥರು ವರ್ಷಗಳ ಕಾಲ ಹೋರಾಟ ನಡೆಸಿದ್ದರು. ಇದಕ್ಕಾಗಿ ಉಡುಪಿ ಜಿಪಂ, ತಾಪಂಲ್ಲೂ ಚರ್ಚೆಯಾಗಿ ನಿರ್ಣಯಗಳಾಗಿದ್ದವು.
ಜಿಲ್ಲಾಧಿಕಾರಿಗಳು ಸಹ ಹಲವು ಪತ್ರ ಬರೆದು ಪರಿಹಾರಕ್ಕೆ ಮನವಿ ಮಾಡಿದ್ದರು. ನಮ್ಮಲ್ಲಿ ಹಾನಿಗೆ ಪರಿಹಾರ ನೀಡುವ ಕ್ರಮವಿಲ್ಲ ಎಂಬ ಉಡಾಫೆ ಉತ್ತರವನ್ನೂ ಐಎಸ್‌ಪಿಆರ್‌ಎಲ್ ನೀಡಿತ್ತು. ಆದರೆ ಎರಡನೇ ಹಂತದ ವಿಸ್ತರಣೆಗೆ ಜನರ ಪ್ರತಿರೋಧ, ಬೇಡಿಕೆಗಳು ಹೆಚ್ಚಾದಂತೆ ಕಂಪೆನಿ ಸ್ಪೋಟದ ಹಾನಿಯ ಸಂತ್ರಸ್ಥರೆಲ್ಲರಿಗೂ ಹಣವನ್ನು ಬಿಡುಗಡೆ ಮಾಡಿತ್ತು.