ಮೇ 1-16 ​: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ. 37ಕ್ಕೆ ಏರಿಕೆ

Update: 2021-05-17 16:10 GMT

ಉಡುಪಿ, ಮೇ 17: ದೇಶಾದ್ಯಂತ ತನ್ನ ಉಗ್ರರೂಪವನ್ನು ತೋರಿಸುತ್ತಿರುವ ಕೊರೋನ ವೈರಸ್, ದೇಶದಲ್ಲೇ ಅತ್ಯುತ್ತಮ ಆರೋಗ್ಯ ವ್ಯವಸ್ಥೆ ಹೊಂದಿರುವ ಹೆಗ್ಗಳಿಕೆ ಪಡೆದಿರುವ ಉಡುಪಿ ಜಿಲ್ಲೆಯಲ್ಲೂ ತನ್ನ ಎರಡನೇ ಅಲೆಯ ಮೂಲಕ ಸಾಕಷ್ಟು ಕಷ್ಟ-ನಷ್ಟಗಳಿಗೆ ಕಾರಣವಾಗಿದೆ.

ಕೋವಿಡ್ ಸಾಂಕ್ರಾಮಿಕ ಜಿಲ್ಲೆಗೆ ಕಾಲಿರಿಸಿದ ಬಳಿಕ ಕಳೆದ ಜನವರಿ-ಫೆಬ್ರವರಿ ತಿಂಗಳವರೆಗೆ ಹೆಚ್ಚು ಕಡಿಮೆ ನಿಯಂತ್ರಣದಲ್ಲೇ ಇದ್ದ ಸೋಂಕು, ಎಪ್ರಿಲ್ ತಿಂಗಳ ಬಳಿಕ ಜಿಲ್ಲೆಯಲ್ಲೂ ಹಾಹಾಕಾರ ಎಬ್ಬಿಸುತ್ತಿದೆ. ಅದರಲ್ಲೂ ಕಳೆದ ಮೇ ತಿಂಗಳ ಮೊದಲ ದಿನದಿಂದ ಇದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ನಿರೀಕ್ಷೆಯನ್ನೂ ಮೀರಿ ವ್ಯಾಪಕವಾಗಿ ಹರಡುತ್ತಿದೆ.

ಉಡುಪಿ ಜಿಲ್ಲಿಯಲ್ಲಿ ಕೊರೋನ ಸೋಂಕು ಎಲ್ಲಾ ಲೆಕ್ಕಾಚಾರಗಳನ್ನೂ ತಲೆಕೆಳಗಾಗಿಸಿ ವ್ಯಾಪಿಸುತ್ತಿದೆ. ರವಿವಾರ ಮೇ 16ರವರೆಗಿನ ಲೆಕ್ಕ ತೆಗೆದುಕೊಂಡರೆ, ಜಿಲ್ಲೆಯಲ್ಲಿ ಈ 16 ದಿನಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.37.25 ಆಗಿದೆ. ಈ ವರ್ಷದ ಪ್ರಾರಂಭದಲ್ಲಿ ಅಂದರೆ 2021ರ ಜ.1ಕ್ಕೆ ಇದು ಕೇವಲ 0.5ಶೇ. ಇತ್ತು. ಎಪ್ರಿಲ್ ತಿಂಗಳ ಪ್ರಾರಂಭದಲ್ಲಿ ಶೇ.4ಕ್ಕೆ ತಲುಪಿ ಅನಂತರ ನಿರಂತರವಾಗಿ ಏರುಗತಿಯಲ್ಲಿ ಸಾಗಿದ್ದು, ಮೇ ತಿಂಗಳಿಡೀ ಅದು ಶೇ.33-37ರಲ್ಲಿದೆ. ಮೇ 1ರಿಂದ 16ರವರೆಗೆ ಜಿಲ್ಲೆಯಲ್ಲಿ ಒಟ್ಟು 40791 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದರೆ, ಇವರಲ್ಲಿ 15,197 ಮಂದಿ ಪಾಸಿಟಿವ್ ಬಂದಿದ್ದು, ಈ ಮೂಲಕ ರವಿವಾರ ಪಾಸಿಟಿವಿಟಿ ಪ್ರಮಾಣ 37.25 ಆಗಿದೆ.

16 ದಿನಗಳಲ್ಲಿ 68 ಸಾವು: ಇದೇ ಅವಧಿಯಲ್ಲಿ ಕೋವಿಡ್‌ನಿಂದಾದ ಮರಣವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. 16 ದಿನಗಳ ಅಂತರ ದಲ್ಲಿ ಅಧಿಕೃತವಾಗಿ 68 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 2020ರ ಡಿ.31ರವರೆಗೆ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರು 188 ಮಂದಿ ಮಾತ್ರ. ಅನಂತರ ಎಪ್ರಿಲ್ ಕೊನೆಯವರೆಗೆ ಮತ್ತೆ 10 ಮಂದಿ ರೋಗಕ್ಕೆ ಬಲಿಯಾಗಿದ್ದರು. ಇದೀಗ ಮೇ 1ರಿಂದ 16ರವರೆಗೆ ಒಟ್ಟು 68 ಮಂದಿ ಮೃತರಾಗುವ ಮೂಲಕ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 266 ಮಂದಿ ಸತ್ತಂತ್ತಾಗಿದೆ. ಈ ಅವಧಿಯಲ್ಲಿ ಮರಣ ಪ್ರಮಾಣ ಶೇ.0.44 ಆಗಿದೆ.

ಕೋವಿಡ್ ಸೋಂಕು ಹಿರಿಯ ನಾಗರಿಕರಿಗೆ ಮಾರಕ ಎಂಬ ನಂಬಿಕೆ ಎರಡನೇ ಅಲೆಯಲ್ಲಿ ಸುಳ್ಳಾಗಿದೆ. ಜಿಲ್ಲೆಯಲ್ಲಿ ಮೃತರಾದವರಲ್ಲಿ 30ರಿಂದ 40-45 ವಯೋವರ್ಗದವರ ಸಂಖ್ಯೆಯೂ ಸಾಕಷ್ಟಿರುವುದು ಕಳವಳಕ್ಕೆ ಕಾರಣವಾಗಿದೆ. ಮೇ ತಿಂಗಳಲ್ಲಿ ಸತ್ತವರಲ್ಲಿ 9 ಮಂದಿ 50ರಿಂದ 60 ವರ್ಷದೊಳಗಿನವರಾದರೆ, ಏಳು ಮಂದಿ 40ರಿಂದ 50 ವಯೋವರ್ಗದವರು. 35 ಆಸುಪಾಸಿನ ಮೂವರು ಸಹ ಮೃತರಲ್ಲಿ ಸೇರಿರುವುದು ಸೋಂಕಿನ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿದೆ.

ಯುವಜನತೆಗೆ ಅಧಿಕ ಸೋಂಕು: ರವಿವಾರದವರೆಗೆ ಜಿಲ್ಲೆಯಲ್ಲಿ ಒಟ್ಟು 46,739 ಮಂದಿ ಪಾಸಿಟಿವ್ ಬಂದಿದ್ದಾರೆ. ಇವರಲ್ಲಿ ಶೇ.79 ಮಂದಿ (36,774)11ರಿಂದ 60 ವರ್ಷದೊಳಗಿನವರು ಎಂಬುದು ವಿಶೇಷ. 60 ವರ್ಷ ಮೇಲಿನ ಶೇ.16 ಮಂದಿ (7399) ಹಾಗೂ 10 ವರ್ಷದೊಳಗಿನ ಶೇ.5ರಷ್ಟು (2566) ಮಕ್ಕಳು ಮಾತ್ರ ಪಾಸಿಟಿವ್ ಬಂದಿದ್ದಾರೆ.

ಜಿಲ್ಲೆಯ ಒಟ್ಟಾರೆಯಾಗಿ ಮರಣ ಪ್ರಮಾಣ ನೋಡಿದರೆ ಸತ್ತಿರುವ 266 ಮಂದಿಯಲ್ಲಿ ಶೇ.34 (91) 11ರಿಂದ 60 ವರ್ಷದವರಾದರೆ, ಶೇ.66 (175) 60 ವರ್ಷ ಮೇಲಿನವರು. ಒಟ್ಟು ಪಾಸಿಟಿವ್ ಸಂಖ್ಯೆಯನ್ನು ಪರಿಗಣಿಸಿದರೆ ಜಿಲ್ಲೆಯಲ್ಲಿ ಮರಣ ಪ್ರಮಾಣ ಶೇ.57 ಆಗಿದ್ದು, ಇದರಲ್ಲಿ 11ರಿಂದ 60ರ ಹರೆಯದವರದು ಶೇ.0.25 ಹಾಗೂ 60 ವರ್ಷ ಮೇಲಿನವರದು ಶೇ.2.37 ಆಗಿದೆ.

ಚೇತರಿಕೆ ಪ್ರಮಾಣವೂ ಇಳಿಕೆ: ಕಳೆದ ಎಪ್ರಿಲ್ ತಿಂಗಳವರೆಗೆ ಜಿಲ್ಲೆಯಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ ಶೇ.96ರಿಂದ 98ರ ಆಸುಪಾಸಿ ನಲ್ಲಿದ್ದರೆ, ಈಗ ಅದು ಶೇ.84.87ಕ್ಕೆ (39,668) ಇಳಿದಿದೆ. ಅದೇ ರೀತಿ ಸಕ್ರಿಯ ಪ್ರಕರಣಗಳ (6805) ಪ್ರಮಾಣ ಶೇ.14.56ರಷ್ಟಿದೆ ಎಂದು ಆರೋಗ್ಯ ಇಲಾಖೆ ಅಂಕಿ ಅಂಶಗಳು ಹೇಳುತ್ತವೆ.

ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 34ರಿಂದ 37ರ ನಡುವೆ ಇದೆ. ಜಿಲ್ಲೆಯಲ್ಲೀಗ 63 ಕಂಟೈನ್‌ಮೆಂಟ್ ರೆನ್ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಪರೀಕ್ಷೆ ಕಡಿಮೆ ಮಾಡದಂತೆ ಸೂಚಿಸಿದ್ದೇವೆ. ಸಾರ್ವಜನಿಕರಲ್ಲಿ ನನ್ನ ಮನವಿ ಏನೆಂದರೆ, ಯಾರೂ ಮನೆಯಲ್ಲಿ ಕೂತು ಸ್ವಯಂ ಚಿಕಿತ್ಸೆ ಮಾಡಿ ಕೊಳ್ಳಬೇಡಿ. ಯುವಕರು ಕೂಡಾ ಕೊರೋನಕ್ಕೆ ಬಲಿಯಾಗುತ್ತಿರುವುದನ್ನು ನೋಡುತಿದ್ದೇವೆ. ರೋಗ ಲಕ್ಷಣ ಗಳು ಕಂಡುಬಂದರೆ ಯಾರೂ ಅಸಡ್ಡೆ ಮಾಡದೇ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ.

-ಜಿ.ಜಗದೀಶ್, ಜಿಲ್ಲಾಧಿಕಾರಿ ಉಡುಪಿ.

Writer - ಬಿ.ಬಿ. ಶೆಟ್ಟಿಗಾರ್

contributor

Editor - ಬಿ.ಬಿ. ಶೆಟ್ಟಿಗಾರ್

contributor

Similar News