ಉಡುಪಿ: ಕೋವಿಡ್ ಪಾಸಿಟಿವಿಟಿ ಪ್ರಮಾಣ ಇಳಿಸಲು ಜಿಲ್ಲಾಡಳಿತ ಹರಸಾಹಸ
ಉಡುಪಿ, ಜೂ.6: ಕೋವಿಡ್-19 ಎರಡನೇ ಅಲೆಯ ವಿರುದ್ಧ ಸೆಣಸಾಡುತ್ತಿರುವ ಜಿಲ್ಲೆಗಳ ಕೋವಿಡ್ ಪಾಸಿಟಿವಿಟಿ ಶೇ.5ಕ್ಕಿಂತ ಕೆಳಗಿಳಿದ ತಕ್ಷಣ, ಆ ಜಿಲ್ಲೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿಯನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಘೋಷಿಸಿದ ಬಳಿಕ ಇದೀಗ ಜಿಲ್ಲಾಡಳಿತ ಪಾಸಿಟಿವಿಟಿ ರೇಟನ್ನು ಶೇ.5ಕ್ಕಿಂತ ಕೆಳಗಿಳಿಸಲು ಹರಸಾಹಸ ಪಡಬೇಕಾಗಿದೆ.
ವಿಶ್ವದಾದ್ಯಂತ ಕೊರೋನ ವೈರಸ್ ಹಾಹಾಕಾರ ಎಬ್ಬಿಸಿ ಇದೀಗ 15 ತಿಂಗಳು ಕಳೆದಿವೆ. ಮೊದಲ ಅಲೆಯಲ್ಲಿ ಸಾಕಷ್ಟು ಕಷ್ಟ-ನಷ್ಟ, ಜೀವಹಾನಿ ಅನುಭವಿಸಿದ ಅಮೆರಿಕ, ಇಟಲಿ, ಬ್ರಿಟನ್, ಜರ್ಮನ್, ಫ್ರಾನ್ಸ್‌ನಂಥ ಶ್ರೀಮಂತ ದೇಶಗಳು ವೈಜ್ಞಾನಿಕ ಚಿಂತನೆ ಹಾಗೂ ಆರೋಗ್ಯ ವ್ಯವಸ್ಥೆ ಯನ್ನು ಸುಸಜ್ಜಿತಗೊಳಿಸುವ ಮೂಲಕ ಸೋಂಕು ಹಾಗೂ ಅದರ ನಿಯಂತ್ರಣದ ಕುರಿತಂತೆ ಸ್ಪಷ್ಟವಾದ ನಿಲುವನ್ನು ಹೊಂದಿ ಎರಡನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ.
ಆದರೆ ಭಾರತ, ತನ್ನ ಉಡಾಫೆ ಪ್ರವೃತ್ತಿ ಹಾಗೂ ಅವೈಜ್ಞಾನಿಕ ಕ್ರಮಗಳ ಮೂಲಕ ದೇಶವಿಡೀ ಕೊರೋನ ಸೋಂಕು ವ್ಯಾಪಿಸಲು ಅವಕಾಶ ಮಾಡಿಕೊಟ್ಟು, ಸೋಂಕಿನ ವ್ಯಾಪಕತೆ, ಅನಿಯಂತ್ರಿತ ಸಾವಿನ ಪ್ರಮಾಣವನ್ನು ನಿಭಾಯಿಸಲಾರದೇ ಏಗುತ್ತಿದೆ. ಇದೀಗ ‘ಊರಿಡೀ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ’ ನಾಣ್ಣುಡಿಯಂತೆ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡರೂ ಸೋಂಕಿಗೆ ಕಡಿವಾಣ ಹಾಕಲು ಸಾಧ್ಯವಾಗದೇ ಏದುಸಿರು ಬಿಡುತ್ತಿದೆ.
ಪ್ರಾಯಶ: ಈ ಸನ್ನಿವೇಶ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರಿ ಸುತ್ತಿದೆ. ಕೋವಿಡ್‌ಗೆ ಸಂಬಂಧಿಸಿದಂತೆ ಸರಕಾರ ಕೈಗೊಂಡ ಕೆಲವು ತಪ್ಪು ನಿರ್ಧಾರಗಳಿಂದ ಸೋಂಕು ಜಿಲ್ಲೆಯ ಹಳ್ಳಿ, ಹಳ್ಳಿಗಳಿಗೆ, ಮನೆ ಮನೆಗಳಿಗೆ ಲಗ್ಗೆ ಇಡುವಂತಾಗಿದೆ.ಇಂದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಅಸಂಖ್ಯ ಮನೆಗಳ ಎಲ್ಲಾ ಸದಸ್ಯರು ಕೋವಿಡ್ ಸೋಂಕಿಗೆ ತುತ್ತಾಗುವಂತಾಗಿದೆ.
ಎರಡನೇ ಸ್ಥಾನದಲ್ಲಿ ಉಡುಪಿ: ಇದೇ ಜೂ.4ರಂದು ಕರ್ನಾಟಕ ರಾಜ್ಯ ಕೋವಿಡ್-19 ವಾರ್‌ರೂಮ್ ಬಿಡುಗಡೆಗೊಳಿಸಿದ ರಾಜ್ಯದ ದೈನಂದಿನ ಕೋವಿಡ್-19 ಪಾಸಿಟಿವ್ ಕೇಸ್‌ಗಳ ವಿಶ್ಲೇಷಣೆಯ ಅಂಕಿಅಂಶಗಳಂತೆ ರಾಜ್ಯದಲ್ಲಿ ಹಾಸನ ಜಿಲ್ಲೆಯ ಬಳಿಕ ಉಡುಪಿ ಜಿಲ್ಲೆಯಲ್ಲೇ ಈಗ ಅತೀ ಹೆಚ್ಚು ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಂದ ವರದಿಯಾಗುತ್ತಿವೆ.
ಇದೇ ಜೂ.4ರಂದು ಕರ್ನಾಟಕ ರಾಜ್ಯ ಕೋವಿಡ್-19 ವಾರ್‌ರೂಮ್ ಬಿಡುಗಡೆಗೊಳಿಸಿದ ರಾಜ್ಯದ ದೈನಂದಿನ ಕೋವಿಡ್-19 ಪಾಸಿಟಿವ್ ಕೇಸ್‌ಗಳ ವಿಶ್ಲೇಷಣೆಯ ಅಂಕಿಅಂಶಗಳಂತೆ ರಾಜ್ಯದಲ್ಲಿ ಹಾಸನ ಜಿಲ್ಲೆಯ ಬಳಿಕ ಉಡುಪಿ ಜಿಲ್ಲೆಯಲ್ಲೇ ಈಗ ಅತೀ ಹೆಚ್ಚು ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಂದ ವರದಿಯಾಗುತ್ತಿವೆ.
ಇದರ ಪ್ರಕಾರ ಹಿಂದಿನ 14 ದಿನಗಳ ಒಟ್ಟು ಪಾಸಿಟಿವ್ ಪ್ರಕರಣಗಳನ್ನು ಪರಿಶೀಲಿಸಿದಾಗ ಉಡುಪಿ ಜಿಲ್ಲೆಯಲ್ಲಿ ನಗರ ಪ್ರದೇಶಗಳಿಗಿಂತ ಐದು ಪಟ್ಟು ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಂದ ವರದಿಯಾಗಿವೆ. ಈ ಅವಧಿಯಲ್ಲಿ 1822 ಪಾಸಿಟಿವ್ ಕೇಸು ನಗರ ಪ್ರದೇಶಗಳಿಂದ ಬಂದರೆ, 8502 ಕೇಸುಗಳು ಗ್ರಾಮೀಣ ಪ್ರದೇಶಗಳಿಂದ ಬಂದಿವೆ.
ಹಾಸನ ಜಿಲ್ಲೆಯಲ್ಲಿ ಈ ಪ್ರಮಾಣ 13,470-5266 ಇದೆ. ಆದರೆ ನಮ್ಮ ಪಕ್ಕದ ದಕ್ಷಿಣ ಕನ್ನಡದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಿಂದ ವರದಿಯಾಗುವ ಪ್ರಕರಣಗಳು (5247-4487) ಹೆಚ್ಚುಕಮ್ಮಿ ಸರಿಸಮನಾಗಿವೆ. ಆದರೆ ಮೈಸೂರು (2838-6133), ಧಾರವಾಡ (957-3088) ಹಾಗೂ ಬಳ್ಳಾರಿ (1599-2831) ಜಿಲ್ಲೆಗಳಲ್ಲಿ ಈಗಲೂ ನಗರ ಪ್ರದೇಶಗಳಿಂದಲೇ ಹೆಚ್ಚು ಕೊರೋನ ಪ್ರಕರಣಗಳು ವರದಿ ಯಾಗುತ್ತಿವೆ.
ಗುಣಮುಖಸಂಖ್ಯೆ: ಇದೇ ಟ್ರೆಂಡ್ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆಯಲ್ಲೂ ಕಂಡುಬರುತ್ತಿದೆ. ಉಡುಪಿಯಲ್ಲಿ ಇದು 3623-625 ಇದ್ದರೆ, ಹಾಸನದಲ್ಲಿ 9482-3299, ತುಮಕೂರಿನಲ್ಲಿ 9037-2661 ಹಾಗೂ ಬೆಳಗಾವಿಯಲ್ಲಿ 6842-4421 ಇದೆ ಎಂದು ಅಂಕಿ ಅಂಶ ಹೇಳುತ್ತವೆ.
ತಗ್ಗುತ್ತಿರುವ ಪಾಸಿಟಿವಿಟಿ: ಕೋವಿಡ್ ಎರಡನೇ ಅಲೆ ಇದೀಗ ಇಳಿಮುಖದ ಲಕ್ಷಣ ತೋರುತ್ತಿರುವಂತೆ ಕರ್ನಾಟಕದ ಪಾಸಿಟಿವಿಟಿ ಪ್ರಮಾಣವೂ ಇಳಿಮುಖ ದತ್ತ ನಿಧಾನವಾಗಿ ಮುಖಮಾಡುತ್ತಿದೆ. ವಾರ್‌ರೂಮ್ ಜೂ.1ರಂದು ಬಿಡುಗಡೆ ಮಾಡಿದ ಅಂಕಿಅಂಶದ ಪ್ರಕಾರ ಮೇ 25ರಿಂದ 32ರ ನಡುವೆ ರಾಜ್ಯದ ಪಾಸಿಟಿವಿಟಿ ದರ 12.79 ಆಗಿದ್ದರೆ, ಜೂ.4ರ ವರದಿಯಂತೆ ಮೇ 28ರಿಂದ ಜೂ.3ರವರೆಗಿನ ಒಂದು ವಾರದ ಅಂಕಿಅಂಶ ಈ ಪ್ರಮಾಣ 10.60 ಎಂದು ತೋರಿಸುತ್ತಿದೆ.
ಇದೇ ಅವಧಿಯಲ್ಲಿ ಉಡುಪಿ ಜಿಲ್ಲೆಯ ಅಂಕಿಅಂಶಗಳನ್ನು ಗಮನಿಸಿದರೆ, ಮೇ 25ರಿಂದ 31ರ ಅವಧಿಯಲ್ಲಿ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ 17.91 ಆಗಿದ್ದರೆ, ಅದೇ ಮೇ 28ರಿಂದ ಜೂ.3ರ ನಡುವೆ ಇದು 16.25ಕ್ಕೆ ಇಳಿದಿದೆ. ಜೂನ್ ತಿಂಗಳಿನ ಪ್ರಮಾಣವನ್ನೇ ತೆಗೆದು ಕೊಳ್ಳುವು ದಾದರೆ, ಜೂನ್ 3ಕ್ಕೆ ಶೇ.20.42 ಇದ್ದ ಪ್ರಮಾಣ ಜೂ.4ಕ್ಕೆ 19.50 ಹಾಗೂ ನಿನ್ನೆ ಜೂ.5ಕ್ಕೆ 18.39ಕ್ಕೆ ಇಳಿದಿತ್ತು.
3 ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಮ್ಮಿ: ರಾಜ್ಯದಲ್ಲಿ ಸದ್ಯ ಹಾವೇರಿ(ಶೇ.4.50), ಕಲಬುರ್ಗಿ (3.18) ಹಾಗೂ ಬೀದರ್ (0.74) ಜಿಲ್ಲೆಗಳ ಪಾಸಿಟಿವಿಟಿ ಮಾತ್ರ ಶೇ.5ಕ್ಕಿಂತ ಕೆಳಗಿವೆ. ಗದಗ್, ಧಾರವಾಡ, ರಾಯಚೂರು, ಬಾಗಲಕೋಟೆ, ರಾಮನಗರ,ಯಾದಗಿರಿ ಹಾಗೂ ಬೆಂಗಳೂರು ನಗರ ಜಿಲ್ಲೆ ಗಳ ಪಾಸಿಟಿವಿಟಿ ಪ್ರಮಾಣ 5 ಮತ್ತು 10ರ ನಡುವೆ ಇದೆ. ಮೈಸೂರು (27.74), ಚಿಕ್ಕಮಗಳೂರು (23.44), ದಾವಣಗೆರೆ (20.19), ಚಿತ್ರದುರ್ಗ (18.22) ಹಾಗೂ ಹಾಸನ (18.04) ಮೊದಲ ಐದು ಸ್ಥಾನಗಳನ್ನು ಹೊಂದಿವೆ.
ಕೋವಿಡ್-19 ಎರಡನೇ ಅಲೆಯಲ್ಲಿ ಸದ್ಯ 30ರಿಂದ 39 ವರ್ಷ ಪ್ರಾಯದವರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ಕಂಡುಬರುತ್ತಿದೆ. 20ರಿಂದ 29, 40-49 ಹಾಗೂ 50-59 ವಯೋಮಾನದವು ನಂತರದ ಸ್ಥಾನಗಳಲ್ಲಿದ್ದಾರೆ.
ಈ ಅವಧಿಯಲ್ಲಿ ಸೋಂಕಿನಿಂದ ಮೃತ ಪಡುವವರ ವಯೋಮಿತಿಯನ್ನು ಗಮನಿಸುವಾಗ 60-69ರ ವಯೋಮಾನದವರು ಮೊದಲ ಸ್ಥಾನದಲ್ಲಿ ದ್ದಾರೆ. 50-59, 70-79, 40-49 ವಯೋವರ್ಗ ನಂತರದ ಸ್ಥಾನಗಳಲ್ಲಿವೆ. ಮರಣ ಪ್ರಮಾಣವು 90ರಿಂದ 99 ವಯೋವರ್ಗದಲ್ಲಿ (10.8ಶೇ.) ಅತ್ಯಧಿಕವಿದೆ.
ಜಿಲ್ಲೆಯಲ್ಲಿ ಮರಣ ಪ್ರಮಾಣ: ಜಿಲ್ಲಾ ಮಟ್ಟದಲ್ಲಿ ಕೋವಿಡ್ ಮರಣ ಪ್ರಮಾಣವನ್ನು ಗಮನಕ್ಕೆ ತೆಗೆದುಕೊಂಡರೆ ಚಿತ್ರದುರ್ಗ (ಶೇ.0.49) ಜಿಲ್ಲೆ ಬಿಟ್ಟರೆ ಉಡುಪಿ ಜಿಲ್ಲೆಯಲ್ಲಿ (ಶೇ.0.55) ಅತೀ ಕಡಿಮೆ ಮರಣ ವರದಿಯಾ ಗುತ್ತಿದೆ. ಈ ವಿಷಯದಲ್ಲಿ ಹಾವೇರಿ (2.31) ಕೊನೆಯ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ (1.19) ಹಾಗೂ ಉತ್ತರ ಕನ್ನಡ (1.30) ಕ್ರಮವಾಗಿ 19 ಮತ್ತು 23ನೇ ಸ್ಥಾನಗಳಲ್ಲಿವೆ. ಇದರಲ್ಲಿ ರಾಜ್ಯದ ಸರಾಸರಿ ಶೇ.1.16 ಆಗಿದೆ ಎಂದು ಅಂಕಿಅಂಶ ಹೇಳುತ್ತವೆ. ಕಳೆದ ಏಳು ದಿನಗಳ ಮರಣ ಪ್ರಮಾಣವನ್ನು ನೋಡಿದಾಗ ಉಡುಪಿ ಜಿಲ್ಲೆ (0.38) ಉತ್ತಮ ಸಾಧನೆ ಮಾಡಿದೆ.
ಈ ಎಲ್ಲಾ ಅಂಕಿಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಮುಖ್ಯಮಂತ್ರಿ ಹೇಳಿದಂತೆ ಸದ್ಯೋಭವಿಷ್ಯದಲ್ಲಿ ಲಾಕ್‌ಡೌನ್‌ನಿಂದ ವಿನಾಯಿತಿ ಪಡೆಯಲು ಜಿಲ್ಲೆ ವಿಶೇಷ ಪರಿಶ್ರಮ ಪಡಬೇಕಾಗಿದೆ. ಸದ್ಯ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 3000 ಮಂದಿ ಕೋವಿಡ್ ಪರೀಕ್ಷೆ ಗೊಳಗಾದರೆ, ಇವರಲ್ಲಿ 500ರಷ್ಟು ಮಂದಿ ಪಾಸಿಟಿವ್ ಬರುತಿದ್ದಾರೆ. ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಳಿಯಲು ಇದು 150ಕ್ಕಿಳಿಯಲೇ ಬೇಕಿದೆ. ಆದರೆ ಸದ್ಯ ಜಿಲ್ಲೆಯ ಮೂಲೆಮೂಲೆಯ ಗ್ರಾಮೀಣ ಪ್ರದೇಶಗಳ ಮನೆಮನೆಗೂ ಸೋಂಕು ತಲುಪಿರುವುದರಿಂದ ಸದ್ಯಕ್ಕಂತೂ ಇದು ಕೆಲವು ದಿನಗಳಲ್ಲಿ ಸಾಧ್ಯವಾಗಲಾರದು.
3ನೇ ಅಲೆ ಮಾತ್ರವಲ್ಲ 4,5... ಇರಬಹುದು
ಕೊರೋನ ಮೊದಲ ಅಲೆಯಿಂದ ಯಾವುದೇ ಪಾಠ ಕಲಿಯದೇ, ಅದನ್ನು ಯಶಸ್ವಿಯಾಗಿ ಎದುರಿಸಲು ಬೇಕಾದ ಸಿದ್ಧತೆ ನಡೆಸದೇ ಎರಡನೇ ಅಲೆ, ಮನೆ ಮನೆಗೆ ಕಾಲಿರಿಸಲು ಅವಕಾಶ ಮಾಡಿಕೊಟ್ಟ ಭಾರತಕ್ಕೆ ಈಗ ಮೂರನೇ ಅಲೆಯ ‘ಭೂ’ ಬೆನ್ನು ಹತ್ತಿಕೊಂಡು ಬರುತ್ತಿದೆ. ವಿಶ್ವದಲ್ಲಿ ಅತ್ಯಧಿಕ ಸಂಖ್ಯೆಯ ಸೋಂಕು ಶಾಸ್ತ್ರಜ್ಞರನ್ನು (ಎಪಿಡಮಾಲಜಿಸ್ಟ್) ಭಾರತ ಹೊಂದಿದ್ದರೂ, ಅವರ ಪರಿಣಿತಿಯ ಲಾಭವನ್ನು ದೇಶ ಬಳಸಿ ಕೊಳ್ಳದೇ ಜನಸಾಮಾನ್ಯರು ಇದರ ಪರಿಣಾಮವನ್ನು ಅನುಭವಿಸುವಂತಾಗಿದೆ.
ಇಂದು ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮೆರಿಕದ ಮಿಚಿಗನ್ ವಿವಿಯ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಎಪಿಡಮಾಲಜಿಸ್ಟ್ ಡಾ.ಭ್ರಮರ ಮುಖರ್ಜಿ, ನಾವು ಕೇವಲ ಮೂರನೇ ಅಲೆಗೆ ಮಾತ್ರವಲ್ಲ ಭವಿಷ್ಯದಲ್ಲಿ 4.5.6... ಅಲೆಗಳಿಗೂ ಸಿದ್ಧವಾಗಿರಬೇಕು. ಅದೇ ರೀತಿ ಇನ್ನಷ್ಟು ಪ್ರಬಲವಾದ ರೂಪಾಂತರಿತ ತಳಿಗಳ ವಿರುದ್ಧವೂ ಸೆಣಸಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ.
ಎರಡನೇ ಅಲೆಗೆ ಮಾರ್ಚ್ ತಿಂಗಳಲ್ಲಿ ದೇಶ ಸಿದ್ಧವಾಗಿದ್ದರೆ, ದೇಶಾದ್ಯಂತ ನಾವು ಇಷ್ಟೊಂದು ಸಾವುಗಳನ್ನು ನೋಡಬೇಕಿರಲಿಲ್ಲ. ಸಾವಿರಾರು ಮಂದಿಯನ್ನು ಉಳಿಸಿಕೊಳ್ಳಬಹುದಿತ್ತು. ಈಗಲೂ ಲಸಿಕೆ ನೀಡಿಕೆಯನ್ನು ಹೆಚ್ಚು ವ್ಯವಸ್ಥಿತ ವಾಗಿ, ಗೊಂದಲಗಳಿಲ್ಲದೇ ಮಾಡಿದರೆ ವೈರಸ್‌ನ ಮೇಲೆ ಹಿಡಿತ ಸಾಧಿಸಲು ಸಾಧ್ಯವಿದೆ ಎಂದವರು ಹೇಳಿದ್ದಾರೆ.