ಜಾಗತಿಕ ತಾಪಮಾನದ ಸ್ಫೋಟಕ ಬಿಂದು ಸಕ್ರಿಯಗೊಂಡಿರಬಹುದು: ವಿಜ್ಞಾನಿ ಎಚ್ಚರಿಕೆ

Update: 2021-06-16 22:11 IST
ಜಾಗತಿಕ ತಾಪಮಾನದ ಸ್ಫೋಟಕ ಬಿಂದು ಸಕ್ರಿಯಗೊಂಡಿರಬಹುದು: ವಿಜ್ಞಾನಿ ಎಚ್ಚರಿಕೆ
photo: twitter/@NASA_ICE
  • whatsapp icon

ಬರ್ಲಿನ್ (ಜರ್ಮನಿ), ಜೂ. 16: ಹಿಂದಕ್ಕೆ ತರಲಾಗದ ಜಾಗತಿಕ ತಾಪಮಾನದ ಸ್ಫೋಟಕ ಬಿಂದು ಈಗಾಗಲೇ ಸಕ್ರಿಯಗೊಂಡಿರಬಹುದು ಎಂದು ಆರ್ಕ್ಟಿಕ್ ಖಂಡದ ಶೋಧನೆಗೆ ತೆರಳಿರುವ ಬೃಹತ್ ತಂಡವೊಂದರ ನಾಯಕತ್ವ ವಹಿಸಿದ್ದ ವಿಜ್ಞಾನಿ ಮಂಗಳವಾರ ಎಚ್ಚರಿಸಿದ್ದಾರೆ.

‘‘ಹಿಂದೆ ಆರ್ಕ್ಟಿಕ್ ನ ಸಮುದ್ರದಲ್ಲಿ ಬೇಸಿಗೆಯಲ್ಲಿ ಕಂಡುಬರುತ್ತಿದ್ದ ಮಂಜುಗಡ್ಡೆ ನಾಪತ್ತೆಯಾಗಿರುವುದು ಮೊದಲ ನೆಲಬಾಂಬ್ ಆಗಿದೆ. ಇದು ಜಾಗತಿಕ ತಾಪಮಾನವನ್ನು ಈ ಮಟ್ಟಕ್ಕೆ ತಳ್ಳುವ ಪ್ರಕ್ರಿಯೆಯಲ್ಲಿ ನಾವು ಸ್ಫೋಟಿಸಿದ ಮೊದಲ ಸ್ಫೋಟಕವಾಗಿದೆ’’ ಎಂದು ವಿಜ್ಞಾನಿ ಮಾರ್ಕಸ್ ರೆಕ್ಸ್ ಹೇಳಿದರು.

ಉತ್ತರ ಧ್ರುವಕ್ಕೆ ಸಂಶೋಧನೆಗಾಗಿ ತೆರಳಿದ ಜಗತ್ತಿನ ಅತಿ ದೊಡ್ಡ ತಂಡದ ನಾಯಕತ್ವವನ್ನು ರೆಕ್ಸ್ ವಹಿಸಿದ್ದರು. ಆ ಸಂಶೋಧನೆಯಲ್ಲಿ 20 ದೇಶಗಳ 300ಕ್ಕೂ ಹೆಚ್ಚಿನ ವಿಜ್ಞಾನಿಗಳು ಭಾಗವಹಿಸಿದ್ದರು.

ಆರ್ಕ್ಟಿಕ್ ನಲ್ಲಿ 389 ದಿನಗಳ ಕಾಲ ಸಂಚರಿಸಿದ ಬಳಿಕ ತಂಡವು ಕಳೆದ ವರ್ಷದ ಅಕ್ಟೋಬರ್ನಲ್ಲಿ ಜರ್ಮನಿಗೆ ಮರಳಿತ್ತು. ಸಂಶೋಧನೆಯ ಅವಧಿಯಲ್ಲಿ, ಆರ್ಕ್ಟಿಕ್ ಸಮುದ್ರ ಸಾಯುತ್ತಿರುವುದನ್ನು ಅವರು ಪತ್ತೆಹಚ್ಚಿ ದ್ದಾರೆ ಹಾಗೂ ಇನ್ನ ಕೆಲವೇ ದಶಕಗಳಲ್ಲಿ ಹಿಮಮುಕ್ತ ಬೇಸಿಗೆ ಕಾಲಗಳನ್ನು ನಾವು ನೋಡಬೇಕಾಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ದಾಖಲೆಗಳನ್ನು ಸಂಗ್ರಹಿಸಿಡುವ ಪದ್ಧತಿ ಆರಂಭಗೊಂಡಂದಿನಿಂದ, 2020ರ ಬೇಸಿಗೆಯಲ್ಲಿ ಆರ್ಕ್ಟಿಕ್ ಸಮುದ್ರದ ಹಿಮ ವೇಗವಾಗಿ ನಾಪತ್ತೆಯಾಗಿದೆ ಹಾಗೂ ಬೇಸಿಗೆಯಲ್ಲಿ ಸಮುದ್ರ ಹಿಮದ ಹರಡುವಿಕೆ ಪ್ರಮಾಣ ದಶಕಗಳ ಹಿಂದೆ ಇದ್ದಿದ್ದಕ್ಕಿಂತ ಅರ್ಧಕ್ಕೆ ಇಳಿದಿದೆ ಎನ್ನುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ ಎಂದು ರೆಕ್ಸ್ ಹೇಳಿದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News