ಬೀದಿನಾಯಿಗಳ ಸಾಕುತಾಯಿ ಶಾಲೆಟ್!
ಮಂಗಳೂರು: ಆಕೆ ಬೀದಿನಾಯಿಗಳ ತಾಯಿ. ಹೆಸರು ಶಾಲೆಟ್. ಸದ್ಯ ಮಂಗಳೂರಿನ ಮಂಗಳಾದೇವಿ ಬಳಿಯ ನಿವಾಸಿ. 70 ಹರೆಯದ ಅವರು ಪ್ರತೀದಿನ ಮನೆಯಲ್ಲಿ ಅನ್ನ ಬೇಯಿಸಿ ಸಂಜೆ ಬೀದಿ ನಾಯಿಗಳಿಗೆ ತಂದು ಬಡಿಸುತ್ತಾರೆ.
ಮಂಗಳೂರಿನಲ್ಲಿ ಲಾಕ್‌ಡೌನ್, ವಾರಾಂತ್ಯದ ಕರ್ಫ್ಯೂ ಹೇರಿದ ಸಂದರ್ಭದಲ್ಲಿ ಹೆಚ್ಚಿನ ಜನರು ಬೀದಿಬದಿಯ ಜನರು, ಕಾರ್ಮಿಕರಿಗೆ ಊಟ ಉಪಾಹಾರದ ಪೊಟ್ಟಣ ಒದಗಿಸುವುದರಲ್ಲಿ ತಲ್ಲೀನರಾಗಿದ್ದರು. ಸಾಕಷ್ಟು ಸ್ವಯಂಸೇವಾ ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದವು. ಆದರೆ, ಶಾಲೆಟ್ ಅವರು ಮಂಗಳೂರಿನ ಮಂಗಳಾದೇವಿ, ಪಾಂಡೇಶ್ವರ, ಎ.ಬಿ. ಶೆಟ್ಟಿ ಸರ್ಕಲ್, ಸ್ಟೇಟ್ ಬ್ಯಾಂಕ್, ವೆನ್ಲಾಕ್, ಕ್ಲಾಕ್ ಟವರ್ ಮತ್ತಿತರ ಕಡೆಗಳಲ್ಲಿ ಲಾಕ್ ಡೌನ್‌ನಿಂದ ವಾಹನಗಳು ಸಿಗದೇ ಇದ್ದಾಗ ದಿನಕ್ಕೆ ಸುಮಾರು ನಾಲ್ಕೈದು ಕಿಲೋಮೀಟರ್ ನಡೆದು ಬೀದಿನಾಯಿಗಳಿಗೆ ಊಟ ನೀಡುತ್ತಾರೆ.
ಎರಡು ದಿನಗಳ ಹಿಂದೆ ಶಾಲೆಟ್ ಮಂಗಳೂರಿನ ಮಿನಿ ವಿಧಾನ ಸೌಧದ ಬಳಿ ನಾಯಿಗಳಿಗೆ ಊಟ ಬಡಿಸುತ್ತಿದ್ದರು. ಮೊದಲು ಒಂದು ಕಾಗದದ ಮೇಲೊಂದು ಬಾಳೆ ಎಲೆಯ ತುಂಡು ಹಾಕಿ ಅದರ ಮೇಲೆ ಸಾಂಬಾರು ಬೆರೆಸಿದ ಅನ್ನವನ್ನು ಅವರು ಬಡಿಸುತ್ತಾರೆ. ನಾಯಿಗಳು ಅವರನ್ನು ಗುರುತಿಸಿ ಬರುತ್ತವೆ. ಅನ್ನವನ್ನು ತಿನ್ನುತ್ತವೆ. ಅವರ ಜೊತೆ ಶಾಲೆಟ್ ಮಾತನಾಡುತ್ತಾರೆ. ನಾಯಿಗಳು ಬಾಲ ಅಲ್ಲಾಡಿಸಿ ವಿಧೇಯತೆ ಪ್ರದರ್ಶಿಸುತ್ತವೆ. ಊಟ ಬಡಿಸಿ ಅದೇ ರಸ್ತೆಯಲ್ಲಿ ಶಾಲೆಟ್ ಮುಂದೆ ಸಾಗುತ್ತಾರೆ. ಅವರ ಹಿಂದೆ ನಾಯಿಗಳ ಗುಂಪು ಸಾಗುತ್ತದೆ!.
ಈ ಕುರಿತು ಮಾತನಾಡಿದ ಶಾಲೆಟ್, ‘ನಮಗೆ ಬಾಯಿ ಬರುತ್ತದೆ. ನಾವು ಹಸಿವಾದಾಗ ಆ ಬಗ್ಗೆ ವ್ಯಕ್ತಪಡಿಸುತ್ತೇವೆೆ. ಆದರೆ ಬೀದಿನಾಯಿಗಳ ಹಸಿವನ್ನು ಯಾರು ಕೇಳುತ್ತಾರೆ. ಅವುಗಳು ಕೂಡ ಬದುಕಬೇಕಲ್ಲವೇ?. ಅದಕ್ಕಾಗಿ ನಾನು ಪ್ರತಿ ದಿನ ಊಟ ಹಾಕುತ್ತೇನೆ. ದಿನಕ್ಕೆ ಸುಮಾರು 15ರಿಂದ 20 ಕಿಲೋ ಅಕ್ಕಿ ಬೇಕಾಗುತ್ತದೆ’ ಎನ್ನುತ್ತಾರೆ.
ನಾನು ಅಕ್ಕಿ ಅಂಗಡಿಗೆ ಹೋದಾಗ ಅವರ ಬಳಿ ಸತ್ಯ ಹೇಳಿದೆ. ನಾಯಿಗಳಿಗೆ ಹಾಕಲು ಅಕ್ಕಿ ಎಂದೆ ಅವರಿಗೂ ನನ್ನ ಕೆಲಸ ಗೊತ್ತಾಗಿ ಸ್ವಲ್ಪಕಡಿಮೆ ದರದಲ್ಲಿ ಅಕ್ಕಿಕೊಡುತ್ತಾರೆ. ನಾನು ಸಕಲೇಶಪುರದಲ್ಲಿ ಎಸ್ಟೇಟ್ ಹೊಂದಿದ್ದು, ಈಗ ಮಂಗಳೂರಿನಲ್ಲಿ ಒಂದು ಸಣ್ಣ ಮನೆಯಲ್ಲಿ ತಮ್ಮಂದಿರ ಜೊತೆ ಇದ್ದೇನೆ. ಹಣದ ಸಮಸ್ಯೆ ಎದುರಾದಾಗ ಚಿನ್ನಾಭರಣವನ್ನು ಮಾರಿ ಅದರಲ್ಲಿ ಬಂದ ಹಣದಿಂದ ಅಕ್ಕಿ ಖರೀದಿಸಿ ಊಟ ಹಾಕಿದ್ದೇನೆ. ಕೆಲವರು ಅವರಾಗಿಯೇ ಬಂದು ಸಹಾಯ ಮಾಡುತ್ತ್ತಾರೆ ಎನ್ನುವ ಶಾಲೆಟ್, ‘ಒಂದು ದಿನ ಒಬ್ಬ ಹುಡುಗ ನನ್ನ ಮನೆಯ ಮುಂದೆ ಬಂದು ನಿಮಗೆ ಒಂದು ಪಾರ್ಸೆಲ್ ಇದೆ’ ಎಂದು ಕೈಯಲ್ಲಿದ್ದ ಪೊಟ್ಟಣ ತೋರಿಸಿದ. ನನಗೆ ಆ ಪಾರ್ಸೆಲ್ ಮುಟ್ಟಲು ಹೆದರಿಕೆ ಆಯಿತು. ನನ್ನದೆ ಹೆಸರಿನ ಇನ್ಯಾರದೋ ಆಗಿರಬೇಕು. ಬಂದರೆ ಕೊಟ್ಟರಾಯಿತು ಎಂದು ನಾನು ಸಮ್ಮನಿದ್ದೆ. ಎರಡು ದಿನವಾದರೂ ಯಾರೂ ಬರಲಿಲ್ಲ. ಕುತೂಹಲದಿಂದ ತೆರೆದು ನೋಡಿದೆ. ಅದರಲ್ಲಿ ನಾಯಿಗಳಿಗೆ ಹಾಕುವ ಸುಮಾರು ಬಿಸ್ಕೆಟ್‌ಗಳ ಸಹಿತ ತಿಂಡಿಗಳಿದ್ದವು. ಈ ರೀತಿ ಕೆಲವು ಅಪರಿಚಿತರು ಕೂಡ ನಾಯಿಗಳ ಆಹಾರ ನೀಡಲು ಸಹಾಯ ಮಾಡಿದ್ದಾರೆ ಎಂದರು. ‘ನನಗೆ ಯಾವ ಪ್ರಚಾರವೂ ಬೇಕಾಗಿಲ್ಲ. ನಮ್ಮ ಹಾಗೆ ಆ ಜೀವಿಗಳು ಕೂಡ ಬದುಕಬೇಕು ಅಷ್ಟೇ. ಅದಕ್ಕಿಂತ ಹೆಚ್ಚೇನೂ ಇಲ್ಲ. ಸದ್ಯ ಕೊರೋನ ಸಂದರ್ಭದಲ್ಲಿ ನಾಯಿಗಳ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ.
ಸದ್ಯ ವಾಹನ ಸಿಗುತ್ತಾ ಇಲ್ಲ. ನಡೆದುಕೊಂಡೇ ಬರಬೇಕಾಗಿದೆ’ ಎನ್ನುತ್ತಾರೆ ಶಾಲೆಟ್.
ನಾಯಿಗಳಿಗೆ ಅನ್ನ ಬಡಿಸುವ ಕಾರ್ಯವನ್ನು ಸುಮಾರು 20 ವರ್ಷಗಳಿಂದ ಮಾಡುತ್ತಿದ್ದೇನೆ. ಈಗ ನನಗೆ ವಯಸ್ಸು 70 ಆಗುತ್ತಾ ಬಂತು. ಇನ್ನೆಷ್ಟು ದಿನ ಈ ಕಾರ್ಯ ಮಾಡುತ್ತೇನೋ ಗೊತ್ತಿಲ್ಲ. ನನ್ನ ಕೆಲಸ ನೋಡಿ ಕೆಲವರು ಸಹಾಯಕ್ಕೆ ಬರುತ್ತಾರೆ. ಇದಕ್ಕೆ ಎಷ್ಟು ವೆಚ್ಚವಾಯಿತು ಎಂದು ಲೆಕ್ಕ ಇಟ್ಟಿಲ್ಲ. ಹಣದ ಲೆಕ್ಕಾಚಾರ ಮಾಡಿದರೆ ನಾನು ಸಂತೋಷದಿಂದ ಈ ಕೆಲಸ ಮಾಡಲು ಸಾಧ್ಯವಿಲ್ಲ. ಈ ಕೆಲಸದಲ್ಲಿ ನನಗೆ ತೃಪ್ತಿ ಇದೆ. ಸದ್ಯ ನನ್ನ ಮನೆಯಲ್ಲಿ 20ಕ್ಕೂ ಹೆಚ್ಚು ನಾಯಿಗಳಿವೆ. ಅವುಗಳೆಲ್ಲವೂ ಒಂದು ಕಾಲದಲ್ಲಿ ಬೀದಿಯಲ್ಲಿದ್ದವು.
ಶಾಲೆಟ್