ಪಡುಬಿದ್ರಿ ರಾ.ಹೆ. ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಮನವಿ

Update: 2021-06-28 14:29 GMT

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಪೂರ್ಣಗೊಂಡಿರುವ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ಪಡುಬಿದ್ರಿಯಲ್ಲಿರುವ ನವಯುಗ ಕಂಪೆನಿ ಕಚೇರಿಗೆ ಸೋಮವಾರ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಮನವಿ ಸಲ್ಲಿಸಿದರು.

ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ನೇತೃತ್ವದಲ್ಲಿ ಸದಸ್ಯರು ಗುತ್ತಿಗೆದಾರ ನವಯುಗ ಕಂಪನಿ ಯೋಜನಾ ಪ್ರಬಂಧಕ ಎ.ಜೆ. ಶ್ರೀನಿವಾಸ್ ಅವರಿಗೆ ಪಡುಬಿದ್ರಿಯಲ್ಲಿ ಅಪೂರ್ಣ ಕಾಮಗಾರಿಯಿಂದ ಗ್ರಾಮದಲ್ಲಾಗುತ್ತಿರುವ ಸಮಸ್ಯೆಗಳ ಬಗ್ಗೆ ಕಂಪೆನಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಈಗಾಗಲೇ ಗ್ರಾಮ ಪಂಚಾಯಿತಿನಿಂದ ಹಲವು ಬಾರಿ ಕಂಪೆನಿಗೆ ಮನವಿ ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರವಿ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಯೋಜನೆಯ ಮುಖ್ಯಸ್ಥರು ಸ್ಥಳಕ್ಕೆ ಆಗಮಿಸಿ ಸೂಕ್ತ ಉತ್ತರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. 

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪ್ರವೇಶ ದ್ವಾರದ ಬಳಿ ಮಳೆನೀರು ಹರಿಯಲು ಸಮರ್ಪಕ ಒಳಚರಂಡಿ, ಬಾಕಿ ಉಳಿದಿರುವ ಸರ್ವಿಸ್ ರಸ್ತೆ ಸಹಿತ ಒಳಚರಂಡಿ, ಮಾರುಕಟ್ಟೆ ಪ್ರದೆಶದಿಂದ ಇಕ್ಕೆಲಗಳಲ್ಲಿನ ಚರಂಡಿಯನ್ನು ಹೆದ್ದಾರಿ ಮುಖ್ಯ ಒಳಚರಂಡಿಗೆ ಸಂಪರ್ಕಿಸುವುದು, ಕೇರಿ ರಸ್ತೆ ಚರಂಡಿಯನ್ನು ಹೆದ್ದಾರಿಗೆ ಸಂಪರ್ಕಿಸುವುದು, ಕೋರ್ಟ್ ಯಾರ್ಡ್‍ನಿಂದ ಹೆದ್ದಾರಿ ಇಕ್ಕೆಲಗಳಲ್ಲಿ ಚರಂಡಿಯನ್ನು ವಿಸ್ತರಿಸಿ ಕಾಮಿನಿ ನದಿಗೆ ಸಂಪರ್ಕ ಕಲ್ಪಿಸುವುದು, ಸರ್ವಿಸ್ ರಸ್ತೆಯಲ್ಲಿ ನಿರ್ಮಿಸಿರುವ ಮಳೆ ನೀರು ಹರಿಯುವ ತೂಬುಗಳನ್ನು ಸಮರ್ಪಕವಾಗಿ ಒಳಚರಂಡಿಗೆ ಸಂಪರ್ಕಿಸುವುದು, ಗ್ರಾಪಂ ಸೂಚಿಸಿದ ಸ್ಥಳದಲ್ಲಿ ಬಸ್ ನಿಲ್ದಾಣ ನಿರ್ಮಾಣ, ಆಟೋ, ಟ್ಯಾಕ್ಸಿ, ಟೆಂಪೋ ನಿಲುಗಡೆಗೆ ಸೂಕ್ತ ಅವಕಾಶ ಕಲ್ಪಿಸುವುದು ಹಾಗೂ ಪೇಟೆ ಭಾಗದಲ್ಲಿ ಅಳವಡಿಸಿರುವ ದಾರಿದೀಪಗಳು ಉರಿಯುವಂತೆ ಶೀಘ್ರ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸ್ಥಳ ಪರಿಶೀಲನೆ ನಡೆಸಿದ ಯೋಜನೆ ಪ್ರಬಂಧಕ ಶ್ರೀನಿವಾಸ್ ಅವರನ್ನು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರೂಪಲತಾ, ಉಡುಪಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನೀತಾ ಗುರುರಾಜ್, ಪಡುಬಿದ್ರಿ ಠಾಣಾಧಿಕಾರಿ ದಿಲೀಪ್ ಆರ್.ಜಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News