ವಾತ್ಸಲ್ಯ ಯೋಜನೆ; ಉಡುಪಿ ಜಿಲ್ಲೆಯ 2.40 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ: ಉಸ್ತುವಾರಿ ಸಚಿವ ಬೊಮ್ಮಾಯಿ

Update: 2021-06-28 15:08 GMT

ಕಾರ್ಕಳ, ಜೂ.28: ಉಡುಪಿ ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆಯನ್ನು ಎದುರಿಸಲು ಮುಂಜಾಗ್ರತಾ ಕ್ರಮವಾಗಿ ವಾತ್ಸಲ್ಯ ಯೋಜನೆಯಡಿ ಆಗಸ್ಟ್ 15ರೊಳಗೆ ಜಿಲ್ಲೆಯ 2.40 ಲಕ್ಷ ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸೋಮವಾರ ಕಾರ್ಕಳದಲ್ಲಿ ‘ವಾತ್ಸಲ್ಯ’ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲೆ ನೀಡಿ ಅವರು ಮಾತನಾಡುತಿದ್ದರು. ಕೋವಿಡ್ 3ನೇ ಅಲೆ ಮಕ್ಕಳಿಗೆ ಹೆಚ್ಚಾಗಿ ಹರಡುವ ಸಾಧ್ಯತೆಗಳಿದ್ದು, ಇದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಮಕ್ಕಳ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಶಿಬಿರದಲ್ಲಿ ಅಪೌಷ್ಠಿಕತೆಯಿಂದ ಕೂಡಿದ ಮಕ್ಕಳನ್ನು ಗುರುತಿಸಿ, ಅವರಿಗೆ ಪೌಷ್ಠಿಕ ಆಹಾರ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಔಷಧಿಗಳ ವ್ಯವಸ್ಥೆ ಮಾಡಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಯನ್ನೂ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಯ ಅಲ್ಪಾವಧಿ ಯಲ್ಲಿ 24,000 ಆಕ್ಸಿಜನ್ ಬೆಡ್, ಸುಮಾರು 5,000ಕ್ಕಿಂತ ಹೆಚ್ಚು ಐಸಿಯು ಬೆಡ್ ಹಾಗೂ 2,000ಕ್ಕಿಂತ ಹೆಚ್ಚು ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಧಾನಮಂತ್ರಿಗಳ ಸಂಪೂರ್ಣ ಬೆಂಬಲದಿಂದ ಕೋವಿಡ್ ಲಸಿಕೆಗಳು ಸಕಾಲಕ್ಕೆ ದೊರೆತಿವೆ. ಅದೇ ರೀತಿ ಇಡೀ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆಯನ್ನು ಮಾಡಲಾಗಿದೆ ಎಂದವರು ತಿಳಿಸಿದರು.

ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, ವಾತ್ಯಲ್ಯ ಕಾರ್ಯಕ್ರಮದಲ್ಲಿ ತಾಲೂಕಿನ 40,000 ಮಕ್ಕಳನ್ನು ಆರೋಗ್ಯ ತಪಾಸಣೆಗೊಳಪಡಿಸಲಾ ಗುವುದು. ತಾಲೂಕಿನ 230 ಅಂಗನವಾಡಿಗಳು, 246 ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ತಪಾಸಣಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ನಕಲ್ಸ್ ನಿಗ್ರಹ ಪಡೆಯ ಎಸ್ಪಿ ನಿಖಿಲ್, ಕುಂದಾಪುರ ಸಹಾಯಕ ಕಮಿಷನರ್ ರಾಜು ಕೆ, ಡಿಹೆಚ್‌ಓ ಡಾ. ನಾಗಭೂಷಣ ಉಡುಪ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕಡಿಮೆ ತೂಕ, ಬೆಳವಣಿಗೆ ಕುಂಠಿತ ಮಕ್ಕಳ ಮೇಲೆ ಕೇಂದ್ರಿತ ಯೋಜನೆ
ತಜ್ಞರು ಮೂರನೇ ಅಲೆಯಲ್ಲಿ ಮಕ್ಕಳ ಬಗ್ಗೆ ಬಹಳಷ್ಟು ಆತಂಕವನ್ನು ವ್ಯಕ್ತಪಡಿ ಸುತ್ತಿರುವುದರಿಂದ, ಅವರ ಆತಂಕದ ಹಿನ್ನೆಲೆಯಲ್ಲಿ ಸಮಾಜದ ತಳಸ್ತರದಲ್ಲಿರುವ ಮಕ್ಕಳ ಅಪೌಷ್ಠಿಕತೆಯ ಕೊರತೆಯನ್ನು ನೀಗಿಸುವ ಪ್ರಯತ್ನವಾಗಿ ವಾತ್ಸಲ್ಯ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ಬೆಳವಣಿಗೆ ಕುಂಠಿತ ಹಾಗೂ ತೂಕ ಕಡಿಮೆ ಇರುವ ಮಕ್ಕಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಾಗುತ್ತದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅಪೌಷ್ಠಿಕತೆಯಿಂದ ಬಳಲುವ ಮಕ್ಕಳ ಪೌಷ್ಠಿಕತೆ ಹಾಗೂ ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಈ ಶಿಬಿರದ ಮುಖ್ಯ ಉದ್ದೇಶ. ಇದು ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ ಹಾಗೂ ಆರ್‌ಡಿಪಿಐ ಇಲಾಖೆಗಳು ಸಂಯುಕ್ತವಾಗಿ ನಡೆಸುವ ಕಾರ್ಯಕ್ರಮವಾಗಿದೆ . ಪ್ರತಿಯೊಂದು ಪಿಎಚ್‌ಸಿ ಕೇಂದ್ರಗಳು ತಮ್ಮ ವ್ಯಾಪ್ತಿಯ ಪ್ರತಿ ಹಳ್ಳಿಗಳ ಶಾಲೆಗಳಲ್ಲಿ ಶಿಬಿರ ನಡೆಸಿ ಪೌಷ್ಠಿಕತೆ ಕೊರತೆ ಬಗ್ಗೆ ಜನರಲ್ ಚೆಕ್‌ಅಪ್ ಹಾಗೂ ವಿಶೇಷ ಕಾಯಿಲೆ ಇದ್ದರೆ ಮಕ್ಕಳ ತಜ್ಞರ ಮೂಲಕ ಚೆಕ್‌ಅಪ್ ನಡೆಸಿ ಸೂಕ್ತ ಚಿಕಿತ್ಸೆ ನೀಡಬೇಕು.

ಅಲ್ಲದೇ ಮಕ್ಕಳ ಪಾಲಕರು ಹಾಗೂ ಹೆತ್ತವರನ್ನು ಶಿಬಿರಕ್ಕೆ ಕರೆಸಿ ಅವರಿಗೂ ಮಾಹಿತಿ ನೀಡಬೇಕು. ಅದ್ಯಾಪಕರು, ಪಾಲಕರಿಗೆ ಲಸಿಕೆಯನ್ನೂ ನೀಡಬೇಕು. ಇಲ್ಲಿ ಮಕ್ಕಳಿಗೆ ಮಹಿಳಾ ಇಲಾಖೆ ಮೂಲಕ ಪೌಷ್ಠಿಕ ಆಹಾರದ ಕಿಟ್ ನೀಡಿದರೆ, ಆರೋಗ್ಯ ಇಲಾಖೆಯ ಮೂಲಕ ಟಾನಿಕ್ ಸೇರಿದಂತೆ ಔಷಧಿ ಕಿಟ್‌ನ್ನು ನೀಡಲಾಗುತ್ತದೆ. ಒಟ್ಟಿನಲ್ಲಿ ಮಕ್ಕಳ ಸಮಗ್ರ ಆರೋಗ್ಯ ಚೆಕ್‌ಅಪ್ ಇಲ್ಲಿ ನಡೆಯುತ್ತದೆ ಎಂದು ಸಚಿವರು ತಿಳಿಸಿದರು.

ಇದರೊಂದಿಗೆ ಪ್ರತಿ ಅಂಗನವಾಡಿ ಮಕ್ಕಳಿಗೆ ಈಗ ಕೋವಿಡ್ ಕಾರಣ ಆಹಾರ ನೀಡಲಾಗುತ್ತಿಲ್ಲ. ಇದಕ್ಕೆ ಬದಲು ಈಗ ಅಕ್ಷರ ದಾಸೋಹ ಕಿಟ್‌ನ್ನು ನೀಡಲಾಗುತ್ತದೆ ಎಂದ ಬೊಮ್ಮಾಯಿ, ಜಿಲ್ಲೆಯ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಒಂದು-ಒಂದೂವರೆ ತಿಂಗಳಲ್ಲಿ ಮುಗಿಯಬೇಕು. ಈ ವೇಳೆ ಮಕ್ಕಳ ಸದೃಢರಾಗಿ ಕೊರೋನ ಎದುರಿಸುವ ಶಕ್ತಿ ಅವರಿಗೆ ಬರಬೇಕೆನ್ನುವುದು ನಮ್ಮ ನಿರೀಕ್ಷೆ. ಜೂ.24ರಂದು ಹಾವೇರಿಯಲ್ಲಿ ಇಂದು ಉಡುಪಿಯಲ್ಲಿ ಈ ಶಿಬಿರಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News