ದ.ಕ.ಜಿಲ್ಲೆಯಲ್ಲಿ ಜುಲೈ 1ರಿಂದ ಶೇ.50ರಷ್ಟು ಸಿಟಿ, ಸರ್ವಿಸ್ ಬಸ್ ಸಂಚಾರ

Update: 2021-06-29 13:56 GMT
ಸಾಂದರ್ಭಿಕ ಚಿತ್ರ

ಮಂಗಳೂರು,ಜೂ.29: ದ.ಕ.ಜಿಲ್ಲೆಯಲ್ಲಿ ಜುಲೈ 1ರಿಂದ ಶೇ.50ರಷ್ಟು ಸಿಟಿ ಮತ್ತು ಸರ್ವಿಸ್ ಬಸ್‌ಗಳು ಸಂಚಾರ ಆರಂಭಿಸಲಿದೆ ಎಂದು ಕೆನರಾ ಬಸ್ ಮಾಲಕರ ಅಸೋಸಿಯೇಶನ್ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮತ್ತು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಸರಕಾರದ ಮಾರ್ಗಸೂಚಿಯನ್ನು ಯಥಾವತ್ತಾಗಿ ಪಾಲಿಸಲು ನಮಗೆ ಸಾಧ್ಯವಿಲ್ಲ. ಹಾಗಾಗಿ ಕೆಲವು ವಿನಾಯಿತಿಗಳನ್ನು ನೀಡಬೇಕು ಎಂಬ ಬೇಡಿಕೆಯನ್ನು ಜಿಲ್ಲಾಡಳಿತದ ಮುಂದಿಟ್ಟಿದ್ದೇವೆ. ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಖರೀದಿ ಸಹಿತ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆದಿಡಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಆದರೆ ನಾವು ಇನ್ನೂ ಸ್ವಲ್ಪ ಸಮಯವನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದ್ದೇವೆ. ಜಿಲ್ಲಾಡಳಿತ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಎಂದು ಕಾದು ನೋಡಬೇಕಾಗಿದೆ. ಆದಾಗ್ಯೂ ಜು.1ರಿಂದ ಬಸ್‌ಗಳನ್ನು ರಸ್ತೆಗೆ ಇಳಿಸಲಿದ್ದೇವೆ ಎಂದು ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಬಸ್ಸಿನಲ್ಲಿರುವ ಸೀಟಿನ ಅರ್ಧದಷ್ಟು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಡೀಸೆಲ್ ಬೆಲೆ ಏರಿಕೆಯಾದರೂ ಕೂಡ ಪ್ರಯಾಣ ದರ ಹೆಚ್ಚಿಸಿ ಎಂದು ಆಗ್ರಹಿಸುವ ಸ್ಥಿತಿಯಲ್ಲಿ ನಾವಿಲ್ಲ. ಜನಸಾಮಾನ್ಯರು ಕೂಡ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಅಲ್ಲದೆ ಏಕಾಎಕಿ ಜಿಲ್ಲೆಯ ಎಲ್ಲಾ ಸಿಟಿ ಮತ್ತು ಸರ್ವಿಸ್ ಬಸ್‌ಗಳನ್ನು ಓಡಿಸಲಾಗದು. ಕೆಲವು ದಿನದ ಮಟ್ಟಿಗೆ ಎಲ್ಲಾ ರೂಟಿನಲ್ಲೂ ಶೇ.50ರಷ್ಟು ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದ್ದೇವೆ. ಬಳಿಕ ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News