​ಮಂಗಳೂರು: ಜು.1ರಿಂದ ಖಾಸಗಿ ಸಿಟಿ, ಸರ್ವಿಸ್ ಬಸ್ ಸಂಚಾರ ಆರಂಭ

Update: 2021-06-30 12:21 GMT

ಮಂಗಳೂರು, ಜೂ.30: ಕೊರೋನ ಸೋಂಕನ್ನು ನಿಗ್ರಹಿಸುವ ಸಲುವಾಗಿ ಲಾಕ್‌ಡೌನ್ ವಿಧಿಸಲ್ಪಟ್ಟ ಹಿನ್ನಲೆಯಲ್ಲಿ ಎಪ್ರಿಲ್ 28ರಿಂದ ಸ್ಥಗಿತಗೊಂಡಿದ್ದ (ಸುಮಾರು 64 ದಿನಗಳು) ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್ ಸಂಚಾರವು ದ.ಕ.ಜಿಲ್ಲೆಯಲ್ಲಿ ಜು.1ರಿಂದ ಆರಂಭಗೊಳ್ಳಲಿದೆ. ಈ ಮಧ್ಯೆ ಜು.1ರಿಂದ ಅನ್ವಯಗೊಳ್ಳುವಂತೆ ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್ ಪ್ರಯಾಣ ದರವೂ ಹೆಚ್ಚಳಗೊಂಡಿದೆ.

ಈ ಬಗ್ಗೆ ‘ವಾರ್ತಾಭಾರತಿ’ಯ ಜೊತೆ ಮಾತನಾಡಿದ ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ಬ ‘ಪ್ರಸ್ತುತ ಜಾರಿಯಲ್ಲಿರುವ ಬಸ್ ಪ್ರಯಾಣ ದರವು 1 ಲೀ. ಡೀಸೆಲ್‌ಗೆ 56 ರೂ. ಇದ್ದಾಗ ಏರಿಕೆ ಮಾಡಿದ್ದಾಗಿದೆ. ಆ ಬಳಿಕ ಏರಿಕೆ ಮಾಡಿಲ್ಲ. ಈಗ ಡೀಸೆಲ್‌ಗೆ 93 ರೂ. ದಾಟಿದೆ. ಹಾಗಾಗಿ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಸದ್ಯ ನಾವು ಶೇ.20ರಷ್ಟು ಮಾತ್ರ ದರ ಹೆಚ್ಚಿಸಿದ್ದೇವೆ. ಡೀಸೆಲ್ ಮತ್ತು ವಾಹನಗಳ ಬಿಡಿ ಭಾಗಗಳಿಗೆ ಏರಿಕೆಯಾದ ದರಕ್ಕೆ ಅನ್ವಯಿಸಿದಾಗ ಸದ್ಯ ಏರಿಕೆಯಾದ ಬಸ್ ಪ್ರಯಾಣ ದರವು ಹೆಚ್ಚೇನು ಅಲ್ಲ’ ಎಂದು ಹೇಳಿದ್ದಾರೆ.

‘ಕಳೆದ ವರ್ಷ ನಡೆಸಿದ ಸಾರಿಗೆ ಪ್ರಾಧಿಕಾರದ ಸಭೆಯನ್ವಯ ಬಸ್ ಪ್ರಯಾಣ ದರವನ್ನು ಶೇ.20ರಷ್ಟು ಏರಿಕೆ ಮಾಡಲು ಮಾಲಕರಿಗೆ ಅವಕಾಶವಿದೆ. ಅದರಂತೆ ಅವರು ಶೇ.20ರಷ್ಟು ಪ್ರಯಾಣ ದರವನ್ನು ಏರಿಸಿದ್ದಾರೆ. ಆದರೆ ಸಾರಿಗೆ ಪ್ರಾಧಿಕಾರವು ಬಸ್ ಪ್ರಯಾಣ ದರ ಹೆಚ್ಚು ಮಾಡುವುದಕ್ಕೆ ಸದ್ಯ ಅನುಮತಿ ನೀಡಿಲ್ಲ ಎಂದು ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ.

ಕೋವಿಡ್ ಪಾಸಿಟಿವಿಟಿ ದರವು ಶೇ.5ರೊಳಗೆ ಬಂದೊಡನೆ ಲಾಕ್‌ಡೌನ್‌ನಲ್ಲಿ ಮತ್ತಷ್ಟು ವಿನಾಯಿತಿ ಸಿಗಲಿದೆ. ಸದ್ಯ ಪಾಸಿಟಿವಿಟಿ ದರವು ಕಡಿಮೆಯಾಗುತ್ತಾ ಬಂದಿದೆ. ಹಾಗಾಗಿ ಬಸ್‌ಗಳ ಸಂಚಾರಕ್ಕೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

2020ರ ಜೂ.1ರಂದು ಕನಿಷ್ಟ ಪ್ರಯಾಣ ದರ 10 ರೂ. ಇದ್ದುದು ಇದೀಗ 12 ರೂ.ಗೆ ಏರಿಸಲಾಗಿದೆ. 2.1 ಕಿ.ಮೀ.ರಿಂದ 4 ಕಿ.ಮೀ.ವರೆಗೆ ಕಳೆದ ವರ್ಷ 10 ರೂ. ಇದ್ದುದು ಈ ಬಾರಿ 13 ರೂ.ಗೆ ಏರಿಸಲಾಗಿದೆ. ಅಲ್ಲದೆ ಕಳೆದ ಬಾರಿ 12 ರೂ. ಇದ್ದುದು 15 ರೂ., 13 ರೂ. ಇದ್ದುದು 16 ರೂ., 14 ರೂ. ಇದ್ದುದು 18 ರೂ., 15 ರೂ. ಇದ್ದುದು 19 ರೂ., 16 ರೂ. ಇದ್ದುದು 20 ರೂ., 17 ರೂ. ಇದ್ದುದು 21ರೂ., 18 ರೂ. ಇದ್ದುದು 23 ರೂ., 20 ರೂ. ಇದ್ದುದು 25 ರೂ., 21 ರೂ. ಇದ್ದುದು 26 ರೂ., 22 ರೂ. ಇದ್ದುದು 28 ರೂ., 23 ರೂ. ಇದ್ದುದು 29 ರೂ., 24 ರೂ. ಇದ್ದುದು 30 ರೂ.ಗೆ ಏರಿಕೆಯಾಗಿದೆ.

ಸರ್ವಿಸ್ ಬಸ್‌ಗಳಲ್ಲಿ ಮಣಿಪಾಲದಿಂದ ಉಡುಪಿಗೆ 15 ರೂ., ಕಾಪುವಿಗೆ 33, ಉಚ್ಚಿಲಕ್ಕೆ 36, ಪಡುಬಿದ್ರೆಗೆ 47, ಮುಲ್ಕಿಗೆ 57, ಕೊಳ್ನಾಡಿಗೆ 60, ಕೆಆರ್‌ಇಸಿ ಮತ್ತು ಸುರತ್ಕಲ್‌ಗೆ 76, ಮಂಗಳೂರಿಗೆ 100 ರೂ. ದರ ನಿಗದಿ ಮಾಡಲಾಗಿದೆ.

ಟ್ರಾಫಿಕ್ ದಟ್ಟಣೆಯನ್ನು ತಗ್ಗಿಸುವ ಸಲುವಾಗಿ ಸಿಟಿ ಬಸ್ ನಿಲ್ದಾಣ (ಸ್ಟೇಟ್‌ಬ್ಯಾಂಕ್ ಮತ್ತು ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ)ವನ್ನು ಸರ್ವಿಸ್ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲು ಮಂಗಳೂರು ನಗರ ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.

ಅದರಂತೆ ಜು.1ರಿಂದ ಸಿಟಿ ಬಸ್‌ಗಳು ಹ್ಯಾಮಿಲ್ಟನ್ ಸರ್ಕಲ್ ದಾಟಿ ಸ್ಟೇಟ್‌ಬ್ಯಾಂಕ್ ಮತ್ತು ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಸಾಗುವ ಬದಲು ನೇರ ಸರ್ವಿಸ್ ಬಸ್ ನಿಲ್ದಾಣ (ಇದರಲ್ಲಿ ಸರ್ವಿಸ್‌ಗಳಲ್ಲದೆ ಕೆಎಸ್ಸಾರ್ಟಿಸಿ ಬಸ್‌ಗಳು ಕೂಡ ನಿಲ್ಲುತ್ತದೆ) ತಲುಪಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News