‘10 ರೂ. ಡಾಕ್ಟರ್’ ಗುರುವಾಯನಕೆರೆಯ ಡಾ.ವೇಣುಗೋಪಾಲ ಶರ್ಮ

Update: 2021-07-01 11:14 GMT

► 31 ವರ್ಷಗಳಿಂದ ನಿರಂತರ ಸೇವೆ

‘ವೈದ್ಯೋ ನಾರಾಯಣೋ ಹರಿ’ ಎನ್ನುವಂತೆ ವೈದ್ಯನು ರೋಗಿಗಳ ವಿಷಯದಲ್ಲಿ ತನ್ನ ಪರಧಿಯಲ್ಲಿ ಸರ್ವಕಾಲ ಸರ್ವಾವಸ್ಥೆಯಲ್ಲೂ ರಕ್ಷಕನ ಪಾತ್ರ ನಿರ್ವಹಿಸುತ್ತಾನೆ. ಇದಕ್ಕೆ ಉತ್ತಮ ನಿದರ್ಶನ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಡಾ.ಎಸ್.ವೇಣುಗೋಪಾಲ ಶರ್ಮ.

ಆಸ್ಪತ್ರೆಗಳಿಗೆ ಹೋದರೆ ಸಾಕು ಸಾವಿರಾರು ರೂ. ವಸೂಲಿ ಮಾಡಿ, ಇನ್ನಿಲ್ಲದಂತೆ ಹಿಂಡಿ ಹಿಪ್ಪೆ ಮಾಡುವುದಂತೂ ಸಾಮಾನ್ಯ ಎನ್ನುವಂತಿದೆ ಇಂದಿನ ಪರಿಸ್ಥಿತಿ. ಆದರೆ, ಗುರುವಾಯನಕೆರೆಯಲ್ಲಿ ‘ಚಿಕಿತ್ಸಾ ಕ್ಲಿನಿಕ್’ ಹೊಂದಿರುವ ಡಾ.ಎಸ್.ವೇಣುಗೋಪಾಲ ಶರ್ಮ ‘ಬಡವರ ವೈದ್ಯ ಬಂಧು’ವಾಗಿ ಜನಾನುರಾಗಿಯಾಗಿದ್ದಾರೆ. ಇವರ ವೈದ್ಯಕೀಯ ಸೇವೆ ವಿಭಿನ್ನವಾಗಿದೆ.

► 10 ರೂ. ಡಾಕ್ಟರ್: ಡಾ.ವೇಣುಗೋಪಾಲ ಶರ್ಮ ಕಳೆದ 3 ದಶಕಗಳಿಂದ ಕ್ಲಿನಿಕ್‌ಗೆ ಬರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಇದಕ್ಕೆ ಅವರು ಪಡೆಯುವ ಹಣ ಕೇವಲ ಹತ್ತು ರೂಪಾಯಿ ಮಾತ್ರ!. ಈ ಕಾರಣಕ್ಕಾಗಿ ಡಾ.ಶರ್ಮರನ್ನು ಸ್ಥಳೀಯರು ಪ್ರೀತಿಯಿಂದ ‘10 ರೂಪಾಯಿ ಡಾಕ್ಟರ್’ ಎಂದೇ ಕರೆಯುತ್ತಾರೆ.

► ನಿಗದಿತ ಶುಲ್ಕ ಇಲ್ಲ: ಕಳೆದ 31 ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿರುವ ಇವರು ರೋಗಿಯ ತಪಾಸಣೆ ಮಾಡಿದ್ದಕ್ಕೆಂದು ಹೆಚ್ಚುವರಿ ಶುಲ್ಕ ತೆಗೆದುಕೊಳ್ಳುವುದಿಲ್ಲ. ಈ ಕೊರೋನ ಸಂಕಷ್ಟದ ಸಂದರ್ಭದಲ್ಲೂ ಬಡವರಿಗೆ ಹತ್ತು ರೂಪಾಯಿಗೆ ಚಿಕಿತ್ಸೆ ನೀಡುವ ಮೂಲಕ ಡಾ.ಶರ್ಮ ಮಾದರಿಯಾಗಿದ್ದಾರೆ.

► ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯ ಪ್ರೇರಣೆ: ನನ್ನ ಈ ವೈದ್ಯಕೀಯ ಸೇವೆಗೆ ದೊಡ್ಡ ಪ್ರೇರಣೆ ಆಗಿದ್ದು ಬಾಲ್ಯದಲ್ಲಿ ಕಾಸರಗೋಡಿನಲ್ಲಿ ನಮ್ಮ ಕುಟುಂಬದ ಡಾಕ್ಟರ್ ಆಗಿದ್ದ ಡಾ.ಪಿ.ಎಸ್.ಶಾಸ್ತ್ರಿಯವರ ಸರಳ ಜೀವನ ಶೈಲಿ. ಆ ಮೂಲಕ ಅವರು ನನಗೆ ಆಪ್ತವಾಗಿದ್ದರು. ಅದೇ ರೀತಿ ಹಿಂದೆ ಸಚಿವರಾಗಿದ್ದ ದಿವಂಗತ ಡಾ.ವಿ.ಎಸ್.ಆಚಾರ್ಯ ಕೂಡ ಪ್ರೇರಣೆಯಾಗಿದ್ದರು ಎನ್ನುತ್ತಾರೆ ಡಾ.ಶರ್ಮ.

ಡಾ.ಶರ್ಮ ದಿನನಿತ್ಯ ಸರಿಸುಮಾರು ನೂರರಷ್ಟು ರೋಗಿಗಳಿಗೆ ತಪಾಸಣೆ ಮಾಡಿ ಚಿಕಿತ್ಸೆ ನೀಡುತ್ತಾರೆ. ಹಿಂದೆಲ್ಲ ದಿನಕ್ಕೆ 250ಕ್ಕಿಂತಲೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಿದ್ದು ಇದೆ. ಆದರೆ ಯಾರೊಬ್ಬರನ್ನೂ ಸಹಾಯಕರನ್ನಾಗಿ ಇಟ್ಟುಕೊಂಡಿಲ್ಲದಿರುವುದು ವಿಶೇಷ. ಇವರ ಕ್ಲಿನಿಕ್ ಮುಂದೆ ಇಂತಿಷ್ಟು ಟೈಮಿಂಗ್ ಎಂದು ಯಾವುದೇ ಬೋರ್ಡ್ ಇಲ್ಲ. ಬೆಳಗ್ಗಿನಿಂದಲೇ ಚಿಕಿತ್ಸೆ ಆರಂಭಿಸುವ ಶರ್ಮ, ಅಪರಾಹ್ನ 3 ಗಂಟೆ ಸುಮಾರಿಗೆ ರೋಗಿಗಳ ಸರತಿ ಖಾಲಿಯಾದ ಮೇಲೆ ಊಟಕ್ಕೆ ತೆರಳುತ್ತಾರೆ. ಬಳಿಕ ಸಂಜೆ ಮತ್ತೆ ಕರ್ತವ್ಯದಲ್ಲಿ ತೊಡಗುತ್ತಾರೆ.

► ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: ಡಾ.ಶರ್ಮ ಹವ್ಯಾಸಿ ಛಾಯಾಗ್ರಾಹಕರಾಗಿದ್ದು, ಯಾವುದೇ ಕಾರ್ಯಕ್ರಮಗಳಿಗೆ ತೆರಳುವಾಗ ತಮ್ಮ ಬಳಿಯಿರುವ ಕ್ಯಾಮರಾ ಹೆಗಲಿಗೇರಿಸಿಕೊಂಡು ಹೋಗುತ್ತಾರೆ. ಇವರ ಸೇವೆ ಗುರುತಿಸಿ ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿವೆ. ಕಳೆದ ಬಾರಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಸಮಯೋಚಿತ ಚಿಕಿತ್ಸೆಯು ಕ್ಯಾನ್ಸರ್‌ನಂತಹ ತೀವ್ರವಾದ ರೋಗವನ್ನು ಗುಣಪಡಿಸುತ್ತದೆ. ಆದರೆ ಆ ಬಳಿಕ ವೈದ್ಯರ ಕಾಳಜಿಯುತ ಆರೈಕೆಯಿಂದ ಮಾತ್ರ ಆ ರೋಗಿಗಳಿಗೆ ಪುನಶ್ಚೇತನ ನೀಡಲು ಹಾಗೂ ಸಮಾಜದಲ್ಲಿ ಒಳಗೊಳ್ಳುವಂತೆ ಮಾಡಲು ಸಾಧ್ಯ. ವೈದ್ಯರ ದಿನಾಚರಣೆಯ ಶುಭಾಶಯಗಳು.

ಡಾ.ಸುರೇಶ್ ರಾವ್, ನಿರ್ದೇಶಕರು ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ,  

ಮಂಗಳೂರು  

ಕೋವಿಡ್ ಸೋಂಕಿನ ಕಷ್ಟ-ನಷ್ಟ ಎಲ್ಲರಿಗೂ ತಿಳಿದ ವಿಚಾರವಾಗಿದೆ. ವೈದ್ಯರಾದ ನಾವು ಈ ಸಂದರ್ಭ ಮುಂಚೂಣಿಯಲ್ಲಿದ್ದುಕೊಂಡು ಸೇವೆ ಸಲ್ಲಿಸುತ್ತಿದ್ದೇವೆ. ಈ ಸಂದರ್ಭ ನಾವು ನಮ್ಮ ವೈಯಕ್ತಿಕ ಸಮಸ್ಯೆ, ಆರೋಗ್ಯವನ್ನು ಲೆಕ್ಕಿಸದೆ ಕಾರ್ಯಪ್ರವೃತ್ತರಾಗಿದ್ದೇವೆ. ವೈದ್ಯರು ಮತ್ತು ರೋಗಿಗಳ ಮಧ್ಯೆ ಇರುವ ನಂಬಿಕೆಗಳು ಈ ಕಾಲಘಟ್ಟದಲ್ಲಿ ತುಂಬಾ ಮಹತ್ವದ್ದಾಗಿವೆ. ರೋಗ ಗುಣಪಡಿಸಬೇಕಾದರೆ ರೋಗಿಗೆ ವೈದ್ಯರಲ್ಲಿ ವಿಶ್ವಾಸವಿರಬೇಕು. ವೈದ್ಯರು ಕೂಡ ರೋಗಿಗಳ ವಿಶ್ವಾಸ ಗಳಿಸಿಕೊಂಡು ಸೇವೆ ಸಲ್ಲಿಸಬೇಕಿದೆ. ಅಲ್ಲದೆ ವೈದ್ಯರು ರೋಗಿಯ ಬಗ್ಗೆ ಅತಿಯಾದ ಕಾಳಜಿ ವಹಿಸಿ ರೋಗ ಗುಣಪಡಿಸಲು ಪ್ರಯತ್ನ ಮಾಡುತ್ತಾರೆ. ಎಲ್ಲರೂ ಈ ಕಷ್ಟಕಾಲದಲ್ಲಿ ಕೋವಿಡ್ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಮುಂದಿನ ದಿನಗಳು ಎಲ್ಲರಿಗೂ ಆರೋಗ್ಯ, ಆಯುಷ್ಯ, ಸಂತೃಪ್ತಿ ತರಲಿ ಎಂದು ನಾನು ಈ ಸಂದರ್ಭ ಆಶಿಸುತ್ತೇನೆ.

ಪ್ರೊ. ಡಾ. ಮುಹಮ್ಮದ್ ಇಸ್ಮಾಯೀಲ್ ಹೆಜಮಾಡಿ,  

ಖ್ಯಾತ ವೈದ್ಯರು, ಪ್ರಾಧ್ಯಾಪಕರು ಕಸ್ತೂರ್ ಬಾ ಮೆಡಿಕಲ್ ಕಾಲೇಜು, ಮಂಗಳೂರು  

ಇದಕ್ಕೊ ಮೊದಲು 2 ರೂ. ಕೊಡುತ್ತಿದ್ದರು!

‘ಅದು 1989ರ ಇಸವಿ. ನಾನು ಉಡುಪಿಯಲ್ಲಿ ಆಯುರ್ವೇದ ಕಾಲೇಜಿನಲ್ಲಿ ಸರ್ಜರಿ ಪದವಿ ಮುಗಿಸಿ ಕ್ಲಿನಿಕ್ ಆರಂಭಿಸಿದ್ದೆ. ನಾನು ಯಾವತ್ತಿಗೂ ರೋಗಿಗೆ ಇಂತಿಷ್ಟು ಎಂದು ದರ ನಿಗದಿಪಡಿಸಿಲ್ಲ. ಮೊದಲ ಎರಡು ರೂಪಾಯಿ ಕೊಡುತ್ತಿದ್ದರು. ಬಳಿಕ ಐದು ರೂ. ಕೊಡಲು ಆರಂಭಿಸಿದ್ದರು. ಆಗ ‘ಐದು ರೂ. ಡಾಕ್ಟರ್’ ಅಂತ ಜನ ಹೇಳುತ್ತಿದ್ದರು. ಈಗ ಹತ್ತು ರೂಪಾಯಿ ಕೊಡುತ್ತಿದ್ದಾರೆ. ಬಿಪಿ, ಶುಗರ್‌ನಂತಹ ಚಿಕ್ಕಪುಟ್ಟ ಪರೀಕ್ಷೆ ಮಾಡಿದ್ದಕ್ಕೆ ಹಣ ಪಡೆದುಕೊಳ್ಳುವುದಿಲ್ಲ. ಆದರೆ, ಜನರು ಹಣ ನೀಡುತ್ತಾರೆ’ ಎನ್ನುತ್ತಾರೆ ಡಾ.ವೇಣುಗೋಪಾಲ ಶರ್ಮ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News