2016-17ನೇ ಸಾಲಿನ ಬೆಳೆವಿಮೆ ಕ್ಲೈಮ್ ಅರ್ಜಿ ಬಾಕಿ: ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರಿಗೆ ಗಡುವು ನೀಡಿದ ಸಿಇಓ

Update: 2021-07-01 13:43 GMT

ಉಡುಪಿ, ಜು.1: 2016-17ನೇ ಸಾಲಿನ ಹವಾಮಾನ ಆಧಾರಿತ ಬೆಳೆ ಹಾನಿಗೆ ಸಂಬಂಧಿಸಿದಂತೆ ಬೆಳೆ ವಿಮೆ ಕ್ಲೈಮ್‌ನ 206 ಅರ್ಜಿಗಳು ಇನ್ನೂ ವಿವಿಧ ಬ್ಯಾಂಕುಗಳ ಮ್ಯಾನೇಜರ್‌ಗಳ ಬಳಿ ಬಾಕಿ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಡಾ.ನವೀನ್ ಭಟ್ ವೈ, ಇನ್ನು 15 ದಿನಗಳಲ್ಲಿ ಇವುಗಳನ್ನು ಇತ್ಯರ್ಥ ಪಡಿಸಿ ಹಣ ಪಾವತಿಸುವಂತೆ ಅಂತಿಮ ಎಚ್ಚರಿಕೆ ನೀಡಿದರು.

ಮಣಿಪಾಲದ ಜಿಪಂ ಸಭಾಂಗಣದಲ್ಲಿ ಬುಧವಾರ ಲೀಡ್ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ನಡೆದ ಜಿಲ್ಲಾ ಬ್ಯಾಂಕ್‌ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಡಾ.ಭಟ್, ಬ್ಯಾಂಕ್ ಮ್ಯಾನೇಜರ್‌ಗಳ ಇಂಥ ವರ್ತನೆಯ್ನು ಇನ್ನು ಸಹಿಸಲು ಸಾಧ್ಯವೇ ಇಲ್ಲ. ಇದು ಅವರಿಗೆ ನೀಡು ತ್ತಿರುವ ಕೊನೆಯ ಎಚ್ಚರಿಕೆ. ಇನ್ನು 15 ದಿನಗಳಲ್ಲಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡದಿದ್ದರೆ ಸಂಬಂಧಿಸಿದ ಮ್ಯಾನೇಜರ್‌ಗಳ ವಿರುದ್ಧ ಕ್ರಮಕೈ ಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಅರ್ಜಿಗಳ ಆಧಾರ್ ಸೀಡಿಂಗ್‌ನಲ್ಲಿ ಸಮಸ್ಯೆಗಳಿವೆ ಎಂದು ಬ್ಯಾಂಕ್ ವ್ಯವಸ್ಥಾಪಕರು ಹೇಳುತಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಡಿಡಿ ತಿಳಿಸಿದ್ದಾರೆ. ಆದರೆ ಯಾವುದೇ ಸಮಸ್ಯೆ ಬಗೆಹರಿಸಲು ನಾಲ್ಕೈದು ವರ್ಷ ಬೇಕಾಗುವುದಿಲ್ಲ. ಅದೂ ಲಿಖಿತವಾಗಿ ಅವರಿಗೆ ತಿಳಿಸಿದ ಬಳಿಕವೂ ಎಂದವರು ನುಡಿದರು.

2018-19ನೇ ಸಾಲಿನಲ್ಲೂ 25 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಈ ಅರ್ಜಿಗಳ ಬಗ್ಗೆ ಯಾವುದೇ ರೀತಿಯ ಪ್ರಕ್ರಿಯೆಗಳು ಇನ್ನೂ ಪ್ರಾರಂ ಗೊಂಡಿಲ್ಲ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ತಿಳಿಸಿದರು. ಇವುಗಳ ಬಗ್ಗೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸಿಇಓ, ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್‌ಗೆ ಸೂಚಿಸಿದರು.

ಪ್ರಸ್ತುತ ಸಾಲಿನಲ್ಲಿ ಬೆಳೆ ಸಾಲ ಮಾಡಿದವರು ಕಡ್ಡಾಯವಾಗಿ ಹವಾಮಾನ ಆಧಾರಿತ ಬೆಳೆ ವಿಮೆಗೆ ನೋಂದಣಿ ಮಾಡಿಸಬೇಕು. 19,760 ಮಂದಿ ಬೆಳೆ ಸಾಲ ಪಡೆದವರಲ್ಲಿ ಈವರೆಗೆ ಕೇವಲ ನಾಲ್ಕು ಸಾವಿರದಷ್ಟು ಮಂದಿ ಮಾತ್ರ ನೋಂದಣಿ ಮಾಡಿದ್ದಾರೆ. ಬಾಕಿ ಉಳಿದವುಗಳನ್ನು ಶೀಘ್ರವೇ ವಿಮೆಗೆ ಒಳಪಡಿಸಬೇಕು ಎಂದರು.

ಜಿಲ್ಲೆಯ ಬ್ಯಾಂಕ್ ಶಾಖೆಗಳು ಕೇವಲ ಜನರಿಂದ ಹಣ ಠೇವಣಿ ಪಡೆಯಲು ಮಾತ್ರ ಇರುವುದಲ್ಲ. ಅವರ ಅಗತ್ಯಗಳಿಗೆ ತ್ವರಿತವಾಗಿ ಸ್ಪಂಧಿಸಿ ಸಾಲವನ್ನು ನೀಡುವ ಜವಾಬ್ದಾರಿಯೂ ಇದೆ. ವಿವಿಧ ಯೋಜನೆಗಳಡಿ ಜನರಿಂದ ಬರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡುವ, ಸರಕಾರದ ವಿವಿಧ ಯೋಜನೆಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸುವ ಜವಾಬ್ದಾರಿಯೂ ನಿಮಗಿದೆ. ನಿಮ್ಮ ಬೇಜವಾಬ್ದಾರಿಗಳನ್ನು ಕೂಡಲೇ ಸರಿಪಡಿಸಿಕೊಳ್ಳಿ ಎಂದವರು ಬ್ಯಾಂಕ್ ಅಧಿಕಾರಿಗಳಿಗೆ ಕಟು ಎಚ್ಚರಿಕೆ ನೀಡಿದರು.

ಕೊರೋನದ ಈ ಮೂರು ತಿಂಗಳ ಅವಧಿಯಲ್ಲೂ ಜಿಲ್ಲೆಯ ಠೇವಣಿ 908 ಕೋಟಿ ರೂ.ಗಳಷ್ಟು ಹೆಚ್ಚಾದರೂ, ಸಾಲ ನೀಡಿರುವುದು ಕೇವಲ 59 ಕೋಟಿ. ಬ್ಯಾಂಕ್‌ಗಳಲ್ಲಿ ದುಡ್ಡಿದ್ದು, ಸಮಾಜದಲ್ಲಿ, ಜನರಲ್ಲಿ ದುಡ್ಡು ಚಲಾವಣೆಯಲ್ಲಿದ್ದರೆ ಹೇಗೆ. ಇಡೀ ದೇಶ ಜನರಲ್ಲಿ ಹಣ ಚಲಾವಣೆಯಲ್ಲಿ ರುವಂತೆ ನೋಡಿಕೊಳ್ಳು ತ್ತಿರುವಾಗ ನೀವು ಜನರಿಗೆ ಸಾಲ ನೀಡದಿದ್ದೆ ಹೇಗೆ ಎಂದವರು ಪ್ರಶ್ನಿಸಿದರು.

ಕೇಂದ್ರ ಸರಕಾರದ ಸಮಾಜ ಭದ್ರತಾ ಯೋಜನೆಗಳಾದ ಪಿಎಂಎಸ್‌ಬಿವೈ, ಪಿಎಂಜೆಜೆಬಿವೈಗಳ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸು ವಂತೆ ಕರೆ ನೀಡಿದ ಅವರು, ಗ್ರಾಪಂ ಮಟ್ಟದಲ್ಲಿ ಅಟೋರಿಕ್ಷಾ, ಟ್ಯಾಕ್ಸಿ, ಕ್ಷೌರಿಕರು ಸೇರಿದಂತೆ ವಿವಿಧ ವರ್ಗಗಳ ಜನರ ನೋಂದಾವಣಿಗೆ ಶಿಬಿರಗಳನ್ನು ಏರ್ಪಡಿಸುವಂತೆ ಸಲಹೆ ನೀಡಿದರು.

ಈ ಯೋಜನೆಯ ಫಲಾನುಭವಿ ಯಾರಾದರೂ ಮೃತಪಟ್ಟರೆ, ಆತನಿಗೆ ಸಿಗುವ ಎರಡು ಲಕ್ಷ ರೂ.ನಿಧಿಯ ಬಗ್ಗೆ ಮೃತರ ಕುಟುಂಬಕ್ಕೆ ಮಾಹಿತಿ ನೀಡುವ ಕೆಲಸವನ್ನೂ ಬ್ಯಾಂಕುಗಳು ಮಾಡಬೇಕು. ಯೋಜನೆಯಡಿ ನಾಲ್ಕು ಲಕ್ಷ ಮಂದಿ ಜಿಲ್ಲೆಯಲ್ಲಿ ನೊಂದಾವಣಿಗೊಂಡಿದ್ದರೆ, ಸತ್ತವರಿಗೆ ಸಿಗುವ ಮೊತ್ತವನ್ನು ಕೇವಲ ಒಂದು ಸಾವಿರ ಮಂದಿ ಮಾತ್ರ ಪಡೆದಿದ್ದಾರೆ. ಈ ಬಗ್ಗೆ ಜನರಿಗೆ ತುರ್ತಾಗಿ ಜಾಗೃತಿ ಮೂಡಿಸಬೇಕು ಎಂದರು.

ಬೀದಿಬದಿ ವ್ಯಾಪಾರಿಗಳಿಗೆ ಸಾಲ: ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಯೋಜನೆಯಡಿ ಈ ಹಿಂದೆ ನೀಡುತ್ತಿದ್ದ 10,000 ರೂ. ಮೊತ್ತವನ್ನು ಗರಿಷ್ಟ 20,000ರೂ.ವರೆಗೆ ಹೆಚ್ಚಿಸಲು ಅವಕಾಶವಿದೆ. ಇವುಗಳ ಅನುಷ್ಠಾನಕ್ಕೆ ಬ್ಯಾಂಕ್ ಗಳು ಆದ್ಯತೆ ನೀಡಬೇಕು ಎಂದು ಡಾ.ನವೀನ್ ಭಟ್ ಸೂಚಿಸಿದರು.

ಸಭೆಯಲ್ಲಿ ಕೆನರಾ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಜಗದೀಶ್ ಶೆಣೈ, ಉಡುಪಿ ಪ್ರಾದೇಶಿಕ ಕಚೇರಿ ಪ್ರಬಂಧಕ ಕೆ. ಕಾಳಿ, ನಬಾರ್ಡ್ ಎಜಿಎಂ ಸಂಗೀತಾ ಕರ್ತ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News