ಭಟ್ಕಳ: ಇಂಡಿಯನ್ ನವಾಯತ್ ಫೋರಂ ವತಿಯಿಂದ ಡಯಾಲಿಸಿಸ್ ಕೇಂದ್ರ ಉದ್ಘಾಟನೆ

Update: 2021-07-01 17:31 GMT

ಭಟ್ಕಳ: ಇಂಡಿಯನ್ ನವಾಯತ್ ಫೋರಂ, ಕೇರಳದ ಥನಾಲ್ ಸಂಸ್ಥೆ ಹಾಗೂ ವಲ್ಫೇರ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಗುರುವಾರ ಐಎನ್‍ಎಫ್ ಡಯಾಲಿಸಿಸ್ ಕೇಂದ್ರವನ್ನು ಜಮಾಆತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಅಬ್ದುಲ್ ರಬ್ ಖತೀಬ್ ನದ್ವಿ ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು ಮನುಷ್ಯನ ಅತಿ ಅವಶ್ಯಕತೆ ಇರುವ ಯೋಜನೆಯೊಂದನ್ನು ಇಲ್ಲಿನ ಸಂಸ್ಥೆಗಳು ಕೈಗೆತ್ತಿಕೊಂಡಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ. ಕಿಡ್ನಿ ಸಂಬಂಧಿ ರೋಗಗಳು ಉಲ್ಬಣಗೊಳ್ಳುತ್ತಿದ್ದು ಚಿಕಿತ್ಸೆಗಾಗಿ ಬೇರೆ ಬೇರೆ ಕಡೆ ಹೋಗುವುದು ಮತ್ತು ವೆಚ್ಚವನ್ನು ಭರಿಸಲು ಆಗದಿರುವುದು ಇವೆಲ್ಲ ಸಮಸ್ಯೆಗಳನ್ನು ಬಗೆಹರಿಸಿ ಭಟ್ಕಳದಲ್ಲೇ ಸೇವಾ ಮನೋಭಾವನೆಯೊಂದಿಗೆ ಡಯಾಲಿಸಿಸ್ ಕೇಂದ್ರ ಉದ್ಘಾಟನೆಗೊಂಡಿರುವುದು ಎಲ್ಲರಿಗೂ ಉಪಯೋಗವಾಗಲಿದೆ ಎಂದರು.

ಮುಖ್ಯಅತಿಥಿಯಾಗಿ ಮಾತನಾಡಿದ ಕೇರಳದ ಥನಾಲ್ ಸಂಸ್ಥೆಯ ಡಾ. ಇದ್ರೀಸ್, ಜನರು ಹಲವು  ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಕಿಡ್ನಿ ರೋಗಕ್ಕೆ ತುತ್ತಾದವರ ಸಮಸ್ಯೆ ಹೇಳತೀರದು. ಸಮಾಜದಲ್ಲಿ ಕನಿಷ್ಠ ಜೀವನ ನಡೆಸುವವರು ಕಿಡ್ನಿಯಂತಹ ಸಮಸ್ಯೆಗಳಿಂದ ಹೊರ ಬರಲು ಹರಸಹಾಸ ಪಡಬೇಕಾಗುತ್ತದೆ. ಥನಾಲ್ ಸಂಸ್ಥೆಯ 51ನೆ ಡಯಾಲಿಸಿಸ್ ಕೇಂದ್ರ ಇದಾಗಿದ್ದು 5000ಕ್ಕೂ ಹೆಚ್ಚು ಡಯಾಲಿಸಿಸ್ ರೋಗಿ ಗಳು ನಮ್ಮಲ್ಲಿ ನಿತ್ಯವೂ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಪ್ರತಿ ತಿಂಗಳು 25 ಸಾವಿರಕ್ಕೂ ಹೆಚ್ಚು ರೋಗಿಗಳು ಥನಾಲ್ ಸಂಸ್ಥೆಯ ಡಯಾಲಿಸಿಸ್ ಕೇಂದ್ರದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು ಇದು ಜಗತ್ತಿನ ಅತಿ ದೊಡ್ಡ ಡಯಾಲಿಸಿಸ್ ಕೇಂದ್ರಗಳನ್ನು ನಡೆಸುವ ಸಂಸ್ಥೆಯಾಗಿದೆ ಎಂದು ಹೇಳಿದರು.

ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಅಬ್ದುಲ್ ಮಜೀದ್ ಜುಕಾಕೋ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ಇಸ್ಲಾಮಿಕ್ ವೆಲ್ಫೇರ್ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಕಾದಿರ್ ಮೀರಾ ಪಟೇಲ್, ಮೌಲಾನ ಅಬ್ದುಲ್ ಅಲೀಮ್ ಖತೀಬ್ ಮೌಲಾನ ಕ್ವಾಜಾ ಅಕ್ರಮಿ ನದ್ವಿ ಮತ್ತಿತರರು ಮಾತನಾಡಿದರು.

ಐಎನ್‍ಎಫ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆದಿಲ್ ನಾಗರಮಠ ಡಯಾಲಿಸ್ ಕೇಂದ್ರ ಹಾಗೂ ಐಎನ್‍ಎಫ್ ಸಂಸ್ಥೆಯನ್ನು ಪರಿಚಯಿಸಿದರು. ಉಪಾಧ್ಯಕ್ಷ ಎಸ್.ಎಂ. ಅರ್ಷದ್ ಸ್ವಾಗತಿಸಿದರು. ಮುಹಮ್ಮದ್ ಹಾಶಿಮ್ ಮೊಹತೆಷಮ್ ವಂದಿಸಿದರು. ಆಪ್ತಾಬ್ ಹುಸೈನ್ ಕೋಲಾ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News