ವಚನ ಪಿತಾಮಹ ಫ.ಗು. ಹಳಕಟ್ಟಿ ಒಂದು ನೆನಪು

Update: 2021-07-02 10:58 GMT

ಬಾಲ್ಯದಲ್ಲಿ ಫ.ಗು. ಹಳಕಟ್ಟಿ (2.7.1880- 29.6.1964) ಶರಣರನ್ನು ನೋಡಿದ ನೆನಪು. ವಿಜಯಪುರದ ಸಿದ್ಧೇಶ್ವರ ದೇವಾಲಯದ ಪಕ್ಕದಲ್ಲಿದ್ದ ಬೇವಿನ ಮರದ ಕೆಳಗೆ ನನ್ನ ಅಜ್ಜಿ (ತಾಯಿಯ ತಾಯಿ) ಬಾಳೆಹಣ್ಣು ಮಾರುತ್ತಿದ್ದಳು. ಹಳಕಟ್ಟಿಯವರ ಶ್ರಮದ ಫಲವಾದ ಸಿದ್ಧೇಶ್ವರ ಬ್ಯಾಂಕ್ ಈ ಬೇವಿನ ಮರಕ್ಕೆ ಎದುರಾಗಿ ರಸ್ತೆ ಆಚೆ ಬದಿ ಇದೆ. ನಾನು ಶಾಲೆ ಬಿಟ್ಟ ನಂತರ ಬಹಳ ಸಲ ನನ್ನ ಅಜ್ಜಿಯ ಕಡೆಗೆ ಹೋಗುತ್ತಿದ್ದೆ. ಆ ಸಂದರ್ಭದಲ್ಲಿ ಹಳಕಟ್ಟಿಯವರು ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಬರುವುದನ್ನು ನೋಡಿದ್ದೇನೆ. ಈ ಚಿತ್ರದಲ್ಲಿ ಇರುವಂತಹ ಉಡಿಗೆ ಇದ್ದರೂ ಇಷ್ಟು ನೀಟಾಗಿ ಇದ್ದಿದ್ದಿಲ್ಲ. ಈ ಉಡುಪಿನ ಹಳೆಯ ಮತ್ತು ಅಲ್ಲಲ್ಲಿ ಹರಿದ ರೂಪ ಎಂದು ಕಲ್ಪಿಸಿಕೊಳ್ಳಬಹುದು.

ಈ ನೆನಪು ಏಕೆ ಉಳಿದಿದೆ ಎಂದರೆ, ಜನ ಈ ಬಡ ವಯೋವೃದ್ಧರ ಕಾಲಿಗೆ ಏಕೆ ಬೀಳುತ್ತಾರೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಹಳಕಟ್ಟಿಯವರು ಅವಶ್ಯವಿದ್ದಾಗ, ಆ ಬೃಹತ್ ದೇವಾಲಯದ ಮುಂದೆ ನಿಧಾನವಾಗಿ ಹಾಯ್ದು ಬ್ಯಾಂಕ್ ಕಚೇರಿಗೆ ಹೋಗುವ ಸಂದರ್ಭದಲ್ಲಿ ಹೆಣ್ಣುಮಕ್ಕಳು ಮತ್ತು ಪುರುಷರು ಅವರ ಕಾಲುಮುಟ್ಟಿ ನಮಸ್ಕಾರ ಮಾಡುತ್ತಿದ್ದರು. ಅವರು ಕೈ ಸನ್ನೆಯ ಮೂಲಕ ಮೌನದಲ್ಲಿ ಅವರಿಗೆ ಹರಸುತ್ತ ತಮ್ಮದೇ ಧ್ಯಾನದಲ್ಲಿ ಮುಂದೆ ಸಾಗುತ್ತಿದ್ದರು. ಈ ದೃಶ್ಯ ಇಂದಿಗೂ ಕಣ್ ತುಂಬಿಕೊಂಡಿದೆ. ಮುಂದೆ ಆರನೆಯ ಇಯತ್ತೆಗೆ ಬರುವಷ್ಟರಲ್ಲಿ ಅವರು ವಚನಲೋಕದವರೆಂಬ ಅರಿವುಂಟಾಯಿತು. ಏಳನೇ ಇಯತ್ತೆಗೆ ಬಂದಾಗ ಅವರು ಲಿಂಗೈಕ್ಯರಾದ ಸುದ್ದಿ ಹಬ್ಬಿತು. ಅವರ ನೆನಪು ಮನದಲ್ಲಿ ಮನೆ ಮಾಡಿದ್ದರಿಂದ ಕಸಿವಿಸಿಯಾಯಿತು. ಸಿದ್ಧೇಶ್ವರ ದೇವಾಲಯದ ಕಡೆಗೆ ಹೋದೆ. ಅಷ್ಟೊತ್ತಿಗಾಗಲೇ ಪಾರ್ಥಿವ ಶರೀರದ ಯಾತ್ರೆ ದೇವಾಲಯದ ಮುಂದಿನಿಂದ ಸಾಗುತ್ತಿತ್ತು. ಮುಖ ನೋಡಲು ಮುಂದೆ ಹೋದೆ. ನಾನು ನೋಡಿದ ಹಳಕಟ್ಟಿ ಅಜ್ಜ ಇವರೇನಾ ಎಂದು ದಿಗಿಲಾಯಿತು. ಅವರಿಗೆ ಮೀಸೆ ಇರಲಿಲ್ಲ. ಪಾರ್ಥಿವ ಶರೀರಕ್ಕೆ ಒಂದು ರೀತಿಯ ಮಂದ ಕೆಂಪು ಬಣ್ಣದ ಮೀಸೆ ಇದ್ದವು. ಕುರುಚಲು ಗಡ್ಡ ಬೆಳೆದಿತ್ತೆಂಬ ನೆನಪು. ಅವರು ಬಹಳ ದಿನಗಳಿಂದ ಬೇನೆಬಿದ್ದ ಕಾರಣ ಈ ರೂಪ ಬಂದಿದೆ ಎಂದು ಮೇಲ್ನೋಟಕ್ಕೇ ಅನಿಸುತ್ತಿತ್ತು. ಶವಯಾತ್ರೆಯಲ್ಲಿ ಹೇಳಿಕೊಳ್ಳುವಷ್ಟು ಜನರಿರಲಿಲ್ಲ! ನಾನು ಕೊನೆಯವರೆಗೂ ಈ ಯಾತ್ರೆಯಲ್ಲಿ ಪಾಲ್ಗೊಂಡೆ. ಬಿ.ಎಲ್.ಡಿ.ಇ. ಸಂಸ್ಥೆಯ ಆವರಣದಲ್ಲಿ ಅಮರಗಣಂಗಳ ಪ್ರತೀಕವಾದ 770 ಲಿಂಗಗಳುಳ್ಳ ಲಿಂಗದ ಗುಡಿಯ ಬಳಿ ಶವಸಂಸ್ಕಾರದ ವ್ಯವಸ್ಥೆಯಾಗಿತ್ತು. ಆ ಸಂದರ್ಭದಲ್ಲಿ ನನಗೆ ಬೇಸರ ಬರಿಸಿದ ಒಂದು ಘಟನೆ ನಡೆಯಿತು. ಪಾರ್ಥಿವ ಶರೀರವನ್ನು ಕುಣಿಯಲ್ಲಿ ಕೂಡಿಸಿದ ಮೇಲೆ ನಗರದ ಒಬ್ಬ ಐಗೋಳ (ಐನಾರ-ಜಂಗಮ) ವ್ಯಕ್ತಿ ಅವರ ತಲೆಯ ಮೇಲೆ ಕಾಲಿಟ್ಟು ಅದೇನೋ ಗುಣುಗಿದ. ಇಂತಹ ಒಬ್ಬ ಸಾಮಾನ್ಯ ವ್ಯಕ್ತಿ ಇಂತಹ ಮಹಾನ್ ವ್ಯಕ್ತಿಯ ಶವದ ತಲೆಯ ಮೇಲೆ ಕಾಲಿಟ್ಟಿದ್ದನ್ನು ನನಗೆ ಸಹಿಸಲಿಕ್ಕಾಗಲಿಲ್ಲ.

ನನ್ನ ಬೇಸರಕ್ಕೆ ಇನ್ನೊಂದು ಹಳೆಯ ಕಾರಣವೂ ಇತ್ತು. ಆತ ನಾವಿರುವ ಓಣಿಯ ಬಳಿಯೇ ಇದ್ದ. ಲಿಂಗಾಯತರ ಶವಸಂಸ್ಕಾರದ ವೇಳೆ ಆತ ಮುಂದಿರುತ್ತಿದ್ದ. ನಗರದ ಮುಳ್ಳಗಸಿಯಿಂದ ಶಹಾಪುರ ಅಗಸಿ ದಾಟಿ ರುದ್ರಭೂಮಿಗೆ ಹೋಗುವ ದಾರಿಯಲ್ಲಿ ಬಲಗಡೆ ಬೃಹತ್ತಾದ ಐತಿಹಾಸಿಕ ಮಸೀದಿ ಇದೆ. ಶವಯಾತ್ರೆಯಾಗಲಿ ಅಥವಾ ಯಾವುದೇ ಮೆರವಣಿಗೆಯಾಗಲಿ ಮಸೀದಿ ಬಳಿ ಬಂದಾಗ ಆ ಸ್ಥಳ ದಾಟುವವರೆಗೆ ಬಾಜಾ ಭಜಂತ್ರಿ ಮತ್ತು ಹಲಗೆ ಬಾರಿಸದೆ ಮೌನವಾಗಿ ಸಾಗುವುದು ವಾಡಿಕೆಯಾಗಿದೆ. ಇದು ಎಲ್ಲ ಮಸೀದಿಗಳಿಗೂ ಅನ್ವಯಿಸುವುದು. ಒಂದು ಸಲ ಲಿಂಗಾಯತ ವೃದ್ಧೆಯೊಬ್ಬಳ ಶವ ಯಾತ್ರೆ ಹೊರಟಿತ್ತು. ಶವವನ್ನು ಸಿದ್ಧೇಶ್ವರ ವಿಮಾನದಲ್ಲಿ (ಬೆತ್ತದಿಂದ ಕಳಸದ ಗುಡಿಯ ಆಕಾರದಂತೆ ತಯಾರಿಸಿದ್ದು. ಅದರಲ್ಲಿ ಶವವನ್ನು ಕೂಡಿಸಿ ಸಿಂಗರಿಸಿ ಹೊತ್ತೊಯ್ಯುತ್ತಿದ್ದರು. ಅಂಥ ಒಂದೆರಡು ವಿಮಾನಗಳನ್ನು ಸಿದ್ಧೇಶ್ವರ ಗುಡಿಯ ಪೌಳಿಯಲ್ಲಿ ಇಡುತ್ತಿದ್ದುದರಿಂದ ಅವುಗಳಿಗೆ ಸಿದ್ಧೇಶ್ವರ ವಿಮಾನ ಎಂದು ಕರೆಯುತ್ತಿದ್ದರು.) ಶವಯಾತ್ರೆ ಹೊರಟಿತ್ತು. ಆದರೆ ಆ ದಿನ ಈ ಐನಾರ ವ್ಯಕ್ತಿಯ ಪ್ರಚೋದನೆಯಿಂದಾಗಿ ವೃದ್ಧೆಯ ಶವದ ಮೆರವಣಿಗೆ ಹಲಗೆ ಬಾರಿಸುವುದನ್ನು ನಿಲ್ಲಿಸದೆ ಮುಂದೆ ಹೋಗುವಾಗ ನಮಾಜು ಮಾಡಲು ಬರುತ್ತಿದ್ದವರು ತಕಾರಾರು ಮಾಡಿದರು. ಆದರೆ ಆ ಐನಾರ ಕೇಳಲಿಲ್ಲ.

ಹಳಕಟ್ಟಿ ಜೀವನದ ಮುಖ್ಯಾಂಶಗಳು

► ಗುರುಬಸಪ್ಪಮತ್ತು ದಾನಮ್ಮನವರ ಹಿರಿಯ ಮಗನಾಗಿ 1880ನೇ ಜುಲೈ 2 ರಂದು ಧಾರವಾಡದಲ್ಲಿ ಜನನ.

► 1883ನೇ ಜೂನ್ 5ರಂದು ಮಾತೃ ವಿಯೋಗ.

► 1896ರಲ್ಲಿ ಧಾರವಾಡದಲ್ಲಿ ಮ್ಯಾಟ್ರಿಕ್. ಅದೇ ವರ್ಷ ಬೆಳಗಾವಿಯ ತಮ್ಮಣ್ಣಪ್ಪಚಿಕ್ಕೋಡಿಯವರ ಮಗಳು ಭಾಗೀರಥಿ ಜೊತೆ ವಿವಾಹ.

► ಮುಂಬೈ ಝೇವಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಕೆ.

► 1901ರಲ್ಲಿ ಬಿ.ಎ. ಪದವಿ. 1904ರಲ್ಲಿ ಕಾನೂನು ಪದವಿ.

► ಮೊದಲ ಮಗ ಮಹಾಲಿಂಗ 1903ರಲ್ಲಿ ಜನನ.

► ಧಾರವಾಡ ನ್ಯಾಯಾಲಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್.

► ಕೆಲ ತಿಂಗಳುಗಳ ನಂತರ ಬೆಳಗಾವಿಗೆ ವರ್ಗ. ಅಲ್ಲಿಂದ ವಿಜಯಪುರಕ್ಕೆ ವರ್ಗ ಮಾಡಿಸಿಕೊಂಡರು. ನಂತರ ವಿಜಯಪುರದಲ್ಲಿ ಸ್ವತಂತ್ರ ವಕೀಲಿ ವೃತ್ತಿ ಆರಂಭ.

► 1903ರಲ್ಲಿ ಬನಹಟ್ಟಿಯ ಶಿವಲಿಂಗಪ್ಪ ಮಂಚಾಲಿಯವರ ಮನೆಯಲ್ಲಿ ಚಾಮರಸನ ‘ಪ್ರಭುಲಿಂಗ ಲೀಲೆ’ ಮತ್ತು ‘ಷಟ್‌ಸ್ಥಲ ತಿಲಕ’ ಗ್ರಂಥಗಳನ್ನು ನೋಡಿದ ನಂತರ ತಾಳೆಗ್ರಂಥಗಳನ್ನು ಸಂಗ್ರಹಿಸುವ ಉತ್ಸಾಹ ಆರಂಭ.

► 1915ರಲ್ಲಿ ವಕೀಲ ವೃತ್ತಿ ಬಿಟ್ಟು ವಚನ ಸಂಗ್ರಹ, ಸಂಶೋಧನೆ ಮತ್ತು ಪ್ರಕಟನೆಯಲ್ಲಿ ಮಗ್ನ. ಬಡತನ ಜೊತೆಗೂಡಿತು.

► ಸಂಪಾದಿಸಿದ ‘ವಚನಶಾಸ್ತ್ರಸಾರ’ ಹಸ್ತಪ್ರತಿಯನ್ನು ಗ್ರಂಥರೂಪದಲ್ಲಿ ತರುವುದಕ್ಕಾಗಿ 1922ರಲ್ಲಿ 500 ರೂಪಾಯಿಗಳ ಜೊತೆಗೆ ಮಂಗಳೂರಿನ ಬಾಸೆಲ್ ಮಿಷನ್ ಮುದ್ರಣಾಲಯಕ್ಕೆ ಕಳುಹಿಸಿದರು. ವಚನ ಮತ್ತು ಬೈಬಲ್ ವಿಚಾರಗಳಲ್ಲಿ ಮೂಲಭೂತ ವ್ಯತ್ಯಾಸವಿಲ್ಲ ಎಂದು ಹೇಳಿ ಕ್ರೈಸ್ತ ಧರ್ಮಪಂಡಿತರು ವಾಪಸ್ ಕಳಿಸಿದರು.

► 1925ರಲ್ಲಿ ವಚನಗ್ರಂಥಗಳ ಮುದ್ರಣಕ್ಕಾಗಿ ವಿಜಯಪುರದಲ್ಲಿ ಇದ್ದ ಮನೆಯನ್ನು ಮಾರಿ ‘ಹಿತಚಿಂತಕ ಮುದ್ರಣಾಲಯ’ ಸ್ಥಾಪನೆ.

► 1926ರಲ್ಲಿ ‘ಶಿವಾನುಭವ’ ಎಂಬ ತ್ರೈಮಾಸಿಕ ಪತ್ರಿಕೆ ಪ್ರಾರಂಭ.

► 1928ರಲ್ಲಿ ಸಾಮಾಜಿಕ, ರಾಜಕೀಯ ಮತ್ತು ಕರ್ನಾಟಕ ಏಕೀಕರಣದಂತಹ ವಿಷಯಗಳಿಗಾಗಿ ‘ನವಕರ್ನಾಟಕ’ ಪತ್ರಿಕೆ ಪ್ರಾರಂಭ.

► 1910ರಲ್ಲಿ ‘ಬಿಜಾಪುರ ಲಿಂಗಾಯತ್ ಡಿಸ್ಟ್ರಿಕ್ ಎಜ್ಯುಕೇಷನ್’ (ಬಿ.ಎಲ್.ಡಿ.ಇ.) ಸಂಸ್ಥೆ ಪ್ರಾರಂಭ.

► 1912ರಲ್ಲಿ ಸಿದ್ಧೇಶ್ವರ ಬ್ಯಾಂಕ್ ಸ್ಥಾಪನೆ. ಅಧ್ಯಕ್ಷತೆಯ ಜವಾಬ್ದಾರಿ.

► 1914ರಲ್ಲಿ ಶ್ರೀ ಸಿದ್ಧೇಶ್ವರ ಹೈಸ್ಕೂಲ್ ಪ್ರಾರಂಭ.

► 1917ರಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ.

► 1919ರಲ್ಲಿ ವಿಜಯಪುರ ನಗರ ಸಭೆಯ ಉಪಾಧ್ಯಕ್ಷ.

► 1920ರಲ್ಲಿ ಮುಂಬೈ ವಿಧಾನ ಪರಿಷತ್ ಸದಸ್ಯ. * 1922ರಲ್ಲಿ ಬಸವೇಶ್ವರ ವಚನಗಳ ಇಂಗ್ಲಿಷ್ ಅನುವಾದ ಪ್ರಕಟನೆ.

► 1926ರಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ.

► 1928ರಲ್ಲಿ ಧಾರವಾಡದಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ ಮೂರನೆಯ ಸಮ್ಮೇಳನಾಧ್ಯಕ್ಷ.

► 1929ರಲ್ಲಿ ವಿಜಯಪುರ ನಗರಸಭೆಯ ಶಾಲಾ ಸಮಿತಿ ಅಧ್ಯಕ್ಷ.

► 1931ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ.

► 1933ರಲ್ಲಿ ಧಾರವಾಡದಲ್ಲಿ ನಡೆದ 10ನೇ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ.

► 1934ರಲ್ಲಿ ವಿಜಯಪುರದಲ್ಲಿ ಬರಗಾಲ ನಿವಾರಣೆ ಗಾಗಿ ಆರಂಭಿಸಿದ ‘ವಿಲ್ಸನ್ ಯಾಂಟಿ ಫ್ಯಾಮಿನ ಇನ್‌ಸ್ಟಿಟ್ಯೂಟ್’ ಕಾರ್ಯದರ್ಶಿ.

► 1956ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ ಪದವಿ.

► 1964ನೇ ಮೇ 25ರಂದು ಪತ್ನಿ ಭಾಗೀರಥಿ ನಿಧನ.

► 1964ನೇ ಜೂನ್ 29ರಂದು ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ನಿಧನರಾದರು.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News