ಉಡುಪಿ: ಕೊರೋನ ಸೋಂಕಿತರ ಸಂಖ್ಯೆ 91ಕ್ಕೆ ಇಳಿಕೆ, ಕೋವಿಡ್ ಗೆ ಓರ್ವ ಬಲಿ

Update: 2021-07-02 14:11 GMT

ಉಡುಪಿ, ಜು.2: ಜಿಲ್ಲೆಯಲ್ಲಿ ಕೋವಿಡ್‌ಗೆ ಪಾಸಿಟಿವ್ ಬಂದವರ ಸಂಖ್ಯೆ ಶುಕ್ರವಾರ 91ಕ್ಕೆ ಇಳಿದಿದೆ. ಇಂದು ಪುರುಷರೊಬ್ಬರು ಬಲಿಯಾಗಿದ್ದು, ದಿನದಲ್ಲಿ 124 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 921 ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ದಿನದಲ್ಲಿ ಕುಂದಾಪುರ ತಾಲೂಕಿನ 50 ವರ್ಷ ಪ್ರಾಯದ ಪುರುಷರೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಕೋವಿಡ್ ಗುಣಲಕ್ಷಣದೊಂದಿಗೆ ಉಸಿರಾಟದ ತೊಂದರೆ, ನ್ಯುಮೋನಿಯಾದಿಂದ ನರಳುತಿದ್ದ ಇವರು ಬಹುಅಂಗ ವೈಫಲ್ಯ ದಿಂದ ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮೃತರ ಸಂಖ್ಯೆ 395ಕ್ಕೇರಿದೆ.

ಇಂದು ಪಾಸಿಟಿವ್ ಬಂದ 91 ಮಂದಿಯಲ್ಲಿ 51 ಮಂದಿ ಪುರುಷರು ಹಾಗೂ 40 ಮಂದಿ ಮಹಿಳೆಯರು. ಉಡುಪಿ ತಾಲೂಕಿನ 43, ಕುಂದಾಪುರ ತಾಲೂಕಿನ 28 ಹಾಗೂ ಕಾರ್ಕಳ ತಾಲೂಕಿನ 19 ಮಂದಿ ಅಲ್ಲದೇ ಹೊರಜಿಲ್ಲೆಯ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಇವರಲ್ಲಿ 12 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 79 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಗುರುವಾರ 124 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 65,360ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 2586 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆ ಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 66,676 ಎಂದು ಡಾ.ಉಡುಪ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,87,982 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

ಇಬ್ಬರಿಗೆ ಬ್ಲ್ಯಾಕ್ ಫಂಗಸ್ ಸೋಂಕು

ಬ್ಲ್ಯಾಕ್ ಫಂಗಸ್ ಸೋಂಕಿನ ಚಿಕಿತ್ಸೆಗಾಗಿ ಇಂದು ಇಬ್ಬರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿವಮೊಗ್ಗದ 55 ವರ್ಷ ಪ್ರಾಯದ ಪುರುಷ ಹಾಗೂ ಚಿತ್ರದುರ್ಗ ಜಿಲ್ಲೆಯ 50 ವರ್ಷ ಪ್ರಾಯದ ಪುರುಷ ಇವರಲ್ಲಿ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಮೂಲಕ ಜಿಲ್ಲೆಯಲ್ಲೀಗ ಒಟ್ಟು 7 ಮಂದಿ ಕಪ್ಪು ಶಿಲೀಂದ್ರ ಸೋಂಕು ಹೊಂದಿದ್ದು, ಎಲ್ಲರೂ ಕೆಎಂಸಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಜಿಲ್ಲೆಯ 8 ಮಂದಿ ಸೇರಿದಂತೆ ಈವರೆಗೆ ಒಟ್ಟು 25 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಜಿಲ್ಲೆಯ ಇಬ್ಬರು ಮೃತಪಟ್ಟಿದ್ದಾರೆ.

8,720 ಮಂದಿಯಿಂದ ಕೋವಿಡ್ ಲಸಿಕೆ ಸ್ವೀಕಾರ

ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 8,720 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಇವರಲ್ಲಿ 3,959 ಮಂದಿ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದರೆ, 4,761 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು 18ರಿಂದ 44 ವರ್ಷದೊಳಗಿನ 3,603 ಮಂದಿ ಮೊದಲ ಡೋಸ್ ಹಾಗೂ 147 ಮಂದಿ ಎರಡನೇ ಡೋಸನ್ನು ಪಡೆದಿದ್ದಾರೆ. 45 ವರ್ಷ ಮೇಲಿನ 356 ಮಂದಿ ಮೊದಲ ಡೋಸ್ ಹಾಗೂ 4606 ಮಂದಿ ಎರಡನೇ ಡೋಸ್ ನ್ನು ಪಡೆದಿದ್ದಾರೆ. ಐವರು ಆರೋಗ್ಯ ಕಾರ್ಯಕರ್ತರು ಹಾಗೂ ಮೂವರು ಮುಂಚೂಣಿ ಕಾರ್ಯಕರ್ತರಿಗೂ ಇಂದು ಲಸಿಕೆ ನೀಡಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 4,23,804 ಮಂದಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದರೆ, 1,19,128 ಮಂದಿ ಎರಡನೇ ಡೋಸ್‌ನ್ನು ಪಡೆದು ಕೊಂಡಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News