ಸಂಶೋಧನೆ ದೇಶದ ಅಭಿವೃದ್ಧಿಗೆ ಪೂರಕ: ಪ್ರೊ.ರಾಜಶೇಖರ ಹೆಬ್ಬಾರ್

Update: 2021-07-02 16:52 GMT

ಮಂಗಳೂರು, ಜು.2: ಸಮಾಜ ಕಾರ್ಯದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ ಕುರಿತು ಕೈಗೊಳ್ಳುವ ಸಂಶೋಧನೆ ದೇಶದ ಅಭಿವೃದ್ಧಿಗೆ ಪೂರಕವೆಂದು ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಸಂಶೋಧನಾ ವಿಭಾಗ ಮತ್ತು ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗ ಮತ್ತು ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಮಾನವ ಸಂಪನ್ಮೂಲ ವಿಷಯದಲ್ಲಿ ನವೀಕೃತ ಸಂಶೋಧನಾ ಯೋಜನೆ ಎಂಬ ವಿಷಯದ ಕುರಿತು ವಿಶ್ವವಿದ್ಯಾನಿಲಯ ಮಟ್ಟದ ಆನ್‌ಲೈನ್ ವಿಚಾರ ಸಂಕಿರ್ಣ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಕಾರ್ಯದಂತಹ ಕೋರ್ಸ್‌ಗಳು ಬದುಕಿನ ಶಿಕ್ಷಣ ನೀಡುವ ಅಧ್ಯಯನಗಳಾಗಿವೆ. ಈ ದಿಶೆಯಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ ಕುರಿತ ಸಂಶೋಧನೆ ಹೆಚ್ಚಿನ ಆಯಾಮವಿದೆ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಚೇರ್‌ಮನ್ ಡಾ. ಪೌಲ್ ಜಿ.ಅಕ್ವಿನಸ್ ಹಾಗೂ ಸಂಶೋಧನಾ ವಿದ್ಯಾರ್ಥಿ ರೇಷ್ಮಾ ಕೆ. ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ಡಾ.ಪೌಲ್ ಜಿ.ಅಕ್ವಿನಸ್ ಮಾತನಾಡಿ, ಕೋವಿಡ್-19 ನ ಈ ಸಂದರ್ಭಕ್ಕೆ ಸೂಕ್ತವಾಗುವ ರೀತಿಯಲ್ಲಿ ಸಮುದಾಯ ಭೇಟಿ ಮಾಡದೇ ಸುರಕ್ಷಿತವಾದ ವಿಧಾನಗಳನ್ನು ಅನುಸರಿಸಿ ಅಧ್ಯಯನ ಮಾಡುವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ನೂರಕ್ಕೂ ಹೆಚ್ಚು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವಿಚಾರ ಸಂಕಿರಣ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಸಂಯೋಜಕ ಡಾ. ಶೇಷಪ್ಪ ಕೆ., ಐಕ್ಯೂಎಸಿ ಸಂಯೋಜಕ ಡಾ. ತೆರೆಜಾ ಪೆರೆರಾ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ವಿಶೇಷಾಧಿಕಾರಿ ಡಾ.ಜಯಶಂಕರ ಭಂಡಾರಿ ಭಾಗವಹಿಸಿದ್ದರು.
ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಪ್ರೊ. ಅರುಣಕುಮಾರಿ ಸ್ವಾಗತಿಸಿದರು. ಉಪನ್ಯಾಸಕಿ ಡಾ.ಬಿಂದುರಾಣಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News