ಗೃಹ ಕಾರ್ಮಿಕರು ಕೋವಿಡ್ ಪರಿಹಾರ ಪಡೆಯಲು ಮಾಲಕರ ಸಹಿ ಅಗತ್ಯ

Update: 2021-07-03 14:47 GMT

ಉಡುಪಿ, ಜು.3: ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆಯ ಹಿನ್ನೆಲೆ ಯಲ್ಲಿ ಜಾರಿಗೊಳಿಸಿದ ಲಾಕ್‌ಡೌನ್ ಪರಿಣಾಮವಾಗಿ ಸಂಕಷ್ಟಕ್ಕೊಳಗಾದ 11 ವರ್ಗಗಳ ಅಸಂಘಟಿತ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹಕಾರ್ಮಿಕರು, ಟೈಲರ್‌ ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿಕಾರ್ಮಿಕ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ರಾಜ್ಯ ಸರಕಾರವು 2,000 ರೂ. ಗಳ ಒಂದು ಬಾರಿಯ ನೆರವಿನ ವಿಶೇಷ ಪ್ಯಾಕೇಜ್ ಪಡೆಯಲು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in - ಮೂಲಕ ಜುಲೈ 31ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಹಿಂದಿನ ಮಾರ್ಗಸೂಚಿಯಲ್ಲಿ ನೆರವಿನ ಮೊತ್ತನ್ನು ಪಡೆಯಲು ನಿಗದಿ ಪಡಿಸಿದ ಅಧಿಕಾರಿಗಳಿಂದ ಅಥವಾ ಪತ್ರಾಂಖಿತ ಅಧಿಕಾರಿಗಳಿಂದ ಪಡೆದ ಉದ್ಯೋಗ ದೃಢೀಕರಣ ಪತ್ರವನ್ನು ಸಲ್ಲಿಸಲು ತಿಳಿಸಲಾಗಿದೆ.

ಆದರೆ ಜುಲೈ 1ರಂದು ಉಚ್ಛ ನ್ಯಾಯಾಲಯದಲ್ಲಿ ನಡೆದ ನಡವಳಿಯಲ್ಲಿ ಗೃಹ ಕಾರ್ಮಿಕರಿಗೆ ಸಂಬಂಧಿಸಿದಂತೆ, ಅರ್ಜಿಯೊಂದಿಗೆ ಸಲ್ಲಿಸಬೇಕಾದ ಉದ್ಯೋಗ ದೃಡೀಕರಣ ಪತ್ರದಲ್ಲಿ ಗೃಹ ಕಾರ್ಮಿಕರು ವೃತ್ತಿ ನಿರ್ವಹಿಸುತ್ತಿರುವ ಮಾಲಕರಿಂದ ಸಹಿ ಪಡೆಯಲು ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಿದ್ದು, ಅದರಂತೆ ಗೃಹ ಕಾರ್ಮಿಕರು ನಿಗದಿಪಡಿಸಿದ ಅಧಿಕಾರಿಗಳಿಂದ ಅಥವಾ ಅವರು ಕಾರ್ಯ ನಿರ್ವಹಿಸುತ್ತಿರುವ ಮಾಲಕರಿಂದ ಸಹಿ ಮಾಡಿಸಿ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಪ್ರತ್ಯೇಕ ನಮೂನೆಯ ಉದ್ಯೋಗ ದೃಢೀಕರಣ ಪ್ರಮಾಣ ಪತ್ರವನ್ನು ಹೊರಡಿಸಿದ್ದು, ಮೊಬೈಲ್ ಸಂಖ್ಯೆಯನ್ನು ನಮೂದಿಸುವುದನ್ನು ಐಚ್ಛಿಕಗೊಳಿಸಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ ಸಂಖ್ಯೆ: 155214 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News