ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲು ಇನ್ನೂ 2 ವರ್ಷ ಅಗತ್ಯ: ಸಚಿವ ಮಾಧುಸ್ವಾಮಿ

Update: 2021-07-04 14:41 GMT

ಉಡುಪಿ, ಜು.4: ಎತ್ತಿಹೊಳೆ ಯೋಜನೆಗೆ ಸಂಬಂಧಿಸಿ ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಧ್ಯೆ ಸುಮಾರು 5500 ಎಕರೆ ಜಮೀನು ಭೂಸ್ವಾಧೀನ ಮಾಡಲು ಇನ್ನು ಸಾಧ್ಯವಾಗಿಲ್ಲ. ಆದುದರಿಂದ ಈ ಯೋಜನೆ ಪೂರ್ಣಗೊಳ್ಳ ಬೇಕಾದರೆ ಇನ್ನು ಎರಡು ವರ್ಷಗಳು ಬೇಕಾಗುತ್ತವೆ ಎಂದು ರಾಜ್ಯ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸಂತ್ರಸ್ತರಿಗೆ ಹಣ ಕೊಡಲು ನಮಗೆ ಏನು ಸಮಸ್ಯೆ ಇಲ್ಲ. ಆದರೆ ಕಾನೂನು ಅವಕಾಶ ಕೊಡುತ್ತಿಲ್ಲ. ಭೂಮಿಯ ವೌಲ್ಯವನ್ನು ಮಾರುಕಟ್ಟೆ ದರದ ನಾಲ್ಕು ಪಟ್ಟು ಹೆಚ್ಚಳ ಕೊಡಬಹುದು. ಅದಕ್ಕಿಂತ ಜಾಸ್ತಿ ಕೊಲು ಆಗುವುದಿಲ್ಲ ಎಂದು ಹೇಳಿದರು.

ತುಮಕೂರು ಜಿಲ್ಲೆಯಲ್ಲಿ 4 ಪಟ್ಟು ಹೆಚ್ಚಳವಾಗಿ ಎಕರಗೆ 8ಲಕ್ಷ ರೂ. ಮತ್ತು ದೊಡ್ಡಬಳ್ಳಾಪುರದಲ್ಲಿ 32ಲಕ್ಷ ರೂ. ಭೂಮಿ ವೌಲ್ಯ ಬರುತ್ತದೆ. ಇದರ ಮಧ್ಯೆ ಬರುವ ರೈತರಿಗೆ ಗೊಂದಲ ಉಂಟಾಗಿದ್ದು, ಅವರಿಗೆ ಮನವರಿಕೆ ಮಾಡಿ ಕೊಡಲು ಆಗುತ್ತಿಲ್ಲ. ಆದುದರಿಂದ ಅವರು ನಮಗೆ ಜಮೀನು ಬಿಟ್ಟುಕೊಡುತ್ತಿಲ್ಲ ಮತ್ತು ಸರ್ವೆ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ. ಯೋಜನೆಗೆ ಸಂಬಂಧಿಸಿ ಈಗಾಗಲೇ ಮೂರು ಜಿಲ್ಲೆಗಳಲ್ಲಿ ಸಾಕಷ್ಟು ಕೆಲಸ ಆಗಿದ್ದು, ಅವುಗಳನ್ನು ಜೋಡಿಸಿದರೆ ಎರಡು ವರ್ಷದೊಳಗೆ ಯೋಜನೆ ಪೂರ್ಣಗೊಳ್ಳುತ್ತದೆ ಎಂದರು.

ಕರಾವಳಿಗೆ ಸಮಗ್ರ ಯೋಜನೆ

ಕರಾವಳಿಗೆ ಅನುದಾನ ನೀಡುವ ವಿಚಾರದಲ್ಲಿ ಯಾವುದೇ ವ್ಯಾತ್ಯಾಸ ಆಗುತ್ತಿಲ್ಲ. ಕರಾವಳಿಯಲ್ಲಿ ಬೃಹತ್ ನೀರಾವರಿಯಲ್ಲಿ ಹೂಡಿಕೆ ಮಾಡಲು ಅವಕಾಶ ಇಲ್ಲ. ವಾರಾಹಿ ನಂತರ ಅಂತಹ ಯಾವುದೇ ಯೋಜನೆ ಈ ಭಾಗ ದಲ್ಲಿ ಇಲ್ಲ. ಬೃಹತ್ ನೀರಾ ವರಿಯ ಕೊರತೆಯನ್ನು ಸಣ್ಣ ನೀರಾವರಿಯಲ್ಲಿ ತುಂಬಿಸಿಕೊಡುವ ಕಾರ್ಯ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗುವುು ಎಂದು ಸಚಿವರು ತಿಳಿಸಿದರು.

ಕರಾವಳಿಯಲ್ಲಿ ಕುಡಿಯುವ ನೀರಿನ ಸಮರ್ಪಕ ಬಳಕೆ ಹಾಗೂ ಕೃಷಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಪಶ್ಚಿಮ ವಾಹಿನಿಗೆ ಸಮಗ್ರ ಯೋಜನೆ ರೂಪಿಸಲಾಗಿದೆ. ಅದರಂತೆ ವೆಂಟೇಡ್ ಡ್ಯಾಮ್ ನಿರ್ಮಿಸಲು 1400 ಜಾಗವನ್ನು ಗುರುತಿಸ ಲಾಗಿದೆ. ಇದರಿಂದ ಉಡುಪಿ. ದ.ಕ., ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹರಿದು ಹೋಗುವ ನೀರನ್ನು ತಡೆದು ಅಂತರ್ ಜಲ ವೃದ್ಧಿ ಮಾಡಲಾಗುವುದು ಎಂದು ಅವರು ಹೇಳಿದರು.

ಜಾರಕಿಹೊಳಿ ಬಗ್ಗೆ ಅನುಕಂಪ

ಜಾರಕಿಹೊಳಿ ಅವರಿಗೆ ಸರಕಾರ ಮತ್ತು ಪಕ್ಷದ ಕಡೆಯಿಂದ ಏನು ತೊಂದರೆ ಮಾಡಿಲ್ಲ. ಆಕಸ್ಮಿಕವಾದ ಘಟನೆಗೆ ಅವರು ಬಲಿಯಾಗಿದ್ದಾರೆ. ನಾವೆಲ್ಲ ಅವರ ಬಗ್ಗೆ ಅನುಕಂಪ ಇಟ್ಟುಕೊಂಡಿದ್ದೇವೆ. ಇದೊಂದು ಕಾನೂನಾತ್ಮಕ ಮತ್ತು ನೈತಿಕ ವಿಚಾರ ವಾಗಿದೆ. ನೈತಿಕವಾಗಿ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದಾರೆ ಎಂದು ಮಾಧುಸ್ವಾಮಿ ತಿಳಿಸಿದರು.

ಕಾನೂನಾತ್ಮಕವಾಗಿಯೂ ಯಾವುದೇ ಸಮಸ್ಯೆ ಇದೆ ಅನಿಸಲ್ಲ. ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆ ಹೆಣ್ಣುಮಗಳ ವರ್ತನೆ ನೋಡಿ ದರೆ ಇಚ್ಛೆಪಟ್ಟು ಹೋಗಿದ್ದಾರೆ ಎಂಬ ಭಾವನೆ ಬರುತ್ತದೆ. ಹಾಗಾಗಿ ಜಾರಕಿಹೊಳಿಗೆ ಶಿಕ್ಷೆ ಆಗಲಾರದು ಎಂಬುದು ನಮ್ಮ ಅಭಿಪ್ರಾಯ. ಎಲ್ಲವನ್ನು ಎದುರಿಸಲೇಬೇಕು. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಯಾರನ್ನು ದೂರಲು ಸಾಧ್ಯವಿಲ್ಲ. ಅವರು ಶಾಸಕ ಸ್ಥಾನಕ್ಕೆ ರಾಜೀ ನಾಮೆ ಕೊಡಬೇಕಾಗಿಲ್ಲ ಎಂದರು.

ಪಕ್ಷ ಬಿಟ್ಟವರು ವಾಪಾಸ್ಸು ಬರುವ ಬಗ್ಗೆ ಡಿಕೆಶಿ ನೀಡಿರುವ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಗೆ ಯಾರಾದರೂ ಬರುವುದಿದ್ದರೆ ಬರಲಿ. ಬೇರೆ ಪಕ್ಷದಿಂದ ಬಿಜೆಪಿಗೆ ಬರುವುದಾದರೆ ಸ್ವಾಗತ. ವಿಸ್ತರಣೆ ರಾಜ ಕೀಯ ಎಲ್ಲಾ ಪಕ್ಷಗಳ ಉದ್ದೇಶ ಆಗಿರುತ್ತದೆ. ಕಾಂಗ್ರೆಸ್ನಿಂದ ಯಾರಾ ದರೂ ಬರುವವರಿದ್ದರು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.

‘ಮೋದಿ ಟೀಕೆ ಮಾಡಿದರೆ ಒಳ್ಳೆದಾಗಲ್ಲ’

‘ವ್ಯಾಕ್ಸಿನ್ ವಿಚಾರದಲ್ಲಿ ಮೋದಿಯನ್ನು ಟೀಕೆ ಮಾಡಿದರೆ ನಿಮಗೆ(ಡಿಕೆಶಿ) ಒಳ್ಳೆದಾಗಲ್ಲ. ದೇಶದಲ್ಲಿ 80 ಕೋಟಿ ಜನಕ್ಕೆ ಉಚಿತ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರಕಾರದ ಈ ನಿರ್ಧಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ರಾಜ್ಯ ಸರಕಾರ ವ್ಯಾಕ್ಸಿನ್‌ಗಾಗಿ 2000 ಕೋಟಿ ರೂ. ತೆಗೆದಿರಿಸಿದೆ. ಡಿಕೆಶಿ ಪಾಪದ ಮಾತಿನಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಟೀಕೆ ಮಾಡುವುದನ್ನು ಮಾಡಿ ಅದು ವಿರೋಧ ಪಕ್ಷದವರ ಕರ್ತವ್ಯ. ವಿರೋಧ ಪಕ್ಷದಲ್ಲಿ ನನಗಿಂತ ಚೆನ್ನಾಗಿ ಕೆಲಸ ಮಾಡಿದವರು ಯಾರು ಇಲ್ಲ. ನೈಸರ್ಗಿಕ ಆಪತ್ತಿನ ಕಾಲದಲ್ಲಿ ಎಲ್ಲವನ್ನು ಟೀಕೆ ಮಾಡಬಾರದು. ವ್ಯಾಕ್ಸಿನ್ ಉತ್ಪಾದನೆ ಮಾಡಲು ಕಂಪನಿ ಯವರಿಗೂ ಕಾಲಾವಕಾಶ ಬೇಕು. ಮುಂದಿನ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಲಸಿಕೆ ಅಭಿಯಾನ ಮುಗಿಯುತ್ತದೆ. ಇದು ಡಿಕೆಶಿ ಅವರ ಬದುಕಿನ ಪ್ರಶ್ನೆ ಹೀಗಿ ವಿರೋಧ ಮಾಡುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News