ಗುಂಡಿಕ್ಕಿ ನಾಯಿಯ ಹತ್ಯೆ ಪ್ರಕರಣ : ಆರೋಪಿಗೆ ಪೊಲೀಸ್ ನೋಟಿಸ್ ಜಾರಿ

Update: 2021-07-04 16:06 GMT

ಮಂಗಳೂರು, ಜು. 4: ನಗರದ ಕದ್ರಿ ಶಿವಬಾಗ್‌ನಲ್ಲಿ ಬೀದಿ ನಾಯಿಯನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿ ಅನಿಲ್ ಸೋನ್ಸ್‌ಗೆ ಕದ್ರಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ನಾಯಿಯನ್ನು ಗುಂಡಿಕ್ಕಿ ಕೊಲ್ಲಲು ಕಾರಣ ಏನು ಎಂಬುದರ ಬಗ್ಗೆ ಠಾಣೆಗೆ ಹಾಜರಾಗಿ ವಿವರಣೆ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಆರೋಪಿ ನೀಡುವ ಕಾರಣಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜು.1ರ ಸಂಜೆ 5 ಗಂಟೆಗೆ ಕದ್ರಿ ಶಿವಭಾಗ್‌ನ ಸಾರ್ವಜನಿಕ ಸ್ಥಳದಲ್ಲಿ ಬೀದಿ ನಾಯಿಯೊಂದು ಸತ್ತು ಬಿದ್ದಿತ್ತು. ನಾಯಿಯ ಮೇಲೆ ರಕ್ತ ಇರುವ ಬಗ್ಗೆ ಎನಿಮಲ್ ಕೇರ್ ಟ್ರಸ್ಟ್‌ನವರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಅದರಂತೆ ಟ್ರಸ್ಟ್‌ನ ಸುಮಾ ಆರ್. ನಾಯಕ್ ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿ ಆರೋಪಿಯ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು.

 ನಾಯಿಯ ಮರಣೋತ್ತರ ಪರೀಕ್ಷೆ ನಡೆಸಿದಾಗ ದೇಹದಲ್ಲಿ ಗುಂಡಿನಂತಹ ವಸ್ತು ಪತ್ತೆಯಾಗಿದ್ದು, ಏರ್‌ಗನ್‌ನಿಂದ ಗುಂಡು ಹೊಡೆದಿರುವ ಸಾಧ್ಯತೆ ಇದೆ ಎಂಬ ಸಂಶಯ ವ್ಯಕ್ತವಾಗಿತ್ತು. ದೂರುದಾರರು ತಮ್ಮ ದೂರಿನಲ್ಲಿ ಸ್ಥಳೀಯ ನಿವಾಸಿ ಅನಿಲ್ ಸೋನ್ಸ್ ಮೇಲೆ ಸಂಶಯ ವ್ಯಕ್ತ ಪಡಿಸಿ ಆತನ ಹೆಸರನ್ನು ನಮೂದಿಸಿದ್ದರಿಂದ ಪೊಲೀಸರು ಆತನಿಗೆ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

 ಆರೋಪಿಯ ವಿರುದ್ಧ ಐಪಿಸಿ 428 ಮತ್ತು 429 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಸೆಕ್ಷನ್ 11 (1) (ಎಲ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News