ಯುಪಿಸಿಎಲ್ ವಿರುದ್ಧ ಎಲ್ಲೂರು ಗ್ರಾಪಂನಿಂದ ಸಚಿವರಿಗೆ ದೂರು

Update: 2021-07-05 16:16 GMT

ಉಡುಪಿ, ಜು.5: ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಉಡುಪಿ ಪವರ್ ಕಾರ್ಪೋರೇಷನ್ ಲಿ. (ಯುಪಿಸಿಎಲ್)ನಿಂದ ಗ್ರಾಮಕ್ಕಾಗಿರುವ ಸಮಸ್ಯೆಗಳ ಕುರಿತಂತೆ ಎಲ್ಲೂರು ಗ್ರಾಪಂ ಪರವಾಗಿ ನಂದಿಕೂರಿಗೆ ಭೇಟಿ ನೀಡಿದ ರಾಜ್ಯ ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಅರ್ಪಿಸಿತು.

ಗ್ರಾಪಂ ಪರವಾಗಿ ಮನವಿ ಅರ್ಪಿಸಿದ ಅಧ್ಯಕ್ಷ ಜಯಂತ್ ಕುಮಾರ್, ಯುಪಿಸಿಎಲ್ ಕಂಪೆನಿ ಸ್ಥಳೀಯಾಡಳಿತವಾದ ಗ್ರಾಪಂಗೆ ಗೌರವ ಕೊಡದೆ ತನಗಿಷ್ಟ ಬಂದ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.

2018ರ ಮಾ.31ಕ್ಕೆ ಮುಕ್ತಾಯಗೊಳ್ಳಬೇಕಿದ್ದ ಯುಪಿಸಿಎಲ್‌ನ ಸಿಎಸ್‌ಆರ್ ಕಾಮಗಾರಿಗಳನ್ನು ಇನ್ನೂ ಮುಕ್ತಾಯಗೊಳಿಸಿಲ್ಲ. ಘೋಷಣೆ ಮಾಡಿದ್ದ 3.74 ಕೋಟಿ ರೂ.ಗಳ ಕಾಮಗಾರಿಯಲ್ಲಿ ಇನ್ನೂ 1.41 ಕೋಟಿ ರೂ.ಗಳ ಕಾಮಗಾರಿ ಪೂರ್ಣಗೊಳ್ಳದೇ ಬಾಕಿ ಉಳಿದುಕೊಂಡಿದೆ ಎಂದವರು ದೂರಿದ್ದಾರೆ.

ಇದರ ಜೊತೆಗೆ ಯುಪಿಸಿಎಲ್‌ನಿಂದ ಬಾಧಿತವಾದ ಪ್ರದೇಶದ ಜನರಿಗೆ ಕುಡಿಯುವ ನೀರು ಸೌಲಭ್ಯಕ್ಕಾಗಿ ಗ್ರಾಪಂಗೆ ನೀಡ ಬೇಕಾದ ಹಣವನ್ನು ಸಹ ನೀಡಲು ವಿಳಂಬ ಮಾಡುತ್ತಿದೆ. ಜೊತೆಗೆ ಕಂಪೆನಿ ಸ್ಥಾಪನೆ ಸಂದರ್ಭ ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವ ಹಾಗೂ ಕಂಪೆನಿಗೆ ಜಾಗ ಬಿಟ್ಟುಕೊಟ್ಟವರಿಗೂ ಉದ್ಯೋಗ ನೀಡುವ ಭರವಸೆಯನ್ನು ಇದುವರೆಗೂ ಈಡೇರಿಸಿಲ್ಲ ಎಂದೂ ಮನವಿಯಲ್ಲಿ ಜಯಂತ್ ಕುಮಾರ್ ಆರೋಪಿಸಿದ್ದಾರೆ.

ಆದುದರಿಂದ ಮೇಲಿನ ಎಲ್ಲಾ ಅಂಶಗಳನ್ನು ಕೂಡಲೇ ಅನುಷ್ಠಾನಕ್ಕೆ ತರುವಂತೆ ತಾವು ಯುಪಿಸಿಎಲ್ ಕಂಪೆನಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಬೇಕೆಂದು ಅವರು ಸಚಿವ ಜಗದೀಶ್ ಶೆಟ್ಟರ್‌ರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News