ಉಪ್ಪಿನಂಗಡಿ : ನದಿಯಲ್ಲಿ ಮುಳುಗಿ ಇಬ್ಬರು ಸಹೋದರರು ಮೃತ್ಯು

Update: 2021-07-05 16:53 GMT

ಉಪ್ಪಿನಂಗಡಿ : ಸ್ನಾನಕ್ಕೆಂದು ಇಲ್ಲಿನ ನೇತ್ರಾವತಿ ನದಿಗಿಳಿದ ಗದಗ ಮೂಲದ ಕಾರ್ಮಿಕ ಕುಟುಂಬದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ಸಂಭವಿಸಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ  ಸುಬ್ಬನಹಳ್ಳಿ ನಿವಾಸಿ  ಧರ್ಮ ಎಂಬವರ ಪುತ್ರರಾದ ನಿಂಗರಾಜು (16) ಮತ್ತು ಸತೀಶ್ (14) ಮೃತರು ಎಂದು ಗುರುತಿಸಲಾಗಿದೆ.

ನಿಂಗರಾಜು ಗದಗದಲ್ಲಿದ್ದು, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ. ಲಾಕ್ ಡೌನ್ ಕಾರಣ ದಿಂದಾಗಿ ಶಾಲೆಗೆ ರಜೆ ನೀಡಲಾಗಿದ್ದು, ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ದತೆಯಲ್ಲಿದ್ದ. ಸತೀಶ್ 8 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಈ ಮಧ್ಯೆ  ಉಪ್ಪಿನಂಗಡಿಯ ಇಳಂತಿಲದ ಕೇದಾರ ಮನೆಯ ತೋಟದ ಕೆಲಸದಲ್ಲಿದ್ದ ತನ್ನ ತಂದೆ ತಾಯಿಯ ಜೊತೆ ಬಂದಿದ್ದ ಎಂದು ತಿಳಿದುಬಂದಿದೆ.

ಸೋಮವಾರ ಸಂಜೆ ಹೆತ್ತವರು ಕಾರ್ಯ ನಿಮಿತ್ತ ಪೇಟೆಗೆ ಹೋಗಿದ್ದ ಸಂದರ್ಭ ನದಿಯ ಆಳ ಅರಿಯದೆ ಸ್ನಾನಕ್ಕೆಂದು ಇವರು ನದಿಗೆ ಇಳಿದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ದೂರಲಾಗಿದೆ.

ನೀರಿಗೆ ದುಮುಕಿದ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದ ಸದಸ್ಯರು

ಬಾಲಕರಿಬ್ಬರು ನದಿಯಲ್ಲಿ ಮುಳುಗಿದ್ದಾರೆ ಎಂಬ ಮಾಹಿತಿ ಪಡೆದಾಕ್ಷಣ ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಿಖಾಯ ತಂಡದ ಸ್ವಯಂ ಸೇವಕರಾದ ಯು.ಟಿ. ಫಯಾಝ್,  ಬಶೀರ್, ರಶೀದ್,  ಸಲಾಂ ಮತ್ತು ಸ್ಥಳೀಯರಾದ ಆಶ್ರಫ್ ಅಂಡೆತ್ತಡ್ಕ ಎಂಬವರು ಸ್ಥಳಕ್ಕೆ ಧಾವಿಸಿ ನೀರಿಗೆ ದುಮುಕಿ ಬಾಲಕರಿಬ್ಬರ ಮೃತದೇಹವನ್ನು ಮೇಲಕ್ಕೆ ತಂದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಬಾರಿಯ ಮಳೆಗಾಲದಲ್ಲಿ ಸಾಂಧರ್ಭಿಕ ಅಪಾಯವನ್ನು ಎದುರಿಸಲು ಹತ್ತು ಮಂದಿ ನುರಿತ ಈಜುಗಾರರನ್ನು ಒಳಗೊಂಡ  ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡವನ್ನು ಸಿದ್ಧಪಡಿಸಲಾಗಿತ್ತು ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News