ಭಟ್ಕಳ ನ್ಯಾಯಾಲಯ ಕಟ್ಟಡಕ್ಕೆ ಬೆಂಕಿ ಬಿದ್ದ ಪ್ರಕರಣ; ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ್ ಭೇಟಿ

Update: 2021-07-06 17:18 GMT

ಭಟ್ಕಳ: ಜುಲೈ 2ರಂದು ಬೆಳಗಿನ ಭಟ್ಕಳದ ಜೆ.ಎಂ.ಎಫ್.ಸಿ ನ್ಯಾಯಾಲಯದ ಕಟ್ಟಡಕ್ಕೆ ಬೆಂಕಿ ಬಿದ್ದ ಪ್ರಕರಣದ ನಂತರ ಸೋಮವಾರದಂದು ಉ.ಕ ಜಿಲ್ಲಾ ಸತ್ರ ನ್ಯಾಯಾಲದ ನ್ಯಾಯಾಧೀಶ ರಾಜಶೇಖರ್ ಭೇಟಿ ನೀಡಿ ಪರಿಶೀಲಿಸಿದ್ದು ಘಟನೆಯ ಕುರಿತು ಸೂಕ್ತ ತನಿಖೆಯನ್ನು ನಡೆಸಿ ಘಟನೆಯ ಹಿಂದಿರುವ ಕಾರಣವನ್ನು ತಿಳಿಸುವಂತೆ ಪೊಲೀಸ ಅಧಿಕಾರಿಗಳಿಗೆ ಆದೇಶಿಸಿದ್ದಲ್ಲದೆ, ಹಾನಿಗೊಳಗಾಗಿರುವ ಕಟ್ಟಡವನ್ನು ಕೂಡಲೆ ದುರಸ್ತಿ ಮಾಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. 

ಪರಿಶೀಲನೆಯ ವೇಳೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಜಿ.ನಾಯ್ಕ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಹಾನಿಯಾದ ಕಟ್ಟಡದ ಭಾಗವನ್ನು ಅತಿ ಶೀಘ್ರದಲ್ಲಿ ರಿಪೇರಿ ಮಾಡಿ ಯಥಾ ಸ್ಥಿತಿಗೆ ತರುವಂತೆ ತಿಳಿಸಿದರು. ಕನಿಷ್ಟ ಒಂದು ವಾರದೊಳಗಾಗಿ ಕಟ್ಟಡ ಮೇಲ್ಚಾವಣಿಯು ರಿಪೇರಿಯಾಗಿ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದೂ ಅವರು ಸೂಚಿಸಿದರು. 

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಇಲೆಕ್ಟ್ರಿಕಲ್ ಇಂಜಿನಿಯರ್ ಪಂಡಿತ್ ಅವರಿಗೆ ಅಗತ್ಯದ ಇಲೆಕ್ಟ್ರಿಕ್ ವಯರಿಂಗ ಹಾಗೂ ಕಂಪ್ಯೂಟರ್‍ಗೆ ಅಗತ್ಯವಿರುವ ಲಾನ್ ವ್ಯವಸ್ಥೆಯನ್ನು ಮರುಸ್ಥಾಪಿಸುವಂತೆ ಸೂಚಿಸಿದ ಜಿಲ್ಲಾ ನ್ಯಾಯಾಧೀಶರು ಎಲ್ಲಾ ಕೆಲಸಗಳನ್ನು ಕೂಡಾ ಶೀಘ್ರವಾಗಿ ಮಾಡಬೇಕೆಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ, ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ, ನಗರಠಾಣೆಯ ಪಿಎಸ್‍ಐ  ಸುಮಾ ಆಚಾರ್ಯ ಮುಂತಾದವರು ಇದ್ದರು. 

ಘಟನೆಯ ಕುರಿತು ತನಿಖೆಗೆ ಆದೇಶ: ನ್ಯಾಯಾಲಯದ ಸಂಕೀರ್ಣಕ್ಕೆ ಭೇಟಿ ನೀಡಿದ ಜಿಲ್ಲಾ ನ್ಯಾಯಾಧೀಶ ರಾಜಶೇಖರ ಅವರು ಭಟ್ಕಳ ವೃತ್ತ ನಿರೀಕ್ಷಕ ದಿವಾಕರ ಅವರಿಗೆ ಘಟನೆಯ ಕುರಿತು ಸೂಕ್ತ ತನಿಖೆಯನ್ನು ನಡೆಸಿ ಘಟನೆಯ ಹಿಂದಿರುವ ಕಾರಣವನ್ನು ತಿಳಿಸುವಂತೆ ಸೂಚಿಸಿದರು. ಬೆಂಕಿ ಹೊತ್ತಿಕೊಂಡು ಉರಿಯಲು ಕಾರಣ ಏನು, ಘಟನೆಯ ಸೂಕ್ತ ತನಿಖೆಯನ್ನು ನಡೆಸಿ ವರದಿಯನ್ನು ನೀಡುವಂತೆಯೂ ತಿಳಿಸಿದರು. 

ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ಮನವಿ: ಹೊಸದಾಗಿ ನ್ಯಾಯಾಲಯ ಸಂಕೀರ್ಣ ಕಟ್ಟಲು ಈಗಾಗಲೇ ಅಂದಾಜು ಪಟ್ಟಿಯನ್ನು ತಯಾರಿಸಿ ಕಳುಹಿಸಲಾಗಿದ್ದು ನ್ಯಾಯಾಲಯದ ಕಟ್ಟಡ ವಿನ್ಯಾಸ, ಕಟ್ಟಡದ ನಿರ್ಮಾಣ ಶೀಘ್ರ ಆಗಬೇಕು ಎಂದು ವಕೀಲರ ಸಂಘದ ವತಿಯಿಂದ ಮನವಿ ಮಾಡಲಾಯಿತು. ಇದಕ್ಕೆ ಉತ್ತರಿಸಿದ ನ್ಯಾಯಾಧೀಶರು ಹೊಸ ನ್ಯಾಯಾಲಯ ಸಂಕೀರ್ಣದ ಕುರಿತು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದರು. 

ಈ ಸಂದರ್ಭದಲ್ಲಿ ಭಟ್ಕಳ ವಕೀಲರ ಸಂಘದ ಅಧ್ಯಕ್ಷ ಎಂ.ಎಲ್. ನಾಯ್ಕ, ಹಿರಿಯ ನ್ಯಾಯವಾದಿ, ಮಾಜಿ ಶಾಸಕ ಜೆ.ಡಿ.ನಾಯ್ಕ, ನೋಟರಿ ಆರ್. ಆರ್. ಶ್ರೇಷ್ಟಿ, ಕೆ.ಎಸ್.ರೈ, ವಕೀಲರ ಸಂಘದ ಕಾರ್ಯದರ್ಶಿ ಜೆ.ಡಿ.ಭಟ್ಟ, ಹಿರಿಯ ಹಾಗೂ ಕಿರಿಯ ವಕೀಲರುಗಳು, ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News