ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ವಿನ್ಯಾಸ ಅನುಮೋದನೆ ಶುಲ್ಕ ಕಡಿತ: ರವಿಶಂಕರ ಮಿಜಾರು

Update: 2021-07-07 07:38 GMT

ಮಂಗಳೂರು, ಜು. 7: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 2020ರ ಫೆಬ್ರವರಿಯಿಂದ ನಿವೇಶನ ವಿನ್ಯಾಸ ಅನುಮೋದನೆಯ ಶುಲ್ಕದಲ್ಲಿ ಮಾಡಲಾಗಿದ್ದ ಭಾರೀ ಏರಿಕೆಯನ್ನು ಕಡಿತಗೊಳಿಸಿ ರಾಜ್ಯ ಸರಕಾರ ಆದೇಶಿಸಿದ್ದು, ಪ್ರಸಕ್ತ ಹೊಸ ಪರಿಷ್ಕೃತ ದರವನ್ನು ಅನ್ವಯಿಸಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ರವಿಶಂಕರ ಮಿಜಾರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಏರಿಕೆಯಾಗಿದ್ದ ವಿನ್ಯಾಸ ಅನುಮೋದನೆ ದರ ಏರಿಕೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ಮನಗಂಡು ಪ್ರಾಧಿಕಾರದಿಂದ ಆಗಸ್ಟ್‌ನಲ್ಲಿ ಪತ್ರ ಬರೆಯಲಾಗಿತ್ತು. ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರು ಚರ್ಚಿಸಿ ಇದೀಗ ಶುಲ್ಕವನ್ನು ಕಡಿತಗೊಳಿಸಿ ಆದೇಶಿಸಿದ್ದಾರೆ ಎಂದು ಅವರು ಹೇಳಿದರು.

ಕಳೆದ ವರ್ಷ ಏರಿಕೆಯಾದ ಶುಲ್ಕದ ಪ್ರಕಾರ ಸೆಂಟ್ಸ್‌ಗೆ 6 ಲಕ್ಷ ರೂ. ಬೆಲೆ ಇರುವ ಕಡೆ ಐದು ಸೆಂಟ್ಸ್ ಜಾಗಕ್ಕೆ ಸುಮಾರು 33,000 ರೂ.ದವರೆಗೆ ಶುಲ್ಕವನ್ನು ವಿಧಿಸಲಾಗುತ್ತಿತ್ತು. ಪರಿಷ್ಕೃತ ಆದೇಶದ ಪ್ರಕಾರ ಈ ದರ 6,800 ರೂ.ಗಳಿಗೆ ಅಂದರೆ ಸುಮಾರು 5 ಪಟ್ಟು ಕಡಿಮೆಯಾಗಿರುತ್ತದೆ ಎಂದು ಅವರು ಹೇಳಿದರು.

ಶೀಘ್ರವೇ 3 ಬಡಾವಣೆಗಳ ಅಭಿವೃದ್ಧಿ ಕಾರ್ಯ ಪೂರ್ಣ

ಮಂಗಳೂರು ತಾಲೂಕಿನ ಕೊಣಾಜೆ, ಕುಂಜತ್ತಬೈಲ್ ಹಾಗೂ ಚೇಳ್ಯಾರು ಗ್ರಾಮದಲ್ಲಿನ ವಸತಿ ಬಡಾವಣೆ ಅಭಿವೃದ್ಧಿ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿದ್ದು, ಸುಮಾರು 15 ವರ್ಷಗಳ ಬಳಿಕ ಮುಡಾದಿಂದ ಈ ಮೂರು ಬಡಾವಣೆಗಳಲ್ಲಿ ಜನರಿಗೆ ನಿವೇಶನ ಹಂಚಿಕೆಯಾಗಲಿದೆ ಎಂದು ರವಿಶಂಕರ್ ಮಿಜಾರು ತಿಳಿಸಿದರು.

ಕೊಣಾಜೆಯ 13 ಎಕರೆ 11 ಸೆಂಟ್ಸ್ ಜಮೀನಿನಲ್ಲಿ 10.21 ಕೋಟಿ ರೂ. ವೆಚ್ಚದಲ್ಲಿ ಬಡಾವಣೆ ಅಭಿವೃದ್ಧಿಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಲಾಗಿದೆ. ಶೇ. 90ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ಬಡಾವಣೆಯಲ್ಲಿ 135 ನಿವೇಶನಗಳಿದ್ದು, ಈ ಪೈಕಿ 94 ನಿವೇಶನಗಳು ಹಂಚಿಕೆಗೆ ಲಭ್ಯವಿದೆ. 41 ನಿವೇಶನಗಳು ಮೂಲೆ ಹಾಗೂ ಅನಿಯಮಿತ ನಿವೇಶನಗಳಾಗಿರುತ್ತವೆ. ಈ ವರ್ಷದ ಅಂತ್ಯದೊಳಗೆ ನಿವೇಶನ ಹಂಚಿಕೆ ಮಾಡಲಾಗುವುದು.

ಕುಂಜತ್ತಬೈಲ್ ಗ್ರಾಮದ 17 ಎಕರೆ 49 ಸೆಂಟ್ಸ್ ಜಮೀನಿನಲ್ಲಿ ಬಡಾವಣೆ ಅಭಿವೃದ್ಧಿಗಾಗಿ ಟೆಂಡರ್ ಕರೆಯಲಾಗಿದ್ದು, ತಾಂತ್ರಿಕ ಬಿಡ್ ಅನುಮೋದನೆಯ ಹಂತದಲ್ಲಿದೆ. ಬಡಾವಣೆಯಲ್ಲಿ 140 ನಿವೇಶನಗಳಿದ್ದು, 21 ನಿವೇಶನಗಳು ಮೂಲೆ ಹಾಗೂ 23 ಅನಿಯಮಿತ ನಿವೇಶನಗಳಾಗಿರುತ್ತವೆ. ಚೇಳ್ಯಾರ್ ಗ್ರಾಮದಲ್ಲಿ 45 ಎಕರೆ 85.50 ಸೆಂಟ್ಸ್ ಜಮೀನಿನಲ್ಲಿ ಬಡಾವಣೆಗೆ ಡಿಪಿಆರ್ ಅನುಮೋದನೆಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಇಲ್ಲಿ 709 ನಿವೇಶನಗಳಿದ್ದು, ಈ ಪೈಕಿ 129 ಅನಿಯಮಿತ ಹಾಗೂ ಮೂಲೆ ನಿವೇಶನಗಳಾಗಿದ್ದು, ಯೋಜನೆಗೆ ಸರಕಾರ ಅನುಮೋದನೆ ಸಿಗಬೇಕಾಗಿದೆ ಎಂದು ರವಿಶಂಕರ್ ಮಿಜಾರು ವಿವರಿಸಿದರು.

ಮುಆಡಾದಿಂದ ಈಗಾಗಲೇ 5 ಕೆರೆಗೆಳ ಅಭಿವೃದ್ಧಿ ಕಾರ್ಯ ಪೂರ್ಣವಾಗಿದ್ದು, 10 ಕೆರೆಗಳ ಅಭಿವೃದ್ಧಿ ಪ್ರಗತಿ ಹಂತದಲ್ಲಿದ್ದು ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಡಾ ಆಯುಕ್ತ ದಿನೇಶ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News