ಸರೆಂಡರ್‌ನಿಂದ ಬಿಡುಗಡೆಯಾಗದ ಬಸ್ ಓಡಾಡಿದರೆ ಮುಟ್ಟುಗೋಲು: ಆರ್‌ಟಿಓ ಎಚ್ಚರಿಕೆ

Update: 2021-07-07 13:47 GMT

ಉಡುಪಿ, ಜು.7: ಕೆಎಸ್‌ಆರ್‌ಟಿಸಿ ಸೇರಿದಂತೆ ಉಡುಪಿ ಜಿಲ್ಲೆಯಾದ್ಯಂತ ಪರವಾನಿಗೆ ರಹಿತ/ವೇಳಾಪಟ್ಟಿ ರಹಿತ/ಅಧ್ಯರ್ಪಣೆ(ಸರೆಂಡರ್)ಯಿಂದ ಬಿಡುಗಡೆ ಹೊಂದದ ಬಸ್, ಮ್ಯಾಕ್ಸಿ ಕ್ಯಾಬ್‌ಗಳು ಸಾರ್ವಜನಿಕ ರಸ್ತೆಯಲ್ಲಿ ಓಡಾಡುವುದು ಕಂಡುಬಂದಲ್ಲಿ ಕೂಡಲೇ ಮುಟ್ಟುಗೋಲು ಹಾಕಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 233 ವಾಹನಗಳನ್ನು ಅದ್ಯರ್ಪಣದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ ತಿಳಿಸಿದ್ದಾರೆ.

ಆದುದರಿಂದ ಉಡುಪಿಯ ವಾಹನ ಮಾಲಕರು/ಕ.ರಾ.ರ.ಸಾ. ಸಂಸ್ಥೆಯ ವ್ಯವಸ್ಥಾಪಕರು ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತೆ ವಹಿಸಿ ವಾಹನವನ್ನು ಅಧ್ಯರ್ಪಣ ದಿಂದ ಬಿಡುಗಡೆಗೊಳಿಸಿದ ನಂತರವೇ ಸಾರ್ವಜನಿಕ ರಸ್ತೆಯಲ್ಲಿ ಓಡಿಸಬೇಕು ಮತ್ತು ಸಾರ್ವಜನಿಕರಿಗೆ ಅನಾವಶ್ಯಕವಾಗಿ ತೊಂದರೆಗೆ ಎಡೆಮಾಡಿಕೊಡದಂತೆ ವಾಹನ ಚಲಾಯಿಬೇಕು ಎಂದು ಅವರು ಹೇಳಿದ್ದಾರೆ.

ಖಾಸಗಿ ಬಸ್‌ಗಳು, ಕೆಎಸ್‌ಆರ್‌ಟಿಸಿ ಬಸ್‌ಗಳು, ಮ್ಯಾಕ್ಸಿಕ್ಯಾಬ್ ವಾಹನ ಗಳನ್ನು ಓಡಿಸುವ ಚಾಲಕರು ಹಾಗೂ ನಿರ್ವಾಹಕರು, ಸಹಾಯಕರು, ಕೋವಿಡ್ ಲಸಿಕೆ ಪಡೆಯದೇ ಮಾಸ್ಕ್ ಹಾಕಿಕೊಳ್ಳದೆ ಕರ್ತವ್ಯ ನಿರ್ವಹಿಸಿದಲ್ಲಿ ವಾಹನದ ಮಾಲಕರ ಮೇಲೆ ಹಾಗೂ ನೌಕರರ ಮೇಲೆ ಕಟ್ಟುನಿಟ್ಟಿನ ಕೋವಿಡ್ 19ರ ಜಾಗೃತ ಕ್ರಮವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಆದುದರಿಂದ ಬಸ್ ಮಾಲಕರ ಸಂಘದ ಅಧ್ಯಕ್ಷರು ಹಾಗೂ ಎಲ್ಲಾ ಬಸ್ಸು ಮಾಲಕರು, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರು ಈಗಾಗಲೇ ಲಸಿಕೆ ಪಡೆದಿರುವ 850 ಚಾಲಕ/ನಿರ್ವಾಹಕ/ಸಹಾಯಕರಿಗೆ ಮಾತ್ರ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟು ವಾಹನಕ್ಕೆ ವಿಧಿಸುವ ದುಬಾರಿ ದಂಡವನ್ನು ತಪ್ಪಿಸಿ ಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ನಂಬರ್ ಬೋರ್ಡಿನಲ್ಲಿನ ಹೆಸರು ತೆರವಿಗೆ ಸೂಚನೆ

ವಾಹನದ ನೋಂದಣಿ ಫಲಕದ ಮೇಲೆ ಅಥವಾ ಕೆಳಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ/ರಾಜ್ಯ/ಜಿಲ್ಲಾ ಮಾನವ ಹಕ್ಕುಗಳ ಸಂಸ್ಥೆಗಳ/ಒಕ್ಕೂಟ ಅಥವಾ ಹೆಸರುಗಳನ್ನು, ಚಿಹ್ನೆ/ಲಾಂಛನಗಳನ್ನು ಹಾಗೂ ಇತರೆ ಸಂಘ ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಳ್ಳುವುದನ್ನು ಕಡ್ಡಾಯವಾಗಿ ತೆರವುಗೊಳಿಸಲು ಹೈಕೋರ್ಟ್ ಆದೇಶ ನೀಡಿದೆ.

ಈ ಹಿನ್ನೆಲೆಯಲ್ಲಿ ನೋಂದಣಿ ಫಲಕಕ್ಕೆ ಅಡಚಣೆಯಾಗದ ರೀತಿಯಲ್ಲಿ ಇಲಾಖೆ/ಸಂಸ್ಥೆಗಳ ಹೆಸರುಗಳನ್ನು ಹಾಕಬೇಕು. ಹಾಕಿದ್ದರೆ ಅದನ್ನು ತೆಗೆಸಿ ನೋಂದಣಿ ಸಂಖ್ಯೆ ಫಲಕವನ್ನು ಮಾತ್ರ ವಾಹನಕ್ಕೆ ಅಳವಡಿಸಬೇಕೆಂದು ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೋಂದಣಿ ಫಲಕದಲ್ಲಿ ಯಾವುದೇ ನ್ಯೂನ್ಯತೆ ಇದ್ದಲ್ಲಿ ದಂಡ ವಿಧಿಸಲಾಗುವುದು. ತಪ್ಪಿದ್ದಲ್ಲಿ ಪ್ರಕರಣವನ್ನು ನ್ಯಾಯಾಲಯದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬೇಕಾಗುತ್ತದೆ ಎಂದು ಆರ್‌ಟಿಓ ಜೆ.ಪಿ. ಗಂಗಾಧರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News