ಮರವೂರು ಸೇತುವೆ ಕುಸಿತ ಹಿನ್ನೆಲೆ: ಬಜ್ಪೆ, ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಮಂದಿಗೆ ‘ಸಾರಿಗೆ ಸಂಪರ್ಕ’ ಸಮಸ್ಯೆ

Update: 2021-07-09 14:30 GMT

ಮಂಗಳೂರು, ಜು. 9: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕ ಕಲ್ಪಿಸುವ ಬಜ್ಪೆ ಸಮೀಪದ ಮರವೂರು ಹಳೆಯ ಸೇತುವೆಯು ಕುಸಿತಗೊಂಡು 25 ದಿನಗಳು ಕಳೆದಿದೆ. ಘಟನೆ ನಡೆದ ತಕ್ಷಣ ಬೆಂಗಳೂರಿನಿಂದ ಆಗಮಿಸಿದ ತಂತ್ರಜ್ಞರ ತಂಡವು ಮರವೂರು ಸೇತುವೆಯನ್ನು ಪರಿಶೀಲಿಸಿದೆ. ಅಲ್ಲದೆ ದುರಸ್ತಿ ಕಾರ್ಯವೂ ಭರದಿಂದ ಸಾಗುತ್ತಿದೆ. ಆದರೆ ಬಜ್ಪೆ ಸುತ್ತಮುತ್ತಲಿನ ಮರವೂರು, ಕರಂಬಾರು, ಕೆಂಜಾರು ಪರಿಸರದ ಸಾವಿರಾರು ಮಂದಿಗೆ ‘ಸಾರಿಗೆ ಸಂಪರ್ಕ’ ಸಮಸ್ಯೆಯಾಗಿ ಪರಿಣಮಿಸಿದೆ.

ಮಂಗಳೂರಿನಿಂದ ಬಜ್ಪೆ-ಕೆಂಜಾರಿನಲ್ಲಿರುವ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಈ ಪ್ರಮುಖ ರಸ್ತೆಗೆ ಫಲ್ಗುಣಿ ನದಿಯಲ್ಲಿ 1968ರಲ್ಲಿ ನಿರ್ಮಿಸಲಾಗಿದ್ದ ಮರವೂರು ಸೇತುವೆಯ ಮೂಲಕ  ವಿಮಾನ ನಿಲ್ದಾಣವಲ್ಲದೆ ಬಜ್ಪೆ, ಕಿನ್ನಿಗೋಳಿ, ಕಟೀಲು, ನೆಲ್ಲಿತೀರ್ಥ, ಅದ್ಯಪಾಡಿಗೆ ತೆರಳ ಬಹುದಾಗಿದೆ. ಅಲ್ಲದೆ ಆ ಭಾಗದ ಜನರು ಮಂಗಳೂರಿಗೆ ಈ ಸೇತುವೆಯ ಮೂಲಕ ಬರುತ್ತಿದ್ದರು. ಇದೀಗ ಸೇತುವೆಯ ಕುಸಿತದಿಂದ ಅತ್ತಿಂದಿತ್ತ ಜನರು ಓಡಾಡಲು ಸುತ್ತುಬಳಸುವಂತಾಗಿದೆ.

ಮರವೂರು ಸೇತುವೆ ಮೂಲಕ ಮಂಗಳೂರಿನಿಂದ ಕೆಂಜಾರು ವಿಮಾನ ನಿಲ್ದಾಣ ತಲುಪಲು ಕೇವಲ 9 ಕಿ.ಮೀ. ಮಾತ್ರ ದೂರವಿದೆ. ಆದರೆ ಜೂ.14ರ ತಡರಾತ್ರಿ ಸೇತುವೆ ಕುಸಿದ ಬಳಿಕ ಜನರು ಮತ್ತು ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದರೆ ಉಡುಪಿ ಕಡೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುವವರು ಕಿನ್ನಿಗೋಳಿ, ಬಜ್ಪೆ ಮೂಲಕ ಕೆಂಜಾರು ತಲುಪಬಹುದು. ಮಂಗಳೂರಿನಿಂದ ಕಾವೂರು, ಕೂಳೂರು, ಕೆಬಿಎಸ್ ಜೋಕಟ್ಟೆ, ಪೊರ್ಕೊಡಿ, ಬಜ್ಪೆ ಮೂಲಕವೂ ವಿಮಾನ ನಿಲ್ದಾಣ ತಲುಪಬಹುದು. ಮೂಡುಬಿದಿರೆ ಮಾರ್ಗವಾಗಿ ಪಚ್ಚನಾಡಿ, ವಾಮಂಜೂರು, ಗುರುಪುರ ಕೈಕಂಬ, ಬಜಪೆ ಮೂಲಕವೂ ಸಂಚರಿಸಬಹುದು. ಆದರೆ ಸುತ್ತುಬಳಸಿ ಹೋಗಬೇಕಾದ ಕಾರಣ ತುಂಬಾ ಸಮಯ ಹಿಡಿಯುತ್ತದೆ ಮತ್ತು ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಅಲ್ಲದೆ ಜೋಕಟ್ಟೆ ಮೂಲಕ ಹಾದುಹೋಗುವ ಸ್ತೆಯು ತೀರಾ ಹದೆಗೆಟ್ಟಿದ್ದು, ಇದನ್ನು ಆದಷ್ಟು ಬೇಗ ದುರಸ್ತಿಪಡಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಬಜ್ಪೆ ವಿಮಾನ ನಿಲ್ದಾಣ, ಕಟೀಲು, ಕಿನ್ನಿಗೋಳಿ ಕಡೆಗೆ ತೆರಳಲು ಎಸ್‌ಇಝೆಡ್ ಮೇಲ್ಸೇತುವೆ ಮೂಲಕ ವಾಹನಗಳಿಗೆ ತೆರಳಲು ಅನುಮತಿ ನೀಡಬೇಕು ಎಂದು ಈಗಾಗಲೆ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ. ಒಂದು ವೇಳೆ ಎಸ್‌ಇಝೆಡ್ ಅಧಿಕಾರಿಗಳು ಇದಕ್ಕೆ ಅವಕಾಶ ಕಲ್ಪಿಸಿದರೆ ಜೋಕಟ್ಟೆ ಮಾರ್ಗವಾಗಿ ಹೋಗುವ ಬದಲು ಕಳವಾರಿನಿಂದ ಎಸ್‌ಇಝೆಡ್ ರಸ್ತೆ ಮೂಲಕ ವಿಮಾನ ನಿಲ್ದಾಣ ಸಹಿತ ಮತ್ತಿತರ ಪ್ರದೇಶಕ್ಕೆ ಸಂಪರ್ಕ ಮಾಡಲು ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

''ರೋಗಿಗಳು ಮತ್ತು ಗರ್ಭಿಣಿಯರನ್ನು ತುರ್ತು ಚಿಕಿತ್ಸೆಗಾಗಿ ರಾತ್ರೋ ರಾತ್ರಿ ಕರೆದೊಯ್ಯಲು ತುಂಬಾ ಕಷ್ಟವಾಗುತ್ತದೆ. ಕೆಲವೊಮ್ಮೆ ಜೋಕಟ್ಟೆ ಯಲ್ಲಿ ರೈಲ್ವೆ ಗೇಟ್ ಬಂದ್ ಆದರೆ ತೆರೆಯಲು ಕನಿಷ್ಟ ಮುಕ್ಕಾಲು ಗಂಟೆ ಬೇಕಾಗುತ್ತದೆ. ಆವರೆಗೂ ಗೇಟ್ ಬಳಿ ಕಾಯಬೇಕಾಗುತ್ತದೆ. ದ್ವಿಚಕ್ರ ವಾಹನ ಸವಾರರು ಸೇತುವೆಯ ಬಳಿ ವಾಹನ ನಿಲ್ಲಿಸಿ 4 ಕಿ.ಮೀ. ದೂರದ ಮರಕಡ ಜಂಕ್ಷನ್‌ವರೆಗೆ ನಡೆದುಕೊಂಡು ಹೋಗಿ ಬಸ್ಸಿನಲ್ಲಿ ಪ್ರಯಾಣಿಸಿ ಮಂಗಳೂರು ತಲುಪುತ್ತಾರೆ. ಹಾಗೇ ಮಂಗಳೂರಿನಿಂದ ಈ ಕಡೆ ತಲುಪುತ್ತಾರೆ. ಮಳೆಗಾಲದಲ್ಲಿ ಹೀಗೆ ನಾಲ್ಕೈದು ಕಿ.ಮೀ. ನಡೆದುಕೊಂಡು ಹೋಗುವುದು ಸಮಸ್ಯೆಯಾಗಿ ಪರಿಣಮಿಸಿದೆ. ದ.ಕ. ಜಿಲ್ಲಾಡಳಿತ ಈ ಭಾಗದ ಜನರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅತೀ ಶೀಘ್ರ ಪರಿಹಾರ ಕಲ್ಪಿಸಬೇಕಿದೆ''.

- ಶಾಲಿ ಮರವೂರು, ಅಧ್ಯಕ್ಷರು, ಮಸ್ಜಿದುರ್ರಹ್ಮಾನ್ ಸೌಹಾರ್ದನಗರ, ಮರವೂರು-ಬಜ್ಪೆ

''ಸೇತುವೆ ಕುಸಿತದಿಂದ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಇನ್ನು 8 ದಿನದೊಳಗೆ ಕಾಮಗಾರಿ ಪೂರ್ಣ ಗೊಳ್ಳಲಿದೆ ಎಂದು ಕಾಮಗಾರಿಯ ಗುತ್ತಿಗೆದಾರರು ಮತ್ತು ಇಂಜಿನಿಯರ್ ತಿಳಿಸಿದ್ದಾರೆ. ಆದಾಗ್ಯೂ ಜಿಲ್ಲಾಡಳಿತ ತಕ್ಷಣ ಸೇತುವೆಯನ್ನು ದುರಸ್ತಿಗೊಳಿಸಿ ಕನಿಷ್ಟ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಿದೆ''.

- ಐವನ್ ಡಿಸೋಜ, ಮಾಜಿ ಸದಸ್ಯರು, ವಿಧಾನ ಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News