ದ.ಕ.ಜಿಲ್ಲೆಯಲ್ಲಿ ಮತ್ತೆ ಬಿರುಸು ಪಡೆದ ಮಳೆ : ಜು.11,12ರಂದು ರೆಡ್ ಅಲರ್ಟ್

Update: 2021-07-09 15:14 GMT

ಮಂಗಳೂರು, ಜು. 9: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಮುಂಗಾರು ಮಳೆ ಮತ್ತೆ ಬಿರುಸು ಪಡೆದಿದೆ. ಗುರುವಾರ ತಡರಾತ್ರಿಯಿಂದ ಜಿಲ್ಲಾದ್ಯಂತ ಸುರಿಯಲಾರಂಭಿಸಿದ ಮಳೆ ಶುಕ್ರವಾರ ಮಧ್ಯಾಹ್ನ ವರೆಗೆ ಮುಂದುವರಿದಿತ್ತು.

ಕಳೆದ ಎರಡು ವಾರದಿಂದ ಮಳೆಯಿಲ್ಲದೆ ಮೋಡ ಕವಿದ ವಾತಾವರಣದ ಮಧ್ಯೆಯೂ ಒಂದಷ್ಟು ಬಿಸಿಲ ಹೊಡೆತಕ್ಕೆ ಕಂಗೆಟ್ಟಿದ್ದ ಜನರಿಗೆ ಶುಕ್ರವಾರದ ಮಳೆ ತಂಪಿನ ಅನುಭವ ನೀಡಿದೆ. ಘಟ್ಟದ ತಪ್ಪಲಿನ ಹಲವು ಕಡೆ ನಿರಂತರ ಮಳೆಯಾಗಿದ್ದು, ತೋಡು ಹಳ್ಳಗಳಲ್ಲಿ ನೀರಿನ ಹರಿಯುವಿಕೆ ತೀವ್ರಗೊಂಡಿದೆ. ಆರೆಂಜ್ ಅಲರ್ಟ್ ಮಧ್ಯೆಯೇ ಬಿರುಸಿನ ಮಳೆಯಾದ ಹಿನ್ನೆಲೆಯಲ್ಲಿ ಜು.11,12ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಶುಕ್ರವಾರ ಮಂಗಳೂರು ತಾಲೂಕಿನಲ್ಲಿ ಅತ್ಯಧಿಕ ಅಂದರೆ 36.8 ಮಿ.ಮೀ.ಮಳೆಯಾದರೆ, ಬೆಳ್ತಂಗಡಿಯಲ್ಲಿ 10.1 ಮಿ.ಮೀ., ಬಂಟ್ವಾಳದಲ್ಲಿ 16.5, ಪುತ್ತೂರಿನಲ್ಲಿ 3, ಸುಳ್ಯದಲ್ಲಿ 2.2, ಮೂಡುಬಿದಿರೆಯಲ್ಲಿ 5.4, ಕಡಬದಲ್ಲಿ 2.9 ಮಿ.ಮೀ. ಸಹಿತ ಜಿಲ್ಲೆಯಲ್ಲಿ ಸರಾಸರಿ 11 ಮಿ.ಮೀ. ಮಳೆಯಾಗಿದೆ. ಶುಕ್ರವಾರದ ಗರಿಷ್ಠ ತಾಪಮಾನ 26.1ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮೀನುಗಾರರಿಗೆ ಎಚ್ಚರಿಕೆ

ಸಮುದ್ರದಿಂದ ಗಂಟೆಗೆ 40-50 ಕಿ.ಮೀ.ನಿಂದ 60 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಹಾಗಾಗಿ ಕರ್ನಾಟಕ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ಸಮುದ್ರ ತಟದ ನಿವಾಸಿಗಳೂ ಕೂಡ ಮಳೆ-ಗಾಳಿಯ ಅಪಾಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News