ರಾಜ್ಯ ಕರಾವಳಿ ತೀರದುದ್ದಕ್ಕೂ ಕಾಂಡ್ಲಾವನ ಬೆಳೆಸಲು ಇಲಾಖೆ ಚಿಂತನೆ: ಸಚಿವ ಅರವಿಂದ ಲಿಂಬಾವಳಿ

Update: 2021-07-10 14:18 GMT

ಕುಂದಾಪುರ, ಜು.10: ಪಶ್ಚಿಮ ಕರಾವಳಿಯ ನದಿ ಹಾಗೂ ಕಡಲು ತೀರಗಳಲ್ಲಿ ವ್ಯಾಪಕವಾಗಿ ಬೆಳೆಯುವ ಕಾಂಡ್ಲಾವನಗಳಿಂದ ಹಲವು ಪ್ರಯೋಜನ ಗಳಿರುವುದರಿಂದ ರಾಜ್ಯ ಪಶ್ಚಿಮ ಕರಾವಳಿಯ ತೀರದುದ್ದಕ್ಕೂ ಕಾಂಡ್ಲಾವನವನ್ನು ಬೆಳೆಸುವ ಬಗ್ಗೆ ಇಲಾಖೆ ಚಿಂತನೆ ನಡೆಸಿದೆ ಎಂದು ರಾಜ್ಯ ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಎರಡು ದಿನಗಳ ಉಡುಪಿ ಜಿಲ್ಲಾ ಪ್ರವಾಸದಲ್ಲಿ ಇಂದು ಬೆಳಗ್ಗೆ ಕುಂದಾಪುರದ ಪಂಚಗಂಗಾವಳಿ ನದಿ ಹಿನ್ನೀರಿನ ಪ್ರದೇಶದಲ್ಲಿ ವ್ಯಾಪಕವಾಗಿರುವ ಕಾಂಡ್ಲಾವನ ಪ್ರದೇಶವನ್ನು ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಬೋಟ್‌ನಲ್ಲಿ ಸಂಚರಿಸಿ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಕಾಂಡ್ಲಾವನ ಬೆಳೆದ ಪ್ರದೇಶದಲ್ಲಿ ಸುನಾಮಿ, ಸೈಕ್ಲೋನ್‌ನಂಥ ಪ್ರಾಕೃತಿಕ ವಿಕೋಪಗಳಿಂದ ರಕ್ಷಣೆ ದೊರೆಯುತ್ತದೆ. ಈ ಪ್ರದೇಶದಲ್ಲಿ ಕುಂದಾಪುರದ ಪ್ರಸಿದ್ಧ ಕಾಣೆ ಮೀನು ಸೇರಿದಂತೆ ವಿವಿಧ ಜಾತಿಯ ಮೀನುಗಳು ಮೊಟ್ಟೆ ಯನ್ನಿಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಅಲ್ಲದೇ ಇಲ್ಲಿ ಇಕೋ ಟೂರಿಸಂನ್ನು ಅಭಿವೃದ್ಧಿ ಪಡಿಸುವ ಮೂಲಕ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯುತ್ತದೆ ಎಂದವರು ವಿವರಿಸಿದರು.

ಈ ಎಲ್ಲಾ ಕಾರಣದಿಂದ ಕಾಂಡ್ಲಾವನಗಳ ಸಂರಕ್ಷಣೆಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಹಾಗೂ ಇದನ್ನು ಕರಾವಳಿ ತೀರದುದ್ದಕ್ಕೂ ಬೆಳೆಸಲು ಚಿಂತನೆ ನಡೆಸಲಾಗಿದೆ. ಇಲ್ಲಿ ಇಕೋ ಟೂರಿಸಂನ್ನು ಅಭಿವೃದ್ಧಿ ಪಡಿಸಿ ಅದರಿಂದ ಬರುವ ಆದಾಯವನ್ನು ಕಾಂಡ್ಲ ಅರಣ್ಯ ಬೆಳಸಲು ಬಳಸಬಹುದಾಗಿದೆ ಎಂದು ಲಿಂಬಾವಳಿ ಹೇಳಿದರು.

ರಾಜ್ಯದಲ್ಲಿ ಅರಣ್ಯ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಬಂಡಿಪುರ ಸೇರಿದಂತೆ ರಾಜ್ಯದ ಅರಣ್ಯದಲ್ಲಿ ಒಳಪ್ರದೇಶವನ್ನು ಹೊರತು ಪಡಿಸಿ ಹೊರ ಪ್ರದೇಶಗಳಲ್ಲಿ ಸಂಚರಿಸಲು ಅನುಮತಿ ಇದೆ. ದಟ್ಟಾರಣ್ಯ ಪ್ರದೇಶವನ್ನು 360ಡಿಗ್ರಿ ಕೆಮರಾ ಬಳಸಿ ವೀಡಿಯೊಗ್ರಫಿ ಮಾಡುವ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಅವಕಾಶವಿದೆ. ಅದೇ ರೀತಿ ಕರಾವಳಿಯ ಪ್ರಾಕೃತಿಕ ರಮಣೀಯ ಪ್ರದೇಶಗಳನ್ನು ತಂತ್ರಜ್ಞಾನದ ಮೂಲಕ ಆಕರ್ಷಕವಾಗಿಸೆರೆಹಿಡಿದು ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಅರಣ್ಯ ಪ್ರದೇಶ ಹೆಚ್ಚಳ: ರಾಜ್ಯದಲ್ಲಿ ಹಿಂದೆ ಯಡಿಯೂರಪ್ಪ ಸರಕಾರವಿದ್ದಾಗ ಜಾರಿಗೆ ತಂದ ‘ಹಸಿರು ಕವಚ’ ಯೋಜನೆ ಏನಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಲಿಂಬಾವಳಿ, ಈ ಯೋಜನೆಯಿಂದಾಗಿ ರಾಜ್ಯದಲ್ಲಿ ಹಸಿರು ಪ್ರದೇಶದ ವಿಸ್ತೀರ್ಣ ಹೆಚ್ಚಿದೆ ಎಂದರು. ಮೊದಲು ಕರ್ನಾಟಕದಲ್ಲಿ ಶೇ.13ರಷ್ಟು ಮಾತ್ರ ಹಸಿರು ಪ್ರದೇಶವಿದ್ದು (ಗ್ರೀನ್ ಕವರ್), ಹಸಿರು ಕವಚ ಯೋಜನೆಯಿಂದ ಅದು ಈಗ ಶೇ.23ಕ್ಕೆ ಹೆಚ್ಚಿದೆ. ಅದನ್ನು ಶೇ.33ಕ್ಕೆ ಹೆಚ್ಚಿಸುವ ಗುರಿಯನ್ನು ನಾವು ಇಟ್ಟುಕೊಂಡಿದ್ದೇವೆ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೂ ಆಗಿರುವ ಲಿಂಬಾವಳಿ ತಿಳಿಸಿದರು.

ಇದು ಒಂದೇ ದಿನದಲ್ಲಿ ಅಥವಾ ಒಂದೇ ವರ್ಷದಲ್ಲಿ ಫಲಿಸುವ ಯೋಜನೆ ಯಲ್ಲ ಎಂದ ಅವರು, ನಮಗೀಗ ಆಮ್ಲಜನಕದ ಅಗತ್ಯತೆಯ ಅರಿವಾಗಿದೆ. ಕೊರೋನಾ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಾಗಿದ್ದನ್ನು ಕಂಡಿದ್ದೇವೆ. ಕಾಂಡ್ಲಾ ಅರಣ್ಯಗಳಿಂದ, ಅರಣ್ಯಪ್ರದೇಶ, ಮೀಸಲು ಅರಣ್ಯಗಳಲ್ಲಿರುವ ಮರಗಳಿಂದ ಸಹಜವಾಗಿಯೇ ಆಮ್ಲಜನಕ ಸಿಗುತ್ತದೆ. ಹೀಗಾಗಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವ ಕೆಲಸವನ್ನು ಮಾಡಬೇಕು. ಜನರೂ ಇದಕ್ಕೆ ಸಹಕಾರ ನೀಡಿದರೆ ರಾಜ್ಯದಲ್ಲಿ ಹಸಿರು ಕವಚ ಹೆಚ್ಚಾಗಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಕಾಂಡ್ಲಾವನವನ್ನು ಪರಿಚಯಿಸುವ ಕಿರುಹೊತ್ತಿಗೆಯನ್ನು ಸಚಿವರು ಬಿಡುಗಡೆಗೊಳಿಸಿದರು.

ಸಚಿವರ ಕಾಂಡ್ಲಾವನ ಭೇಟಿಯ ಸಂದರ್ಭದಲ್ಲಿಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ರಾಜ್ಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಿಲ್ಲೋ ಟಾಗೋ, ಮಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್, ಕುಂದಾಪುರ ಉಪವಲಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಕಾರ್ಕಳ ವನ್ಯಜೀವಿ ವಿಭಾಗದ ಡಿಸಿಎಫ್ ರುತ್ರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಬೈಂದೂರು ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ ಹಾಗೂ ಇರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News