ಉಡುಪಿ: ಖಾಸಗಿ ಬಸ್ ಮಾಲಕರ ಸಂಘಗಳ ಒಕ್ಕೂಟ ಅಸ್ತಿತ್ವಕ್ಕೆ

Update: 2021-07-10 14:40 GMT

ಉಡುಪಿ, ಜು.10: ರಾಜ್ಯದ 20 ಜಿಲ್ಲೆಗಳಲ್ಲಿರುವ ಖಾಸಗಿ ಮಾಲಕರ ಸಂಘಗಳು ಸೇರಿ ರಚಿಸಿದ ಕರ್ನಾಟಕ ರಾಜ್ಯ ಬಸ್ ಮಾಲಕರ ಸಂಘಗಳ ಒಕ್ಕೂಟ ಶುಕ್ರವಾರ ಅಸ್ತಿತ್ವಕ್ಕೆ ಬಂದಿದ್ದು, ಅದರ ಮೊದಲ ಅಧ್ಯಕ್ಷರಾಗಿ ಉಡುಪಿಯ ಕುಯಿಲಾಡಿ ಸುರೇಶ್ ನಾಯಕ್ ಆಯ್ಕೆಯಾಗಿದ್ದಾರೆ.

ನಗರದ ಶಾರದಾ ಹೊಟೇಲ್‌ನಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಒಕ್ಕೂಟದ ಕಾರ್ಯಾಧ್ಯಕ್ಷರಾಗಿ ಚಿತ್ರದುರ್ಗದ ಲಿಂಗಾರೆಡ್ಡಿ, ಉಪಾಧ್ಯಕ್ಷರಾಗಿ ಉಡುಪಿಯ ಸದಾನಂದ ಛಾತ್ರ, ತುಮಕೂರಿನ ಮಂಜುನಾಥ, ಚಾಮರಾಜನಗರದ ಜನಾಬ್ ಅನ್ವರ್ ಪಾಷಾ, ದಾವಣಗೆರೆಯ ಮಲ್ಲೇಶಪ್ಪ, ಬೆಂಗಳೂರು ಗ್ರಾಮಾಂತರದ ಕುಮಾರಸ್ವಾಮಿ, ಮೈಸೂರಿನ ವಜ್ರಗೌಡ ಆಯ್ಕೆಯಾದರು.

ಚಿಕ್ಕಮಗಳೂರಿನ ಕೆ.ಕೆ.ಬಾಲಕೃಷ್ಣ ಪ್ರಧಾನ ಕಾರ್ಯದರ್ಶಿಯಾಗಿ, ಬೆಂಗಳೂರಿನ ವಿಕ್ರಂ ಕಾರ್ಯದರ್ಶಿಯಾಗಿ ಹಾಗೂ ಮಂಗಳೂರಿನ ಜೀವಂಧರ ಅಧಿಕಾರಿ, ಮಂಡ್ಯದ ಮಂಜೇಗೌಡ, ಬೆಂಗಳೂರು ಗ್ರಾಮಾಂತರದ ಶಿವಗಣೇಶ್, ಧಾರವಾಡದ ಮಾಧವ ನಾಯ್ಕ,ಮೈಸೂರಿನ ಆರ್.ಪಾರಿ, ಬೆಂಗಳೂರಿನ ಶಿವಕುಮಾರ್ ಜೊತೆ ಕಾರ್ಯದರ್ಶಿಗಳಾಗಿ ಆಯ್ಕೆಯಾದರು.

ಮಂಗಳೂರಿನ ದಿಲ್‌ರಾಜ್ ಆಳ್ವ ಖಜಾಂಚಿಯಾಗಿ, ಜ್ಯೋತಿಪ್ರಸಾದ್ ಹೆಗ್ಡೆ, ಚಿತ್ರದುರ್ಗದ ಅಜ್ಜಪ್ಪ, ತುಮಕೂರಿನ ಶಂಕರನಾರಾಯಣ ಸಂಘಟನಾ ಕಾರ್ಯ ದರ್ಶಿಗಳಾಗಿ ನೇಮಕಗೊಂಡರು.

ಎಲ್ಲಾ ಜಿಲ್ಲೆಗಳಿಗೆ ಭೇಟಿ: ತಾನು ಶೀಘ್ರವೇ ಖಾಸಗಿ ಬಸ್‌ಗಳಿರುವ ಎಲ್ಲಾ 20 ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ, ಸಮಸ್ಯೆಗಳ ಕುರಿತು ಅವಲೋಕಿಸಿ ಪರಿಹಾರಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಖಾಸಗಿ ಮತ್ತು ಸರಕಾರಿ ಬಸ್‌ಗಳಿಗೆ ಏಕರೂಪದ ದರ ನಿಗದಿ ಪಡಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ನೂತನ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೊರೋನ ಸಂದರ್ಭದಲ್ಲಿ ಉಳಿದೆಲ್ಲಾ ಕ್ಷೇತ್ರಗಳಿಗಿಂತ ಸಾರಿಗೆ ವ್ಯವಸ್ಥೆ ಅತಿ ಹೆಚ್ಚು ಸಂಕಷ್ಟಕ್ಕೊಳಗಾಗಿವೆ. 2020ರಲ್ಲಿ ಸರಕಾರಕ್ಕೆ ಸರಂಡರ್ ಮಾಡಿದ ಎಷ್ಟೋ ಬಸ್‌ಗಳು ಇನ್ನೂ ರಸ್ತೆಗೆ ಬಂದಿಲ್ಲ. ಕೆಎಸ್ಸಾರ್ಟಿಸಿಗೆ ಕಳೆದ ಸಾಲಿನಲ್ಲಿ 2380 ಕೋಟಿ ರೂ.ಸಹಾಯಧನ ನೀಡಿದ ಸರಕಾರ, ಇದರಿಂದ ಅದು ಕಡಿಮೆ ದರದಲ್ಲಿ ಬಸ್ ಓಡಿಸಲು ಸಹಾಯ ಮಾಡುತ್ತಿದೆ ಎಂದವರು ದೂರಿದರು.

ಸರಕಾರದಿಂದ ಖಾಸಗಿ ಬಸ್ ಮಾಲಕರು ಬೇರೆ ಯಾವುದೇ ಸಹಾಯ ಕೇಳುತ್ತಿಲ್ಲ. ಈ ಸಂಕಷ್ಟ ಕಾಲದಲ್ಲಿ ನಮಗೂ ಆರು ತಿಂಗಳ ಕಾಲ ತೆರಿಗೆಯಲ್ಲಿ ವಿನಾಯಿತಿ ನೀಡಿ ನಮಗೂ ಬದುಕಲು ಅವಕಾಶಮಾಡಿಕೊಡಿ ಎಂಬುದು ನಮ್ಮ ಪ್ರಧಾನ ಬೇಡಿಕೆಯಾಗಿದೆ ಎಂದ ಅವರು ಸರಕಾರದ ಇದೇ ಧೋರಣೆ ಮುಂದುವರಿದರೆ ರಾಜ್ಯದಲ್ಲಿ ಖಾಸಗಿ ಸಾರಿಗೆ ಉದ್ಯಮ ಶಾಶ್ವತವಾಗಿ ಕೊನೆಗೊಳ್ಳುವ ಸೂಚನೆ ಕಂಡುಬರುತ್ತಿದೆ ಎಂದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಸಾರಿಗೆ ಕಾಯ್ದೆಯನ್ನು ರಾಜ್ಯದಲ್ಲೂ ಜಾರಿಗೊಳಿಸುವಂತೆ ಒಕ್ಕೂಟದ ಪರವಾಗಿ ಮನವಿ ಮಾಡಿದ ಅವರು, ಇದರಿಂದ ಈಗ ಕೆಎಸ್ಸಾರ್ಟಿಸಿ ಬಸ್‌ಗಳು ಓಡುವ ಮಾರ್ಗಗಳಲ್ಲೂ ಖಾಸಗಿ ಬಸ್ ಓಡಲು ಅವಕಾಶವಾಗಲಿದೆ. ಇದರೊಂದಿಗೆ ರಾಜ್ಯಾದ್ಯಂತ ಫ್ಲೆಕ್ಸಿ ಫೇರ್‌ನ್ನು ಜಾರಿಗೆ ತನ್ನಿ ಎಂದವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News