ಕೃಷ್ಣಾಪುರ ಮಠ ಪರ್ಯಾಯದ ಕಟ್ಟಿಗೆ ಮುಹೂರ್ತ ಸಂಪನ್ನ

Update: 2021-07-11 14:16 GMT

 ಉಡುಪಿ : 2022ರ ಜನವರಿ 18ರಂದು ಉಡುಪಿ ಶ್ರೀಕೃಷ್ಣನ ಪೂಜಾಕೈಂಕರ್ಯಕ್ಕಾಗಿ ಸರ್ವಜ್ಞ ಪೀಠವೇರುವ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರ ಪರ್ಯಾಯದ ಪೂರ್ವಭಾವಿ ಸಿದ್ಧತೆಗಳಲ್ಲಿ 3ನೇಯದಾದ ಕಟ್ಟಿಗೆ ಮುಹೂರ್ತ ರವಿವಾರ ಬೆಳಗ್ಗೆ 8:45ಕ್ಕೆ ಕೃಷ್ಣ ಮಠದಲ್ಲಿ ನೆರವೇರಿತು.

ಮಠದ ಪಟ್ಟದ ದೇವರಾದ ಕಾಳೀಯಮರ್ದನ ಕೃಷ್ಣ ಹಾಗೂ ನರಸಿಂಹ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ನವಗ್ರಹ ಪೂಜೆ ಸಲ್ಲಿಸಿದ ಬಳಿಕ ಕಟ್ಟಿಗೆಯನ್ನು ತಲೆಹೊರೆಯಲ್ಲಿ ಹೊತ್ತುಕೊಂಡು ರಥಬೀದಿಯಲ್ಲಿರುವ ಚಂದ್ರೇವೌಳೀಶ್ವರ, ಅನಂತೇಶ್ವರ, ಶ್ರೀಕೃಷ್ಣ, ಮುಖ್ಯ ಪ್ರಾಣರ ದರ್ಶನ ಪಡೆದು ನಂತರ ಮಧ್ವ ಸರೋವರದ ಈಶಾನ್ಯ ಭಾಗದಲ್ಲಿರುವ ಕಟ್ಟೆಯ ಮೇಲೆ ಕಟ್ಟಿಗೆಗಳನ್ನಿರಿಸಿ ಪೂಜೆ ಸಲ್ಲಿಸಲಾಯಿತು.

ಕಟ್ಟಿಗೆ ರಥದ ನಿರ್ಮಾಣಕ್ಕೆ ನಾಂದಿ ಹಾಕಲಾಯಿತು. ಕೆ.ಶ್ರೀನಿವಾಸ ಉಪಾಧ್ಯಾಯ ಧಾರ್ಮಿಕ ವಿಧಿವಿಧಾನ ನೇತೃತ್ವ ವಹಿಸಿದರು.
ಪರ್ಯಾಯದ ಎರಡು ವರ್ಷಗಳ ಅವಧಿಯ ಅನ್ನದಾಸೋಹಕ್ಕೆ ಇಲ್ಲಿ ರಥದ ರೂಪದಲ್ಲಿ ಸಂಗ್ರಹಿಸಿಡಲಾಗುವ ಕಟ್ಟಿಗೆಯನ್ನು ಉಪಯೋಗಿಸಲಾ ಗುತ್ತದೆ. ಕಟ್ಟಿಗೆ ರಥ ಸಿದ್ಧಗೊಂಡ ಬಳಿಕ ಅದಕ್ಕೆ ಕಲಶವಿಡುವ ಕಾರ್ಯಕ್ರಮ ಮುಂದಿನ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ.

ಶ್ರೀಗಳ ಆಶೀರ್ವಚನ: ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ, ಕಟ್ಟಿಗೆ ಮುಹೂರ್ತ ಪರ್ಯಾಯ ಕಾಲದ ವ್ಯಾಪ್ತೋಪಾಸನೆಗೆ ಪೂರಕವಾಗಿದೆ. ಕೃಷ್ಣಮಠದಲ್ಲಿ ವಾದಿರಾಜರು ಹಾಕಿಕೊಟ್ಟ ಪೂಜಾಕ್ರಮವೇ ವಿಶಿಷ್ಟವಾಗಿದ್ದು, ದೇವರನ್ನು ಗರ್ಭಗೃಹ ಮಾತ್ರವಲ್ಲದೆ ಪ್ರತೀ ಅಧಿಷ್ಠಾನಗಳಲ್ಲೂ ಪೂಜಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಟೀಲು ದೇವಳ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ , ಕಮಲಾದೇವಿಪ್ರಸಾದ ಆಸ್ರಣ್ಣ, ಮುಲ್ಕಿಯ ಹರಿಕೃಷ್ಣ ಪುನರೂರು, ಮೂಡುಬಿದಿರೆ ಉದ್ಯಮಿ ಕೆ. ಶ್ರೀಪತಿ ಭಟ್, ದ.ಕ. ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೆ.ಭುವನಾಭಿರಾಮ ಉಡುಪ, ಭಾಸ್ಕರ ರಾವ್ ಕಿದಿಯೂರು, ಶಿರೂರು ಮಠದ ದಿವಾನ ಉದಯಕುಮಾರ ಸರಳ ತ್ತಾಯ, ಕೃಷ್ಣ ಆಚಾರ್ಯ, ಹರಿದಾಸ ಉಪಾಧ್ಯಾಯ ಮುಂತಾದವರು ಉಪಸ್ಥಿತರಿದ್ದರು. ವಿದ್ವಾಂಸ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News