ಮಂಗಳೂರು: ಪೆಟ್ರೋಲಿಯಂ ಉತ್ಪನ್ನ ದರ ಏರಿಕೆ ವಿರೋಧಿಸಿ ಸೈಕಲ್ ಜಾಥಾ

Update: 2021-07-11 17:47 GMT

ಮಂಗಳೂರು, ಜು.11: ಕೇಂದ್ರ ಹಾಗೂ ರಾಜ್ಯ ಸರಕಾರದ ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತು ಬೆಲೆ ಏರಿಕೆ ನೀತಿ ವಿರೋಧಿಸಿ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಗಂಜಿಮಠ ಜಂಕ್ಷನ್‌ನಿಂದ ಗುರುಪುರ ಕೈಕಂಬ ಜಂಕ್ಷನ್‌ವರೆಗೆ ರವಿವಾರ ಸೈಕಲ್ ಜಾಥಾ ನಡೆಯಿತು.

ಪ್ರತಿಭಟನಾ ಜಾಥಾ ಉದ್ಘಾಟಿಸಿದ ಮಾತನಾಡಿದ ಮಾಜಿ ಶಾಸಕ ಮೊಯ್ದೀನ್ ಬಾವಾ, ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದ ಮೇರೆಗೆ ಜು.7ರಿಂದ 17ರವರೆಗೆ ತೈಲ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ಪಕ್ಷವು ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂಧನ ಬೆಲೆ, ಅಗತ್ಯ ವಸ್ತುಗಳ ಬೆಲೆ ಸಾಮಾನ್ಯ ಜನತೆಗೆ ಮಗ್ಗಲು ಮುಳ್ಳಾಗಿದೆ. ಮೋದಿಗಿಂತ ಬ್ರಿಟಿಷರ ಸರಕಾರ ಒಳ್ಳೆದಿತ್ತು ಎಂದು ಜನಸಾಮಾನ್ಯರು ಹೇಳಿ ಕೊಳ್ಳುವಂತಾಗಿದೆ. ಬೆಲೆ ಇಳಿಯದ ಹೊರತು ನಮ್ಮ ಹೋರಾಟ ನಿಲ್ಲದು ಎಂದರು.

ಸೈಕಲ್ ಜಾಥಾ ಆಯೋಜಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ಬಡವರ ವಿರುದ್ಧ ಅಧಿಕಾರ ಚಲಾಯಿಸುತ್ತಿದೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಲಂಗು ಲಗಾಮಿಲ್ಲದೆ ಏರುತ್ತಿದೆ ಎಂದರು. ಕಾಂಗ್ರೆಸ್ ಮುಖಂಡ ಗಣೇಶ್ ಪೂಜಾರಿ ಮಾತನಾಡಿದರು.

ಜಾಥಾದಲ್ಲಿ ಜಿಪಂ ಮಾಜಿ ಸದಸ್ಯ ಯು.ಪಿ. ಇಬ್ರಾಹಿಂ, ತಾಪಂ ಮಾಜಿ ಸದಸ್ಯ ಸುನಿಲ್ ಜಿ., ಗುರುಪುರ ಗ್ರಾಪಂ ಸದಸ್ಯರಾದ ದಾವೂದ್ ಮತ್ತು ಎ.ಕೆ. ಅಶ್ರಫ್, ಪಕ್ಷ ಮುಖಂಡರಾದ ಹರೀಶ್ ಭಂಡಾರಿ, ವಿನಯ ಕುಮಾರ್ ಶೆಟ್ಟಿ, ಬಾಷಾ ಮಾಸ್ಟರ್, ಬಾಷಾ ಬಂಗ್ಲೆಗುಡ್ಡೆ, ಫೆರ್ನಾಂಡಿಸ್, ಟಿ.ಎಂ. ಇರ್ಫಾನ್, ಎ.ಕೆ. ಮುಹಮ್ಮದ್ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News