ಹಳೆಯಂಗಡಿ: ಮಠದಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು

Update: 2021-07-13 06:34 GMT

ಮುಲ್ಕಿ, ಜು.13: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠದಲ್ಲಿ ಸೋಮವಾರ ರಾತ್ರಿ ಲಕ್ಷಾಂತರ ಮೌಲ್ಯದ ಸೊತ್ತು ಕಳ್ಳತನವಾಗಿದ್ದು, ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ರಾತ್ರಿ ವಿಶ್ವಕರ್ಮ ಸಮುದಾಯದ ಹಳೆಯಂಗಡಿ ವಿನಾಯಕ ಮಠಕ್ಕೆ ನುಗ್ಗಿದ ಕಳ್ಳರು ಗರ್ಭಗುಡಿಯ ಬೀಗ ಮುರಿದು ದೇವಿಯ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಕವಚ, ಮೂಗುತಿ ಸೇರಿದಂತೆ ಚಿನ್ನ-ಬೆಳ್ಳಿಯ ಆಭರಣಗಳನ್ನು ಕಳವುಗೈದಿದ್ದಾರೆ. ಅದಲ್ಲದೆ ಗರ್ಭಗುಡಿಯ ಹೊರ ಬದಿಯಲ್ಲಿರುವ ಗಣಪತಿಯ ಗುಡಿಯ ಎರಡು ಬೀಗ ಒಡೆದು ಗಣಪತಿ ದೇವರ ಕವಚ, ಮತ್ತು ಪ್ರಭಾವಳಿ, ಚಿನ್ನದ ತಿಲಕ, ಕಾಣಿಕೆ ಡಬ್ಬಿ, ಶ್ರೀದೇವಿಯ ಗರ್ಭಗುಡಿ ಹೊರ ಬದಿಯ ಕಾಣಿಕೆ ಡಬ್ಬಿ ಬೀಗ ಒಡೆದು ಕಳ್ಳತನ ಮಾಡಿದ್ದರೆನ್ನಲಾಗಿದೆ.

ಸುಮಾರು ಏಳೂವರೆ ಕೆ.ಜಿ.ಯಷ್ಟು ಬೆಳ್ಳಿ ಹಾಗೂ 9 ಗ್ರಾಂನಷ್ಟು ಚಿನ್ನದ ಸೊತ್ತು ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಸೇರಿದಂತೆ ಸುಮಾರು 6 ಲಕ್ಷ ರೂ. ವರೆಗಿನ ಸೊತ್ತು ಕಳವಾಗಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಇಂದು ಮುಂಜಾನೆ ಅರ್ಚಕರು ಪೂಜೆಗೆಂದು ದೇವಳದ ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ. ಕಳ್ಳರು ಮಠದ ಹೊರ ಬದಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಮೇಲಿನಿಂದ ಮಠದ ಒಳಗಡೆ ಬಂದಿರಬಹುದು ಎಂದು  ಶಂಕಿಸಲಾಗಿದೆ. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್, ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್  ಕುಸುಮಾಧರ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News