ಪುತ್ತೂರು: ಗದ್ದೆ ಬೇಸಾಯಕ್ಕೆ ಚಾಲನೆ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್

Update: 2021-07-13 13:47 GMT

ಪುತ್ತೂರು: ಹಿಂದೆಲ್ಲಾ ಭತ್ತದ ಬೇಸಾಯ ಜನರ ಸಂಸ್ಕೃತಿಯ ಭಾಗವಾಗಿತ್ತು. ಬಳಿಕ ಕರಾವಳಿ ಭಾಗದ ಜನರು ವಾಣಿಜ್ಯ ಬೆಳೆಯಾದ ಅಡಿಕೆ ಇನ್ನಿತರ ಬೆಳೆಗಳತ್ತ ಚಿಂತನೆ ಹರಿಸಿದ ಕಾರಣದಿಂದಾಗಿ ಇಲ್ಲಿನ ಗದ್ದೆ ಬೇಸಾಯಗಳು ಕಡಿಮೆಯಾಯಿತು. ಹಿಂದೆಲ್ಲಾ ಸಾಕಷ್ಟು ಅಕ್ಕಿ ಬೆಳೆಯುತ್ತಿದ್ದ ನಾವು ಇದೀಗ ನಮ್ಮ ಕುಚ್ಚಲಕ್ಕಿಯನ್ನು ಬೇರೆ ಕಡೆಯಿಂದ ತರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. 

ಅವರು ಮಂಗಳವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ರೂಪಿಸಲಾದ ಯೋಜನೆಯಂತೆ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ನೈತಾಡಿ ಬಾಳೆಗದ್ದೆ ನಿವಾಸಿ ಗೋಪಾಲಕೃಷ್ಣ ಭಟ್ ಎಂಬವರ ಹಡೀಲು ಗದ್ದೆಯಲ್ಲಿ ಬೇಸಾಯಕ್ಕೆ ಚಾಲನೆ ನೀಡಿ ಮಾತನಾಡಿದರು. ಗದ್ದೆಗಳಿದು ಸಾಂಪ್ರದಾಯಿಕ ನೇಗಿಲು ಹಿಡಿದು ಉಳುಮೆ ನಡೆಸಿ, ಟ್ರಾಕ್ಟರ್ ಮೂಲಕವೂ ಉಳುಮೆ ನಡೆಸಿ, ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ ಅವರು ಗದ್ದೆ ಬೇಸಾಯಕ್ಕೆ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ಕರೆಯಂತೆ ಪುತ್ತೂರು ಶ್ರೀ ಮಹಾಲಿಂಗೇಶ್ವದ ದೇವಳದ ಸಹಕಾರದಲ್ಲಿ ಹಲವು ಕಡೆಗಳಲ್ಲಿ ಹಡಿಲು ಗದ್ದೆಗಳ ಬೇಸಾಯ ಮಾಡಿ ನಮ್ಮ ಆಹಾರವನ್ನು ನಾವೇ ಉತ್ಪಾದಿಸುವ ಕೆಲಸ ನಡೆಯುತ್ತಿದೆ. ಕೃಷಿಯ ಬಗ್ಗೆ ಯುವಕರಿಗೆ ಪ್ರೇರಣೆ ನೀಡುವ ಮೂಲಕ ಕೃಷಿ ಪರಂಪರೆ ಸಂಸ್ಕøತಿ ಉಳಿಸುವ ಕಾರ್ಯವಾಗುತ್ತಿದೆ ಎಂದರು. 

ಕೃಷಿ ಆಧಾರಿತವಾಗಿರುವ ದ.ಕ ಜಿಲ್ಲೆಯಲ್ಲಿ ವ್ಯಾಪಾರಿಕರಣ ಮಧ್ಯೆ ಕೃಷಿ ಉಳಿಸುವ ಬದಲು ಅದರ ಲಾಭ ನಷ್ಟಗಳ ಚರ್ಚೆ ನಡೆಯುತ್ತಿದೆ. ಭತ್ತದ ಬೇಸಾಯ ನಷ್ಟ ಎಂಬ ಭಾವನೆಯಿಂದ ಕೃಷಿಕರು ಭತ್ತದ ಬೇಸಾಯ ಬಿಟ್ಟು ತೋಟಗಾರಿಕಾ ಬೆಳೆಗಳಿಗೆ ಆಧ್ಯತೆ ನೀಡುತ್ತಿರುವುದರಿಂದ ಗದ್ದೆಗಳು ಹಡೀಲು ಬೀಳುವಂತಾಗಿದೆ. ಹಡೀಲು ಗದ್ದೆಗಳಲ್ಲಿ ಬೇಸಾಯ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಚಾಲನೆ ನೀಡಿದ್ದು ಮಹಾಲಿಂಗೇಶ್ವರ ದೇವಸ್ಥಾನ ಅದಕ್ಕೆ ಬೆನ್ನೆಲುಬು ಆಗಿ ನಿಂತಿದೆ. ಇದಕ್ಕೆ ಶಾಸಕ ಸಂಜೀವ ಮಠಂದೂರು ಪ್ರೇರಣೆ ನೀಡುವ ಕಾರ್ಯ ಮಾಡುತ್ತಿದ್ದಾರೆ. ಈ ಮೂಲಕ ಕೃಷಿ ಪರಂಪರೆ ಸಂಸ್ಕೃತಿ ಉಳಿಸುವ ಕಾರ್ಯವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಕೃಷಿಕ ಪರಮೇಶ್ವರ ನಾಯ್ಕ್ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸನ್ಮಾನಿಸಿ ಗೌರವಿಸಿದರು. 

ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಜಗದೀಶ್ ಅಧಿಕಾರಿ, ಬೂಡಿಯಾರ್ ರಾಧಾಕೃಷ್ಣ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಐತ್ತಪ್ಪ ನಾಯ್ಕ, ರಾಮದಾಸ್ ಗೌಡ, ಶೇಖರ್ ನಾರಾವಿ, ವೀಣಾ ಬಿ.ಕೆ, ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು,  ದೇವಸ್ಥಾನದ ಅರ್ಚಕರಾದ ವಸಂತ ಕೆದಿಲಾಯ, ವೆಂಕಟೇಶ್ ಸುಬ್ರಹ್ಮಣ್ಯ ಭಟ್ ಮತ್ತಿತರರು ಉಪಸ್ಥಿತರಿದ್ದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು ಸ್ವಾಗತಿಸಿದರು. ರಾಮಚಂದ್ರ ಕಾಮತ್ ವಂದಿಸಿದರು. ಡಾ. ಸುಧಾ ಎಸ್.ರಾವ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News