ಉಡುಪಿ ತಾಯಿ-ಮಕ್ಕಳ ಆಸ್ಪತ್ರೆ ನಿರ್ವಹಣೆ ಬಗ್ಗೆ ವಾರದೊಳಗೆ ತೀರ್ಮಾನ: ಸಚಿವ ಡಾ. ಕೆ.ಸುಧಾಕರ್

Update: 2021-07-14 13:54 GMT

ಉಡುಪಿ, ಜು.14: ಉದ್ಯಮಿ ಬಿ.ಆರ್.ಶೆಟ್ಟಿ ಕಂಪೆನಿ ಮುನ್ನಡೆಸುತ್ತಿರುವ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರ ನಿರ್ವಹಿಸುವ ಬಗ್ಗೆ ವಾರದೊಳಗೆ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಉಡುಪಿ ನಗರದಲ್ಲಿರುವ ಆರೋಗ್ಯ ಇಲಾಖೆಯ ಜಾಗದಲ್ಲಿ ಬಿ.ಆರ್.ಶೆಟ್ಟಿ ಕಂಪೆನಿ ನಿರ್ಮಿಸಲು ಉದ್ದೇಶಿಸಿದ್ದ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡದ ಕಾಮಗಾರಿ ಯನ್ನು ಬುಧವಾರ ವೀಕ್ಷಿಸಿದ ಬಳಿಕ ಅವರು ಮಾಧ್ಯಮದರೊಂದಿಗೆ ಮಾತನಾಡುತಿದ್ದರು.

ಬಿ.ಆರ್.ಶೆಟ್ಟಿ ತನ್ನ ತಾಯಿತಂದೆ ಹೆಸರಿನಲ್ಲಿ ಉಚಿತವಾಗಿ ಆಸ್ಪತ್ರೆ ನಿರ್ಮಿಸುವುದಾಗಿ ಕೇಳಿಕೊಂಡಿದಕ್ಕೆ ಈ ಹಿಂದಿನ ಸರಕಾರ ಅವರಿಗೆ ಅವಕಾಶ ಮಾಡಿ ಕೊಟ್ಟಿತ್ತು. ಅದರಂತೆ ಅವರು 200 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯನ್ನು ಸುಸಜ್ಜಿತವಾಗಿ ನಿರ್ಮಿಸಿದ್ದಾರೆ. ಈವರೆಗೆ ಅದನ್ನು ಅವರು ನಿರ್ವಹಣೆ ಮಾಡಿದ್ದಾರೆ. ಇದೀಗ ಕಾರಣಾಂತರದಿಂದ ಆರ್ಥಿಕ ನಷ್ಟಕ್ಕೆ ಒಳಗಾಗಿ ಈ ಆಸ್ಪತ್ರೆ ಯನ್ನು ಮುನ್ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಸರಕಾರಕ್ಕೆ ಬರೆದು ಕೊಟ್ಟಿದ್ದಾರೆ ಎಂದರು.

ಇದನ್ನೆಲ್ಲ ಸರಕಾರ ಗಮನಿಸುತ್ತಿದೆ. ಹಾಗಾಗಿ ಸರಕಾರ ಈ ಆಸ್ಪತ್ರೆಯನ್ನು ಹಾಗೆ ಬಿಡಲು ಆಗುವುದಿಲ್ಲ. ಈ ಆಸ್ಪತ್ರೆಯಲ್ಲಿ ಜನರಿಗೆ ಸೇವೆಯನ್ನು ಮುಂದು ವರೆಸಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಮುಂದಿನ ವಾರ ಅವರ ಜೊತೆ ಸಭೆ ಕರೆಯಲಾಗಿದೆ. ಇದನ್ನು ಯಾವ ರೀತಿ ನಿರ್ವಹಣೆ ಮಾಡುವುದು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಸರಕಾರದಿಂದ ಈ ಆಸ್ಪತ್ರೆಯ ನಿರ್ವಹಣೆ ಸಾಧ್ಯವೇ ಎಂಬ ಪ್ರಶ್ನೆಗೆ ಪ್ರತ್ರಿ ಯಿಸಿದ ಸಚಿವರು, ಸರಕಾರದಿಂದ ಆಗದಿದ್ದರೆ ಇನ್ನು ಯಾರ ಕೈಯಲ್ಲಿ ಆಗುತ್ತದೆ. ಸರಕಾರ ಇಡೀ ರಾಜ್ಯದಲ್ಲಿ ಹಲವು ಆಸ್ಪತ್ರೆಗಳು, 18 ವೈದ್ಯಕೀಯ ಕಾಲೇಜುಗಳು ಹಾಗೂ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಗಳನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಈ ಆಸ್ಪತ್ರೆಯ ಮುಂಭಾಗದಲ್ಲಿ ಆರೋಗ್ಯ ಇಲಾಖೆಯ ಎರಡು ಎಕರೆ ಜಾಗ ಇದ್ದು, ಇಲ್ಲಿ ಬಿ.ಆರ್.ಶೆಟ್ಟಿ ಕಂಪೆನಿ ಪಿಪಿಪಿ ಮಾದರಿಯಲ್ಲಿ ಆಸ್ಪತ್ರೆ ನಿರ್ಮಿಸುವ ಬಗ್ಗೆ ಸರಕಾರದೊಂದಿಗೆ ಈ ಹಿಂದೆ ಒಡಂಬಡಿಕೆ ಮಾಡಲಾಗಿತ್ತು. ಇದೀಗ ಅದನ್ನು ಪುನರ್ ಪರಿಶೀಲನೆ ಮಾಡಬೇಕಾಗಿದೆ. ಅವರಿಗೆ ಈ ಆಸ್ಪತ್ರೆ ನಿರ್ಮಿಸಲು ಆಗುತ್ತದೆಯೇ? ಆ ಶಕ್ತಿ ಅವರಿಗೆ ಇದೆಯೇ? ಅಥವಾ ಬೇರೆ ಯವರಿಗೆ ಅದನ್ನು ಕೊಡಬೇಕೇ? ಇದರಲ್ಲಿ ಸರಕಾರದ ಪಾತ್ರ ಏನು ಎಂಬುದರ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಡಿಎಚ್‌ಓ ಡಾ.ನಾಗಭೂಷಣ ಉಡುಪ, ಸರ್ಜನ್ ಡಾ.ಮಧುಸೂದನ್ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News