ಸದ್ದಿಲ್ಲದೆ ಶಾಲೆ ಮುಚ್ಚಲು ಯತ್ನ ಆರೋಪ: ಬೋಳಾರಿನ ಇನ್ಫೆಂಟ್ ಶಾಲಾ ಮುಂಭಾಗ ಧರಣಿ

Update: 2021-07-14 17:10 GMT

ಮಂಗಳೂರು, ಜು.14: ನಗರದ ಬೋಳಾರಿನಲ್ಲಿ ಕಾರ್ಯಾಚರಿಸುತ್ತಿರುವ ಇನ್ಫೆಂಟ್ ಜೀಸಸ್ ಜೋಯ್ ಲ್ಯಾಂಡ್ ಶಿಕ್ಷಣ ಸಂಸ್ಥೆಯು ಪೋಷಕರು, ವಿದ್ಯಾರ್ಥಿಗಳಿಗೆ ಯಾವುದೇ ಮುನ್ಸೂಚನೆ ನೀಡದೇ ಹಠಾತ್ ಶಾಲೆ ಮುಚ್ಚಿದ ಕ್ರಮವನ್ನು ಖಂಡಿಸಿ ಹಾಗೂ ಕ್ಯಾಂಪಸ್ ಫ್ರಂಟ್ ಹಾಗೂ ಇತರ ವಿದ್ಯಾರ್ಥಿ ಸಂಘಟನೆಗಳಿಂದ ಪೋಷಕರೊಂದಿಗೆ ಶಾಲಾ ಮುಂಭಾಗ ಬುಧವಾರ ಧರಣಿ ನಡೆಸಲಾಯಿತು.

ಶಾಲಾ ಆಡಳಿತ ಮಂಡಳಿಯು ತನ್ನ ಶಾಲಾ ಶುಲ್ಕದ ಮೊತ್ತ ಪಾವತಿಸಿದರೆ ಟಿಸಿ ನೀಡುತ್ತೇವೆಂದು ಹಠಮಾರಿ ಧೋರಣೆ ವ್ಯಕ್ತಪಡಿಸಿದೆ. ಸುಮಾರು 400ರಷ್ಟು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದ್ದ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ಬಗ್ಗೆ ಪೋಷಕರೊಂದಿಗೆ ಕ್ಯಾಂಪಸ್ ಫ್ರಂಟ್ ಮಾತುಕತೆ ನಡೆಸಿತು. ಜೊತೆಗೆ ಮಾತುಕತೆಗೆ ಒಪ್ಪದ ಆಡಳಿತ ಮಂಡಳಿಯ ವಿರುದ್ಧ ಈ ಸಂದರ್ಭ ಧರಣಿ ಕೂತ ಧರಣಿನಿರತರು, ನ್ಯಾಯಕ್ಕಾಗಿ ಪಟ್ಟು ಹಿಡಿದರು. ಈ ಸಂದರ್ಭ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ, ಮೇಯರ್ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಭರವಸೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ, ಮೇಯರ್ ಅವರ ಭರವಸೆಯ ಮೇರೆಗೆ ಧರಣಿ ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಜಿಲ್ಲಾಧ್ಯಕ್ಷ ಇನಾಯತ್ ಮಂಗಳೂರು, ಹಫೀಝ್, ಅರ್ಫೀದ್ ಪುತ್ತೂರು, ಯಾಸೀನ್ ಬೆಳ್ತಂಗಡಿ, ಹಮೀದ್ ಫರಂಗಿಪೇಟೆ ಮತ್ತಿತರ ವಿದ್ಯಾರ್ಥಿ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News