ಕೇರಳದಲ್ಲಿ ಝಿಕಾ ವೈರಸ್ ಉಲ್ಬಣ, ಗಡಿಭಾಗದಲ್ಲಿ ಕಟ್ಟೆಚ್ಚರ: ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ

Update: 2021-07-14 17:17 GMT

ಮಂಗಳೂರು, ಜು.14: ನೆರೆಯ ರಾಜ್ಯ ಕೇರಳದ ತಿರುವನಂತಪುರದಲ್ಲಿ ಝಿಕಾ ಸೋಂಕು ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾ ಗುತ್ತಿವೆ. ಕೇರಳದ ಗಡಿಭಾಗ ದ.ಕ. ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ನಿರ್ದೇಶನ ನೀದಿದ್ದಾರೆ.

ದ.ಕ. ಜಿಲ್ಲೆಯು ಕೇರಳದ ಗಡಿಭಾಗದಲ್ಲಿ ಇರುವದರಿಂದ ಹಾಗೂ ಕೇರಳದಿಂದ ಸಾಕಷ್ಟು ಜನರು ಶಿಕ್ಷಣ ಹಾಗೂ ಆರೋಗ್ಯ, ಉದ್ಯೋಗ ಸಂಬಂಧಿತ ಕಾರ್ಯಗಳಿಗೆ ಬಂದು ಹೋಗುತ್ತಿರುವುದು ಸಾಮಾನ್ಯ. ಜಿಲ್ಲೆಯಲ್ಲಿ ಈ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.

ಝೀಕಾ ಸೋಂಕು ಹೊಂದಿರುವ ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆ ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಈ ಸೊಳ್ಳೆಗಳು ತೆರೆದ ಸ್ವಚ್ಛ ನೀರಿನ ಸಂಗ್ರಹಣೆಗಳಾದ ಸಿಮೆಂಟ್ ತೊಟ್ಟಿ, ಬ್ಯಾರಲ್, ಇತರ ನೀರಿನ ಸಂಗ್ರಹಣೆಗಳು, ಹೂವಿನ ಕುಂಡಗಳು, ಮನೆಯ ಮೇಲ್ಛಾವಣಿಗಳಲ್ಲಿ ನಿಂತ ನೀರು, ಟಯರ್, ಘನತ್ಯಾಜ್ಯ ವಸ್ತುಗಳಲ್ಲಿ ಉತ್ಪತ್ತಿಯಾಗುತ್ತವೆ.

ಮುಂಜಾಗ್ರತಾ ಕ್ರಮಗಳು: ಕೇರಳದಿಂದ ಬರುವ ಎಲ್ಲ ರೋಗಿಗಳ ಬಗ್ಗೆ ನಿಗಾ ವಹಿಸುವುದು, ಯಾವುದೇ ಜ್ವರ ಇದ್ದರೂ ಸಮೀಪದ ಸರಕಾರಿ ಆಸ್ಪತ್ರೆ ಸಂಪರ್ಕಿಸುವುದು, ಎಲ್ಲ ಸ್ಕಾನಿಂಗ್ ಹಾಗೂ ಹೆರಿಗೆ ಆಸ್ಪತ್ರೆಗಳ ಮುಖ್ಯಸ್ಥರು ತಮ್ಮಲ್ಲಿ ದಾಖಲಾಗುವ ಗರ್ಭಿಣಿಯರಲ್ಲಿ ಅಂಗಾಂಗ ನ್ಯೂನತೆ ಕಾಣಿಸಿಕೊಂಡಲ್ಲಿ ರಕ್ತ ಪರೀಕ್ಷೆ ನಡೆಸಿ, ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು.

ಸಾರ್ವಜನಿಕ ಸ್ಥಳ, ದೇವಸ್ಥಾನ, ಪ್ರೇಕ್ಷಣಾ ಸ್ಥಳಗಳಲ್ಲಿ ಸ್ವಚ್ಛತೆ, ಸೊಳ್ಳೆ ಉತ್ಪತ್ತಿ ತಾಣಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ, ಚರಂಡಿ, ರಸ್ತೆ, ತೆರೆದ ಪ್ರದೇಶದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದು, ಘನತ್ಯಾಜ್ಯ ವಸ್ತುಗಳನ್ನು ಅಲ್ಲಲ್ಲಿ ಎಸೆಯುವುದರಿಂದ ಅವುಗಳಲ್ಲಿ ನೀರು ಶೇಖರ ಣೆಗೊಂಡು ಸೊಳ್ಳೆ ಬೆಳವಣಿಗೆಗೆ ಅವಕಾಶವಾಗುತ್ತಿದ್ದು, ಇದರ ನಿವಾರಣಾ ಕ್ರಮದ ಅಂಗವಾಗಿ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News