ಮಂಗಳೂರಲ್ಲಿ ಮತ್ತೆ ರ್‍ಯಾಗಿಂಗ್‌ ಪ್ರಕರಣ : ಆರು ವಿದ್ಯಾರ್ಥಿಗಳ ಬಂಧನ

Update: 2021-07-16 12:21 GMT

ಮಂಗಳೂರು, ಜು.16: ಕಳೆದ ಐದಾರು ತಿಂಗಳ ಹಿಂದೆಯಷ್ಟೇ ನಗರದ ಮೂರು ಕಾಲೇಜುಗಳಲ್ಲಿ ರ್‍ಯಾಗಿಂಗ್‌ ಆರೋಪ ಕೇಳಿಬಂದಿತ್ತು. ಈ ಪ್ರಕರಣಗಳು ಮಾಸುವ ಮೊದಲೇ ನಗರದ ಫಳ್ನೀರ್‌ನ ಇಂದಿರಾ ಕಾಲೇಜಿನಲ್ಲಿ ಮತ್ತೊಂದು ರ್‍ಯಾಗಿಂಗ್‌ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರು ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಫಳ್ನೀರ್‌ನ ಇಂದಿರಾ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಲಾಲ್ (20), ಶಾಹಿದ್ (20), ಅಮ್ಜದ್ (20), ಜುರೈಜ್ (20), ಹುಸೈನ್ (20), ಲಿಮ್ಸ್ (20) ಬಂಧಿತರು.

ಪ್ರಕರಣದ ವಿವರ: ಜು.14ರಂದು ರಾತ್ರಿ 8 ಗಂಟೆಗೆ ನಗರದ ಫಳ್ನೀರ್ ರಸ್ತೆಯ ಹೊಟೇಲ್‌ವೊಂದಕ್ಕೆ ರ್‍ಯಾಗಿಂಗ್‌‌ಗೆ ಒಳಗಾದ ಸಂತ್ರಸ್ತ ಮ್ಯಾನುಯಲ್ ಬಾಬು (21) ಎಂಬವರು ತನ್ನ ಸ್ನೇಹಿತರಾದ ಜೋಬಿನ್ ಹಾಗೂ ಶಾಕೀರ್ ಅವರ ಜೊತೆಗೆ ಊಟಕ್ಕಾಗಿ ತೆರಳಿದ್ದಾರೆ. ಈ ಸಮಯ ಪರಿಚಯಸ್ಥರಾದ ಇಂದಿರಾ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಲಾಲ್, ಜುರೈಜ್, ರಸೆಲ್ ಅವರ ಪೈಕಿ ಶ್ರೀಲಾಲ್ ಸಂತ್ರಸ್ತ ಮ್ಯಾನುಯಲ್‌ನ್ನು ಉದ್ದೇಶಿಸಿ, ‘ಏನು ಮುಖ ನೋಡುತ್ತಿಯಾ, ನೀವು ಜೂನಿಯರ್‌ಗಳು, ನಾವು ಬರುವಾಗ ಎದ್ದು ನಿಂತು ಗೌರವ ಕೊಡಬೇಕು’ ಎಂದು ರ್‍ಯಾಗಿಂಗ್‌ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಂತರ ರಾತ್ರಿ 10:30ರ ಸುಮಾರಿಗೆ ಅತ್ತಾವರದ ಅಪಾರ್ಟ್‌ಮೆಂಟ್‌ನ ರೂಮಿನಲ್ಲಿ ಮ್ಯಾನುಯಲ್ ಇದ್ದ ಸಂದರ್ಭ ಆರು ಆರೋಪಿಗಳು ಮಾರಕಾಯುಧ ಸಹಿತ ಆಗಮಿಸಿದ್ದಾರೆ. ಏಕಾಏಕಿ ರೂಮನ್ನು ಪ್ರವೇಶಿಸಿದ ಆರೋಪಿಗಳು ಈತನಿಗೆ ಪುನಃ ನಿಂದಿಸಿದ್ದಾರೆ. ಬಳಿಕ ಬಟ್ಟೆಗಳನ್ನು ತೆಗೆದು ಒಳವಸ್ತ್ರದಲ್ಲಿ ನಿಲ್ಲಲು, ಪದೇಪದೇ ಕುಳಿತುಕೊಳ್ಳಲು, ಎದ್ದುನಿಲ್ಲಲು ಹೇಳಿದ್ದಾರೆ. ಇದಕ್ಕೆ ಒಪ್ಪದೇ ಇದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದಿದ್ದಾರೆ. ಅಲ್ಲದೆ, ಆರೋಪಿಗಳು ಜೀವ ಬೆದರಿಕೆಯನ್ನೂ ಒಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ತನಿಖಾಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News