ಬಕ್ರಿದ್; ಪ್ರತಿ ತಾಲೂಕಿನಲ್ಲಿ ಕಡ್ಡಾಯ ಶಾಂತಿ ಸಭೆ: ಉಡುಪಿ ಅಪರ ಡಿಸಿ

Update: 2021-07-17 15:31 GMT

ಉಡುಪಿ, ಜು.17: ಜಿಲ್ಲೆಯಲ್ಲಿ ಬಕ್ರಿದ್ ಹಬ್ಬವನ್ನು ಶಾಂತಿಯುತ ಮತ್ತು ಸೌಹಾರ್ದಯುತವಾಗಿ ಆಚರಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿನ ತಹಶೀಲ್ದಾರರು ಕಡ್ಡಾಯವಾಗಿ ಶಾಂತಿ ಸಭೆಗಳನ್ನು ನಡೆಸಬೇಕು. ಈ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಮೇಲುಸ್ತುವಾರಿ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

ಸರಕಾರ ಆದೇಶದಂತೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಪ್ರಾಣಿಗಳ ಅನಧಿಕೃತ ಸಾಗಾಣಿಕೆ ಹಾಗೂ ವಧೆ ತಡೆಗಟ್ಟುವ ಕುರಿತು ಜು.14 ರಂದು ಜಿಲ್ಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಾಣಿಗಳ ಅನಧಿಕೃತ ಸಾಗಾಣಿಕೆ ಮತ್ತು ವಧೆ ತಡೆಗಟ್ಟುವ ಸಂಬಂಧ ರಚಿಸಿರುವ ಜಿಲ್ಲಾ ಮಟ್ಟದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಬಕ್ರೀದ್ ಆಚರಣೆ ಸಂದರ್ಭದಲ್ಲಿ ಅಕ್ರಮವಾಗಿ ಒಂಟೆ/ಗೋವುಗಳ ಹತ್ಯೆ ಹಾಗೂ ಅನಧಿಕೃತ ಸಾಗಾಣಿಕೆಯನ್ನು ತಡೆಗಟ್ಟುವ ಸಂಬಂಧ ನಿರ್ದೇಶನ ಗಳನ್ನು ಪಾಲಿಸುವಂತೆ ಪೋಲೀಸ್ ಇಲಾಖೆ, ನಗರ ಸಭೆ, ಪುರಸಭೆ, ಸಾರಿಗೆ ಅಧಿಕಾರಿ ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆು ಅಧಿಕಾರಿಗಳಿಗೆ ಅವರು ಸೂಚಿಸಿದರು.

ಸಾರಿಗೆ ಇಲಾಖೆಯಿಂದ ಅನಧಿಕೃತವಾಗಿ ಪ್ರಾಣಿಗಳ ಸಾಗಾಟದ ವಾಹನ ಗಳನ್ನು ಪತ್ತೆ ಹಚ್ಚಿ ಗೋ ಶಾಲೆಗಳಿಗೆ ಹಸ್ತಾಂತರಿಸಬೇಕು. ಅನಧಿಕೃತ ವಧಾಗಾರ ಗಳನ್ನು ಪತ್ತೆ ಹಚ್ಚಿ, ಮಾಹಿತಿ ದೊರಕಿದ ತಕ್ಷಣ ಕಾನೂನು ಕ್ರಮವಹಿಸಬೇಕು. ಅನಧಿಕೃತ ಗೋ ವಧೆ ಮಾಡುವವರನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಗೆ ಕರೆಸಿ ತಿಳುವಳಿಕೆ ನೀಡಿ ಮುಚ್ಚಳಿಕೆ ಪಡೆಯಬೇಕು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು ಎಂದು ಅವರು ಸಭೆಯಲ್ಲಿ ತಿಳಿಸಿದರು.

ಮಸೀದಿಗಳಿಗೆ ಬಿಗಿ ಭದ್ರತೆ

ಪ್ರಮುಖ ಪ್ರಾರ್ಥನಾ ಸ್ಥಳಗಳಲ್ಲಿ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆಗಳನ್ನು ಮಾಡ ಬೇಕು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್, ವಾಹನಗಳ ಸುಗಮ ಸಂಚಾರ ಮತ್ತು ವಾಹನಗಳ ನಿಲುಗಡೆ ಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅವರು ಪೋಲೀಸ್ ಇಲಾಖೆಗೆ ನಿರ್ದೇಶನ ನೀಡಿದರು.

ಪಾರ್ಥನಾ ಸ್ಥಳಗಳಲ್ಲಿ ಕೋವಿಡ್ -19 ಸಾಂಕ್ರಮಿಕ ರೋಗವು ಹರಡು ವುದನ್ನು ತಡೆಗಟ್ಟಲು ಸರಕಾರದ ಆದೇಶವನ್ನು ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳುವಂತೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಂಡಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕೆಂದು ಅವರು ಸೂಚಿಸಿದರು.

ವಿಶೇಷ ತಪಾಸಣಾ ತಂಡ

ಜಿಲ್ಲಾದ್ಯಂತ ಇರುವ ರಾತ್ರಿ ಹಾಗೂ ಹಗಲು ತಪಾಸಣಾ ಕೇಂದ್ರಗಳಲ್ಲಿ ಹೆಚ್ಚಿನ ಜಾಗರೂಕತೆ ಇರುವಂತೆ ಸೂಚನೆ ನೀಡಲು, ಸಬ್ ಡಿವಿಜನ್ ಮಟ್ಟದಲ್ಲಿ ಪಿಎಸ್ಸೈಯನ್ನೊಳಗೊಂಡ ವಿಶೇಷ ತಪಾಸಣಾ ತಂಡ ರಚಿಸಬೇಕು ಎಂದು ಅವರು ತಿಳಿಸಿದರು.

ಈ ಬಗ್ಗೆ ನಿಗಾವಹಿಸಲು ಹಾಗೂ ಸಿ.ಆರ್.ಪಿ.ಸಿ ಸೆಕ್ಷನ್ 107 ರೀತ್ಯಾ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಬಂಧಕ ಕೇಸ್‌ಗಳನ್ನು ದಾಖಲಿಸುವ ಬಗ್ಗೆ ಹಳೆಯ ಅರೋಪಿಗಳನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಬೇಕು. ಅಲ್ಲದೆ ಅಂತವರ ಮೇಲೆ ನಿಗಾವಹಿಸಬೇಕು. ಠಾಣಾ ವ್ಯಾಪ್ತಿಯಲ್ಲಿ ಧಾರ್ಮಿಕ ಮುಖಂಡರೊಡನೆ ಸ್ನೇಹ ಸೌಹಾರ್ದ ಸಭೆಗಳನ್ನು ನಡೆಸಬೇಕು ಎಂದು ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಶಾಂತಿ ಯುತವಾಗಿ ಬಕ್ರೀದ್ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿಯೂ ಅಗತ್ಯ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿ ಗೆ ನಿರ್ದೇಶನ ಗಳನ್ನು ನೀಡಿದರು.

ಕಾನೂನು ಕೈಗೆತ್ತಿಕೊಂಡರೆ ಕ್ರಮ

ಕಾನೂನನ್ನು ಉಲ್ಲಂಘಿಸಿ ಅಕ್ರಮವಾಗಿ ಅಥವಾ ಅನಧಿಕೃತವಾಗಿ ಪ್ರಾಣಿ ಗಳನ್ನು ಸಾಗಾಣಿಕೆ ಮಾಡುತ್ತಿದ್ದಲ್ಲಿ ಸಾರ್ವಜನಿಕರು ತಾವೇ ಕಾನೂ ನನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸಭೆಯಲ್ಲಿ ತಿಳಿಸಿದರು.

ಈ ಬಗ್ಗೆ ಸಂಬಂಧಿಸಿದ ಹತ್ತಿರದ ಪೋಲೀಸ್ ಠಾಣೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಅಥವಾ ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ತಿಳಿಸಬೇಕು. ಒಂದು ವೇಳೆ ಸಾರ್ವಜನಿಕರು ತಾವೇ ಕಾನೂನನ್ನು ಕೈಗೆತ್ತಿಕೊಂಡಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಪೊೀಲೀಸ್ ಇಲಾಖೆಗೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News