ಠೇವಣಿದಾರರಿಗೆ ಹಣ ಹಿಂದಿರುಗಿಸದೆ ವಂಚನೆ ಆರೋಪ : ಆಸ್ತಿ ಜಪ್ತಿಗೆ ಸರ್ಕಾರದ ಆದೇಶ

Update: 2021-07-17 16:58 GMT

ಪುತ್ತೂರು : ಈ ಹಿಂದೆ ಪುತ್ತೂರಿನಲ್ಲಿ ಎಪಿಎಂಸಿ ರಸ್ತೆಯಲ್ಲಿನ ಖಾಸಗಿ ಕಟ್ಟಡವೊಂದರಲ್ಲಿ ಮುಖ್ಯ ಕಚೇರಿಯನ್ನು ಹೊಂದಿ ವ್ಯವಹರಿಸುತ್ತಿದ್ದ ಶರ್ಮಹಾನ್ ವಿವಿಧೋದ್ದೇಶ ಸೌಹಾರ್ದ ಕೋ ಅಪರೇಟಿವ್ ಲಿಮಿಟೆಡ್ ಸಂಸ್ಥೆಯು ಠೇವಣಿದಾರರಿಗೆ ಹಣ ಹಿಂತಿರುಗಿಸದೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಠೇವಣಿದಾರರ ಹಿತಾಸಕ್ತಿಯನ್ನು ಸಂರಕ್ಷಿಸುವ ಸಲುವಾಗಿ ಸಂಸ್ಥೆಯ ಅಧ್ಯಕ್ಷ, ವ್ಯವಸ್ಥಾಪಕ ಮತ್ತು ಕೆಲ ನಿರ್ದೇ ಶಕರಿಗೆ ಸೇರಿದ ಸ್ಥಿರ ಸೊತ್ತುಗಳ ಜಪ್ತಿಗೆ ಸರ್ಕಾರ ಆದೇಶ ನೀಡಿದೆ.

ಸಂಸ್ಥೆಗೆ ಸೇರಿದ ಸೊತ್ತು ಮತ್ತು ಸಂಸ್ಥೆಯ ಪ್ರವರ್ತಕರ, ಪಾಲುದಾರರ, ನಿರ್ದೇಶಕರ ಅಥವಾ ವ್ಯವಸ್ಥಾಪಕರ ಯಾ ಸದಸ್ಯರಿಗೆ ಸೇರಿದ ಚಿರ ಮತ್ತು ಚರ ಸೊತ್ತುಗಳನ್ನು ಸರಕಾರದ ವತಿಯಿಂದ ಜಪ್ತಿ ಮಾಡಿಕೊಳ್ಳುವ ಕುರಿತು ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಹೆಸರಿನಲ್ಲಿ ಸರ್ಕಾರದ ಕಂದಾಯ ಇಲಾಖೆ(ವಿಶೇಷ ಕೋಶ)ಯ ಅಧೀನ ಕಾರ್ಯದರ್ಶಿ(ಪ್ರಭಾರ) ಎಂ.ಸುಮಿತ್ರ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ.

ಪ್ರಸ್ತುತ ರೂ. 2,84,93,816 ಮಾರುಕಟ್ಟೆ ದರ(ಖರೀದಿ ದರ 6,88,01,939)ದ ಒಟ್ಟು 41 ಆಸ್ತಿಗಳನ್ನು ಜಪ್ತಿ ಮಾಡುವ ಕುರಿತು ಪ್ರಕಟಣೆಯಲ್ಲಿ ವಿವರ ನೀಡಲಾಗಿದೆ.ಸಂಸ್ಥೆಯ ಅಧ್ಯಕ್ಷ ಗಣೇಶ್ ಶರ್ಮ ಎಂಬವರ ಪುತ್ರ ಗಿರೀಶ್ ಕುಮಾರ್, ವ್ಯವಸ್ಥಾಪಕ ಕೇಶವ ಅಂಚನ್, ನಿರ್ದೇಶಕರಾಗಿದ್ದ ಪುತ್ತೂರು ಕಸಬಾದ ನೂಜಿ ದುಗ್ಗಣ್ಣ ನಾಯ್ಕ ಎಂಬವರ ಕೃಷ್ಣ ನಾಯ್ಕ, ಬಿ.ರಾಮ ಭಟ್ ಎಂಬವರ ಪುತ್ರ ಮುರಳೀಕೃಷ್ಣ ಹಸಂತಡ್ಕ, ಪಿ.ವಿಶ್ವನಾಥ ಎಂಬವರ ಪುತ್ರ ಯಾದವ ಕುಮಾರ್ ಅವರಿಗೆ ಸೇರಿರುವ ಆಸ್ತಿ ಜಪ್ತಿ ಮಾಡುವ ಕುರಿತು ಪ್ರಕಟಣೆ ಹೊರಡಿಸಲಾಗಿದೆ.

ಠೇವಣಿದಾರರಿಗೆ ವಂಚನೆಯಾಗಿದ್ದ ಕುರಿತು ಪೊಲೀಸ್ ದೂರು ಹಾಗೂ ರಾಜ್ಯ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಠೇವಣಿದಾರರಿಗೆ ಹಣ ಹಿಂತಿರುಗಿಸಲು ವಿಫಲವಾಗಿರುವ ಸಂಸ್ಥೆಯ ಆಸ್ತಿ ಜಪ್ತಿ ಮಾಡಲು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಕ್ಷಮ ಪ್ರಾಧಿಕಾರ ನಡೆಸಲು ಆದೇಶಿಸಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಸಂಸ್ಥೆಯ ಅಧ್ಯಕ್ಷ, ಕಾರ್ಯದರ್ಶಿ, ಪ್ರವರ್ತಕರ ಆಸ್ತಿ ಜಪ್ತಿಗೆ ಸರಕಾರದಿಂದ ಅಧಿಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News