ಮೂಡುಬೆಳ್ಳೆ ಆಂಡ್ರೂ ಮಾರ್ಟಿಸ್ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು ದೋಷಿ, ಜು.20ರಂದು ಶಿಕ್ಷೆಯ ಪ್ರಮಾಣ ಪ್ರಕಟ

Update: 2021-07-19 16:39 GMT
ರಾಜೇಂದ್ರ ನಾಯ್ಕ್ / ಸಂತೋಷ್ ಪೂಜಾರಿ

ಉಡುಪಿ, ಜು.19: ಎರಡು ವರ್ಷಗಳ ಹಿಂದೆ ಮೂಡುಬೆಳ್ಳೆ ಕಟ್ಟಿಂಗೇರಿ ಗ್ರಾಮದ ತಾಕಡಬೈಲು ಎಂಬಲ್ಲಿನ ಹಾಡಿಯಲ್ಲಿ ನಡೆದ ಆಂಡ್ರೂ ಮಾರ್ಟಿಸ್ (60) ಎಂಬವರ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ದೋಷಿಗಳೆಂದು ಘೋಷಿಸಿ ಆದೇಶ ನೀಡಿದೆ. ಇವರ ಶಿಕ್ಷೆಯ ಪ್ರಮಾಣವನ್ನು ಜು.20ರಂದು ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ಪೆರ್ಣಂಕಿಲದ ರಾಜೇಂದ್ರ ನಾಯ್ಕ್(49) ಹಾಗೂ ಮೂಡುಬೆಳ್ಳೆ ಕಟ್ಟಿಂಗೇರಿಯ ಸಂತೋಷ್ ಪೂಜಾರಿ(41) ಪ್ರಕರಣದ ಆರೋಪಿಗಳು. ಇವರು ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಆಂಡ್ರ್ಯೂ ಮಾರ್ಟಿಸ್ ಅವರನ್ನು 2019ರ ಜ.25 ರಂದು ಹಾಡಿಯಲ್ಲಿ ಕೈ ಕಾಲು ಕಟ್ಟಿ, ಕೋಲಿನಿಂದ ಹೊಡೆದು ನೈಲಾನ್ ಹಗ್ಗದಿಂದ ಕುತ್ತಿಗೆಗೆ ಕಟ್ಟಿ ಇನ್ನೊಂದು ತುದಿಯನ್ನು ಮರಕ್ಕೆ ಕಟ್ಟಿ ಎಳೆದು ಉಸಿರು ಕಟ್ಟಿಸಿ ಕೊಲೆ ಮಾಡಿರುವುದಾಗಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಆಗಿನ ಕಾಪು ವೃತ್ತ ನಿರೀಕ್ಷಕ ಮಹೇಶ್‌ಪ್ರಸಾದ್ ತನಿಖೆ ನಡೆಸಿದ್ದು, ನಂತರ ಅಂದಿನ ವೃತ್ತ ನಿರೀಕ್ಷಕ ಶಾಂತಾರಾಮ್ 2019 ಎ.8ರಂದು ದೋಷರೋಷಣಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 31 ಸಾಕ್ಷಿಗಳ ಪೈಕಿ ಪ್ರಮುಖ 12 ಸಾಕ್ಷಿಗಳಿಂದ ಹೇಳಿಕೆ ಮತ್ತು 29 ದಾಖಲೆಗಳನ್ನು ಗುರುತಿಸಲಾಗಿತ್ತು.

ಇದರಿಂದ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿ ಪ್ರಾಯ ಪಟ್ಟ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎಂ. ಆರೋಪಿಗಳನ್ನು ದೋಷಿ ಎಂದು ಘೋಷಿಸಿ ಆದೇಶ ನೀಡಿದರು. ಇವರಿಗೆ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಶಾಂತಿಬಾಯಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News