ಹಾಲಾಡಿ, ಸುನಿಲ್ ಗೆ ಸಚಿವ ಸ್ಥಾನ ದೊರೆಯಲಿ: ಶಾಸಕ ರಘುಪತಿ ಭಟ್

Update: 2021-07-19 16:49 GMT

ಉಡುಪಿ: ರಾಜ್ಯ ಸಚಿವ ಸಂಪುಟದ ವಿಸ್ತರಣೆ ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ಗೆ ಬಿಟ್ಟ ವಿಚಾರ. ನನಗೆ ನನ್ನ ಇತಿ ಮಿತಿ ಗೊತ್ತಿದೆ. ಈ ಅವಧಿಗೆ ನಾನು ಆಕಾಂಕ್ಷಿ ಅಲ್ಲ. ಸಿಗದೇ ಇರುವುದನ್ನು ಸಿಗಬೇಕೆಂದು ಆಸೆ ಪಟ್ಟು ಕೂತರೆ ಪ್ರಯೋಜನ ವಿಲ್ಲ. ಆದರೆ ಹಾಲಾಡಿ ಹಾಗೂ ಸುನಿಲ್ ಕುಮಾರ್ ಅವರಿಗೆ ಆದ್ಯತೆ ಮೇರೆಗೆ ಸಚಿವ ಸ್ಥಾನ ಸಿಗಬೇಕೆಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷದ ಹಿರಿಯರು. ಸಚ್ಚಾರಿತ್ರ್ಯ ಹಿನ್ನೆಲೆಯುಳ್ಳ ಇವರಿಗೆ ಸ್ಥಾನಮಾನ ಕೊಟ್ಟರೆ ಪಕ್ಷಕ್ಕೂ ಗೌರವ ಹೆಚ್ಚುತ್ತದೆ. ಸುನಿಲ್ ಕುಮಾರ್ ಹಿಂದುಳಿದ ವರ್ಗಗಳ ಜನಪ್ರತಿನಿಧಿ ಹಾಗೂ ಉತ್ತಮ ಸಂಘಟಕ. ಈ ಇಬ್ಬರಿಗೆ ಆದ್ಯತೆ ಮೇರೆಗೆ ಅವಕಾಶ ಕೊಟ್ಟರೆ ಪಕ್ಕೂ ಒಳ್ಳೆಯದಾಗುತ್ತದೆ ಎಂದರು.

ನಾನು ಆಕಾಂಕ್ಷಿ ಈಗಲ್ಲ. ಈ ಅವಯಲ್ಲಿ ಆ ನಿರೀಕ್ಷೆಯಲ್ಲೂ ಇಲ್ಲ. ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ಇರುವ 18 ಗಂಟೆಯೂ ಸಾಕಾಗುವುದಿಲ್ಲ. ನಾನು ಸಚಿವನಾಗಿದ್ದರೆ ಹಡಿಲು ಭೂಮಿ ಕೃಷಿಯಂತಹ ಇಂತಹ ದೊಡ್ಡ ಸಾಹಸಕ್ಕೆ ಕೈ ಹಾಕುವುದಕ್ಕೂ ಸಮಯ ಸಿಗುತ್ತಿರಲಿಲ್ಲ. ಶಾಸಕನಾಗಿ ನನಗೆ ಇಂತಹ ದೊಡ್ಡ ಕೆಲಸ ಮಾಡಬೇಕೆಂಬ ಆಸೆ ಇದೆ. ಆ ಬಳಿಕ ಸಚಿವ ಸ್ಥಾನಮಾನ ಬಗ್ಗೆ ಚಿಂತನೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಧ್ವನಿ ಎನ್ನಲಾದ ವೈರಲ್ ಆಡಿಯೋ ಬಗ್ಗೆ ರಾಜ್ಯಾಧ್ಯಕ್ಷರೇ ಆಡಿಯೋ ನನ್ನದಲ್ಲ ಎಂದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ತನಿಖೆ ನಡೆಸುವಂತೆ ಹೇಳಿದ್ದಾರೆ. ತನಿಖೆ ಆದ ಮೇಲೆ ಗೊತ್ತಾಗುತ್ತದೆ. ಅವರೇ ನಾನಲ್ಲ ಎಂದಾಕ್ಷಣ ನಾವೇ ನಳಿನ್ ಅವರ ಧ್ವನಿ ಅಲ್ಲ ಎಂದು ಭಾವಿಸಿದ್ದೇವೆ. ಒಂದು ವೇಳೆ ನಳಿನ್ ಕುಮಾರ್ ಕಟೀಲ್ ಇದು ನಮ್ಮ ಧ್ವನಿ ಎಂದಾಗ ಸಂಚಲನವಾಗುತ್ತಿತ್ತು ಎಂದು ಅವರು ಹೇಳಿದರು.

ಶಾಸಕಾಂಗ ಸಭೆಯ ಬಗ್ಗೆ ಇನ್ನೂ ಅಧಿಕೃತ ಆಹ್ವಾನ ಬಂದಿಲ್ಲ. ಆದರೆ ಶಾಸಕಾಂಗ ಸಭೆ ಕರೆಯಬೇಕೆಂಬ ಒತ್ತಾಯ ನಾನು ಮಾಡುತ್ತೇನೆ. ಇದು ನಾಯಕತ್ವದ ಬದಲಾವಣೆಗಲ್ಲ. ರಾಜ್ಯದ ಜನರ ಹಿತಾದೃಷ್ಟಿ, ಅಭಿವೃದ್ಧಿಗಾಗಿ ಆಡಳಿತ ಪಕ್ಷದ ಸಭೆ ಕರೆದು ಚರ್ಚಿಸುವುದು ಸಂಪ್ರದಾಯ. ಕಾನೂನಿನ ಯಾವುದೇ ತಿದ್ದುಪಡಿ, ಹೊಸ ಕಾನೂನು ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ನಿರ್ಣಯ ಮಾಡುವುದು ಒಳಿತು. ನಮಗೆ ಕೆಲವೊಂದು ವಿಚಾರವನ್ನು ಬಹಿರಂಗವಾಗಿ ಹೇಳುವುದಕ್ಕೆ ಆಗಲ್ಲ. ಶಾಸಕಾಂಗ ಸಭೆ ಇದಕ್ಕೆ ಸೂಕ್ತ ವೇದಿಕೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News